
2026-27ರ ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ಮತ್ತು ರೈಲ್ವೇಸ್ ತಂಡಗಳ ನಡುವಿನ ಎಲೈಟ್ ಗುಂಪಿನ ಪಂದ್ಯದಲ್ಲಿ ರಾಜಸ್ಥಾನದ ಇಬ್ಬರು ಬ್ಯಾಟರ್ಗಳು ದ್ವಿಶತಕದ ಅಂಚಿಗೆ ಬಂದು ಎಡವಿದ್ದಾರೆ. ರಾಜಸ್ಥಾನದ ಆರಂಭಿಕ ಬ್ಯಾಟರ್ ಸಚಿನ್ ಯಾದವ್ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರಣ್ ಲಂಬಾ ಇಬ್ಬರೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ, ದ್ವಿಶತಕ ಗಳಿಸಲು ಕೇವಲ ಆರು ರನ್ಗಳಿರುವಾಗ ಇಬ್ಬರೂ ವಿಕೆಟ್ ಒಪ್ಪಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಇಬ್ಬರೂ ತಲಾ 194 ರನ್ಗಳಿಗೆ ಔಟಾಗಿದ್ದಾರೆ!
194 ರನ್ಗಳಿಗೆ ವಿಕೆಟ್ ಪತನ
ಇನ್ನಿಂಗ್ಸ್ ಆರಂಭಿಸಿದ ಎಡಗೈ ಬ್ಯಾಟರ್ ಸಚಿನ್ ಯಾದವ್ ರೈಲ್ವೇಸ್ ಬೌಲರ್ಗಳನ್ನು ಕಾಡಿದರು. ಬರೋಬ್ಬರಿ 358 ಎಸೆತಗಳನ್ನು ಎದುರಿಸಿದ ಅವರು, 22 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳ ನೆರವಿನಿಂದ 194 ರನ್ ಸಿಡಿಸಿದರು. ದ್ವಿಶತಕದ ಸನಿಹದಲ್ಲಿದ್ದ ಸಚಿನ್ ಯಾದವ್, ವೈಯಕ್ತಿಕ ಮೊತ್ತ 194 ರನ್ಗಳಾಗಿದ್ದಾಗ ವಿಕೆಟ್ ಕೀಪರ್ ರಾಜ್ ಚೌಧರಿ ಅವರಿಂದ ಸ್ಟಂಪ್ ಔಟ್ ಆದರು. ಈ ಮೂಲಕ ಕೇವಲ ಆರು ರನ್ಗಳಿಂದ ಚೊಚ್ಚಲ ದ್ವಿಶತಕದ ಅವಕಾಶ ಕೈತಪ್ಪಿಸಿಕೊಂಡರು.
ಇತ್ತ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಬಲಗೈ ಬ್ಯಾಟರ್ ಕರಣ್ ಲಂಬಾ ಕೂಡ ತಮ್ಮ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು. 284 ಎಸೆತಗಳನ್ನು ಎದುರಿಸಿದ ಅವರು, 19 ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ಸಹಿತ 194 ರನ್ ಗಳಿಸಿದರು. ಆದರೆ, ಕರಣ್ ಲಂಬಾ ಕೂಡ ದ್ವಿಶತಕದ ಹೊಸ್ತಿಲಲ್ಲಿ ಎಡವಿದರು. ಕುನಾಲ್ ಯಾದವ್ ಬೌಲಿಂಗ್ನಲ್ಲಿ ಇಶಾನ್ ಗೋಯಲ್ಗೆ ಕ್ಯಾಚ್ ನೀಡಿ ಔಟಾದರು. ಹೀಗೆ ಇಬ್ಬರೂ ಬ್ಯಾಟರ್ಗಳು ಒಂದೇ ಮೊತ್ತಕ್ಕೆ ವಿಕೆಟ್ ಕಳೆದುಕೊಂಡಿದ್ದು, ಪಂದ್ಯದ ವಿಶೇಷ ಕಾಕತಾಳೀಯವಾಗಿ ಪರಿಣಮಿಸಿತು.
ರಣಜಿಯಲ್ಲಿ ಚಿನ್ಮಯ್ ಸುತಾರ್ ಇತಿಹಾಸ! ಅಜೇಯ 400 ರನ್ ಸಿಡಿಸಿದ ಮಿಜೋರಾಂ ಬ್ಯಾಟರ್
ರಾಜಸ್ಥಾನಕ್ಕೆ ಬೃಹತ್ ಮೊತ್ತದ ಬಲ
ಸಚಿನ್ ಯಾದವ್ ಮತ್ತು ಕರಣ್ ಲಂಬಾ ಅವರ ಸುದೀರ್ಘ ಇನ್ನಿಂಗ್ಸ್ಗಳ ನೆರವಿನಿಂದ ರಾಜಸ್ಥಾನ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಿತು. ತಂಡವು 136 ಓವರ್ಗಳಲ್ಲಿ 497 ರನ್ ಗಳಿಸಿತು. ಆದರೆ, ಈ ಇಬ್ಬರು ಬ್ಯಾಟರ್ಗಳನ್ನು ಹೊರತುಪಡಿಸಿದರೆ ರಾಜಸ್ಥಾನದ ಉಳಿದ ಆಟಗಾರರಿಂದ ದೊಡ್ಡ ಮೊತ್ತ ದಾಖಲಾಗಲಿಲ್ಲ. ಬೇರೆ ಯಾವುದೇ ಬ್ಯಾಟರ್ 30 ರನ್ಗಳ ಗಡಿಯನ್ನು ದಾಟಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Sports
