Hashtagintro

ಮುಂದಿನ ದಶಕದ ಆರ್ಥಿಕ ಬೆಳವಣಿಗೆಗೆ ಕೃತಕ ಬುದ್ಧಿಮತ್ತೆಯೇ ಪ್ರಮುಖ ಶಕ್ತಿ: ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್.ಡಿ. ಶಿಬುಲಾಲ್

ಮುಂದಿನ ದಶಕದ ಆರ್ಥಿಕ ಬೆಳವಣಿಗೆಗೆ ಕೃತಕ ಬುದ್ಧಿಮತ್ತೆಯೇ ಪ್ರಮುಖ ಶಕ್ತಿ: ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್.ಡಿ. ಶಿಬುಲಾಲ್

ಬೆಂಗಳೂರು, ಅಕ್ಟೋಬರ್ 18: ಮುಂದಿನ ಒಂದು ದಶಕದಲ್ಲಿ ದೇಶದ ಕೈಗಾರಿಕೆಗಳು ಮತ್ತು ಉದ್ಯಮ ರಂಗದ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆ ಅತ್ಯಂತ ನಿರ್ಣಾಯಕ ಹಾಗೂ ಪ್ರಮುಖ ಪಾತ್ರ ವಹಿಸಲಿದೆ ಎಂದು ಇನ್ಫೋಸಿಸ್ ಮತ್ತು ಆಕ್ಸಿಲರ್ ಸಹ-ಸಂಸ್ಥಾಪಕ ಎಸ್.ಡಿ. ಶಿಬುಲಾಲ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ ಆಯೋಜಿಸಿದ್ದ ‘ಇನ್ವೆಸ್ಟ್ ಇಂಡಿಯಾ ಶೃಂಗಸಭೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕಾರ್ಯತಂತ್ರದ ಹೂಡಿಕೆಗಳ ಮೂಲಕ ವಿಕಸಿತ ಭಾರತ ನಿರ್ಮಾಣ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದ ಹೊಸ ಅಲೆ ದೇಶದ ಭವಿಷ್ಯವನ್ನು ಬದಲಾಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೇ 89 ರಷ್ಟು ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದ ಬಳಕೆ

ಕಳೆದ ವರ್ಷ ದೇಶದಲ್ಲಿ ಆರಂಭವಾದ ನೂತನ ಸ್ಟಾರ್ಟ್‌ಅಪ್‌ಗಳ ಪೈಕಿ ಶೇಕಡಾ 89 ರಷ್ಟು ಸಂಸ್ಥೆಗಳು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದ ಮೇಲೆಯೇ ಹೆಚ್ಚು ಗಮನಹರಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದರು. ಭಾರತದಲ್ಲಿ ಉತ್ಪಾದನಾ ಕ್ಷೇತ್ರ, ಡಿಜಿಟಲ್ ಸಂಪರ್ಕ ಜಾಲ ಹಾಗೂ ಬಂಡವಾಳ ಹೂಡಿಕೆ ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಬಣ್ಣಿಸಿದ ಶಿಬುಲಾಲ್, ಸುಸ್ಥಿರ ಬೆಳವಣಿಗೆಗೆ ಉತ್ತಮ ಕಾರ್ಪೊರೇಟ್ ಆಡಳಿತ ಮತ್ತು ಪಾರದರ್ಶಕತೆ ಅತ್ಯಗತ್ಯ ಎಂಬುದನ್ನು ಒತ್ತಿ ಹೇಳಿದರು.

ಐಸಿಎಸ್ಐ ಸಂಸ್ಥೆ ಹೊರತಂದ ಸ್ಮರಣ ಸಂಚಿಕೆಯ ಬಿಡುಗಡೆ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕಸಿತ್ ಭಾರತ್) ಪರಿವರ್ತಿಸುವ ಗುರಿಯನ್ನು ಸಾಕಾರಗೊಳಿಸಲು ಸಮರ್ಥ ಆಡಳಿತ ಮತ್ತು ಕಂಪನಿಗಳ ದಕ್ಷ ಕಾರ್ಯನಿರ್ವಹಣೆ ಪ್ರಮುಖ ಬಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಐಸಿಎಸ್ಐ ಸಂಸ್ಥೆ ಹೊರತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ICSI ಬೆಂಗಳೂರು ಅಧ್ಯಕ್ಷ ಸಿಎಸ್ ವಿಶ್ವಾಸ ಹೆಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಕಾರ್ಪೊರೇಟ್ ವಲಯದ ಅಭಿವೃದ್ಧಿಗೆ ಹೂಡಿಕೆ ಮಾರ್ಗಸೂಚಿಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language