Hashtagintro

ಯಶ್ ವ್ಯಕ್ತಿತ್ವವ ಕೊಂಡಾಡಿದ ಸಾಯಿ ಪಲ್ಲವಿ, ನಟಿ ಹೇಳಿದ್ದೇನು?

ಯಶ್ ವ್ಯಕ್ತಿತ್ವವ ಕೊಂಡಾಡಿದ ಸಾಯಿ ಪಲ್ಲವಿ, ನಟಿ ಹೇಳಿದ್ದೇನು?

‘ರಾಮಾಯಣ’ ಸಿನಿಮಾದ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ. ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ನಿನ್ನೆಯಷ್ಟೆ (ಅಕ್ಟೋಬರ್ 19) ಹೈದರಾಬಾದ್​​ನಲ್ಲಿ ಚಿತ್ರತಂಡವು ಭಾರಿ ಅದ್ಧೂರಿಯಾಗಿ ಸಿನಿಮಾದ ಪ್ರೀ ರಿಲೀಸ್​​ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಸಿನಿಮಾದ ಎಲ್ಲ ಪ್ರಮುಖ ನಟ-ನಟಿಯರು ಮತ್ತು ತಂತ್ರಜ್ಞರು, ನಿರ್ಮಾಪಕರು ಭಾಗವಹಿಸಿದ್ದರು. ಹಲವರು ತಮ್ಮ ಸಹ-ನಟಿಯರ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಅದರಲ್ಲೂ ನಟಿ ಸಾಯಿ ಪಲ್ಲವಿ, ಯಶ್ ಅವರ ಬಗ್ಗೆ ಹೇಳಿದ ಮಾತುಗಳು ಬಹುವಾಗಿ ಗಮನ ಸೆಳೆದವು.

ಸಾಯಿ ಪಲ್ಲವಿ, ಯಶ್ ಅವರ ಬಗ್ಗೆ ಮಾತನಾಡಲು ಆರಂಭಿಸುತ್ತಿದ್ದಂತೆ ಜನ ಜೋರು ಚಪ್ಪಾಳೆ, ಶಿಳ್ಳೆಗಳಿಂದ ಖುಷಿ ವ್ಯಕ್ತಪಡಿಸಿದರು. ‘ನಾನು ಬೆಂಗಳೂರಿನಲ್ಲೇ ಈ ವಿಷಯ ಹೇಳಬೇಕು ಎಂದುಕೊಂಡಿದ್ದೆ ಆದರೆ ಆಗಲಿಲ್ಲ. ಯಶ್ ಬಹಳ ದೂರದೃಷ್ಟಿ ಮತ್ತು ವಿಶಾಲ ಆಲೋಚನೆ ಇರುವ ವ್ಯಕ್ತಿ. ಅವರು ಹಾಗೂ ನಿರ್ಮಾಪಕ ನಮಿತ್ ಅವರ ವಿಷನ್ ಒಂದೇ ರೀತಿಯದ್ದು. ಇಬ್ಬರಿಗೂ ದೊಡ್ಡದಾಗಿ ಸಾಧಿಸುವ ಆಸೆ. ಅವರು ಸಣ್ಣ ವಿಷಯಗಳನ್ನು ಯೋಚಿಸುವುದೇ ಇಲ್ಲ’ ಎಂದರು.

‘ನಾನು ಸೆಟ್​​​ನಲ್ಲಿ ಅವರೊಟ್ಟಿಗೆ ಕೆಲಸ ಮಾಡುವಾಗ ಕೇಳಿದೆ. ನೀವು ಬರೀ ದೊಡ್ಡ ಸಿನಿಮಾಗಳನ್ನು ಮಾತ್ರವೇ ಮಾಡುವುದು. ಸರಳವಾದ ಪ್ರೇಮಕತೆ ಅಂಥಹುಗಳನ್ನು ಮಾಡುವುದಿಲ್ಲವಾ ಎಂದು. ಅದಕ್ಕೆ ಅವರು ಹೇಳಿದ್ದು, ನಾನು ದೊಡ್ಡ ಸಿನಿಮಾಗಳನ್ನು ಮಾತ್ರವೇ ಮಾಡುತ್ತೇನೆ. ನನಗೆ ಅವಕಾಶ ಇದೆ. ಆ ಅವಕಾಶವನ್ನು ಬಳಸಿಕೊಂಡು, ಕನ್ನಡ ಚಿತ್ರರಂಗ, ದಕ್ಷಿಣ ಭಾರತ ಚಿತ್ರರಂಗ ಮತ್ತು ಭಾರತೀಯ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಇದನ್ನೂ ಓದಿ:‘ರಾಮಾಯಣ 2’ ಜತೆ ‘ಸ್ಪಿರಿಟ್’ ಸಿನಿಮಾ ಕ್ಲ್ಯಾಶ್: ಹೊಸ ರಿಲೀಸ್ ದಿನಾಂಕ ಘೋಷಣೆ

‘ನಾನು ಬೆಳೆಯುವುದು ಮಾತ್ರ ಅಲ್ಲ, ನಾನು ಎಲ್ಲಿಂದ ಬಂದಿದ್ದೀನೋ ಆ ಸ್ಥಳಕ್ಕೆ ಏನಾದರೂ ಮಾಡಬೇಕು, ಅದಕ್ಕೆ ಹೆಸರು ತಂದುಕೊಡಬೇಕು ಎಂಬುದು ಅವರ ಆಲೋಚನೆ. ಅವರಿಗೆ ಚಿತ್ರರಂಗದ ಬಗ್ಗೆ ಬಹಳ ಒಳ್ಳೆಯ ಆಲೋಚನೆ, ಉದ್ದೇಶ ಇದೆ. ಯಾರಿಗೂ ಸಹ ರಾವಣನ ಪಾತ್ರ ಮಾಡುವುದು ಇಷ್ಟ ಇರುವುದಿಲ್ಲ ಏಕೆಂದರೆ ಅದು ನೆಗೆಟಿವ್ ರೀತಿಯ ಪಾತ್ರ. ಸಿನಿಮಾ ನೋಡಿದವರು ರಾವಣನನ್ನು ದ್ವೇಷಿಸುತ್ತಾರೆ. ಆದರೆ ಯಶ್ ವಿಷಯದಲ್ಲಿ ಹಾಗಲ್ಲ, ರಾವಣನ ಪಾತ್ರ ಜನರಿಗೆ ಇಷ್ಟ ಆಗಬಾರದು, ಆದರೆ ಯಶ್ ಅವರು ಮಾಡಿದ ರೀತಿ ನೋಡಿದರೆ ನಮಗೆ ಇಷ್ಟ ಆಗಿಬಿಡುತ್ತದೆ’ ಎಂದರು ಸಾಯಿ ಪಲ್ಲವಿ.

‘ಸಿನಿಮಾದ ಚಿತ್ರೀಕರಣ ನಡೆಯುವಾಗ ನಾವು ಪಕ್ಕದ ಸೆಟ್​​ನಲ್ಲೇ ಇರುತ್ತಿದ್ದೆವು. ಆಗಾಗಿ ಯಶ್ ಅವರ ಚಿತ್ರೀಕರಣ ಮಾಡುತ್ತಿದ್ದ ಸ್ಥಳಕ್ಕೆ ಹೋದಾಗ ನಮಗೆ ಆಶ್ಚರ್ಯ ಆಗುತ್ತಿತ್ತು. ಅವರು ರಾವಣನ ಪಾತ್ರ ಮಾಡಲು ಹೇಗೆ ತಮ್ಮನ್ನು ತಾವು ತಯಾರಿ ಮಾಡಿಕೊಳ್ಳುತ್ತಿದ್ದರೆಂದರೆ, ತಾವು ಯಶ್ ಎಂಬುದನ್ನೇ ಅವರು ಮರೆತುಬಿಡುತ್ತಿದ್ದರು. ಸಂಪೂರ್ಣವಾಗಿ ರಾವಣ ಆಗಿ ಬಿಡುತ್ತಿದ್ದರು’ ಎಂದು ಸಾಯಿ ಪಲ್ಲವಿ ಹೇಳಿದರು. ಯಶ್ ಹಾಗೂ ಇನ್ನೂ ಕೆಲವು ಅದ್ಭುತ ನಟರುಗಳ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು. ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ.

 

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language