
ಬಿಗ್ಬಾಸ್ ಮನೆಯಲ್ಲಿ ಜೋಡಿಗಳು ಬಲು ಕಾಮನ್. ಪ್ರತಿ ಸೀಸನ್ನಲ್ಲೂ ಒಂದಲ್ಲ ಒಂದು ಜೋಡಿ ಸೃಷ್ಟಿಯಾಗಿಯೇ ಆಗುತ್ತದೆ. ಪ್ರೀತಿ-ಪ್ರೇಮದ ಚರ್ಚೆಗಳೂ ಸಹ ಆಗುತ್ತವೆ. ಹಿಂದಿನ ಕೆಲ ಸೀಸನ್ಗಳಲ್ಲಿ ಸ್ಪರ್ಧಿಗಳಾಗಿ ಮನೆಗೆ ಬಂದ ಕೆಲವರು ಜಂಟಿಯಾಗಿ ಹೊರಗೆ ಹೋಗಿದ್ದೂ ಸಹ ಇದೆ. ಈ ಸೀಸನ್ನಲ್ಲೂ ಸಹ ಜೋಡಿಗಳು ಕ್ರಿಯೇಟ್ ಆಗುತ್ತಿವೆ. ಅದು ಮಾತ್ರವೇ ಅಲ್ಲದೆ ಆಗಾಗ್ಗೆ ಜೋಡಿಗಳು ಬದಲಾವಣೆ ಸಹ ಆಗುತ್ತಿವೆ. ಯಶಸ್ ಮತ್ತು ಆಸಿಯಾ ನಡುವೆ ಒಳ್ಳೆಯ ಗೆಳೆತನ ಇದೆ. ಯಶಸ್ ಮತ್ತು ಸೌಂದರ್ಯಾ ನಡುವೆಯೂ ಸಹ ಒಳ್ಳೆಯ ಗೆಳೆತನ ಇದೆ. ಸೋನಿಕಾ ಮತ್ತು ತಾಂಡವ್ ನಡುವೆಯೂ ಗೆಳೆತನ ಶುರು ಆಗುತ್ತಿತ್ತು. ಆದರೆ ಈ ವಾರ ಮತ್ತೆ ಜೋಡಿ ಬದಲಾದಂತೆ ಕಾಣುತ್ತಿದೆ. ಈ ಬಗ್ಗೆ ವೀಕೆಂಡ್ ಎಪಿಸೋಡಿನಲ್ಲಿ ಖುದ್ದು ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ.
ವೀಕೆಂಡ್ ಎಪಿಸೋಡಿನಲ್ಲಿ ಸುದೀಪ್ ಅವರು ‘ಎಸ್ ಆರ್ ನೋ’ ಆಟವನ್ನು ಸ್ಪರ್ಧಿಗಳಿಂದ ಆಡಿಸಿದರು. ಈ ವೇಳೆ ಸುದೀಪ್ ಅವರು ‘ಧನುಶ್ ಅವರು ಲವ್ವಲ್ಲಿ ಬಿದ್ದು ಡಮ್ಮಿ ಆಬಿಟ್ಟಿದ್ದಾರೆ’ ಎಂದು ಕೇಳಿದರು. ಸುದೀಪ್ ಅವರ ಈ ಪ್ರಶ್ನೆಗೆ ಬಹುತೇಕರು ಎಸ್ ಎಂದೇ ಹೇಳಿದರು. ಧನುಶ್, ಸೋನಿಕಾ, ಗಗನ್ ಮಾತ್ರವೇ ನೋ ಎಂದಿದ್ದರು. ಕಾರಣ ಕೇಳಿದಾಗ ಯಶಸ್ ಹೇಳಿದ್ದು, ‘ಸೋನಿಕಾ ಅವರನ್ನು ಧನುಶ್ ಬಹಳ ಹಚ್ಚಿಕೊಂಡಿದ್ದಾರೆ. ಸದಾ ಅವರೊಟ್ಟಿಗೆ ಇರುತ್ತಾರೆ. ಸೋನಿಕಾ ಹೇಳಿದ ಮಾತನ್ನು ಶಿರಸಾವಹಿಸಿ ಪಾಲನೆ ಮಾಡುತ್ತಾರೆ. ಸೋನಿಕಾ ಜೊತೆ ಬೇರೆ ಯಾರಾದರೂ ಕ್ಲೋಸ್ ಆದರೆ ಅವರಿಗೆ ಅನ್ಕಂಫರ್ಟ್ ಆಗುತ್ತದೆ. ಸೋನಿಕಾ ಅವರು ಬೇರೆಯವರೊಟ್ಟಿಗೆ ಕ್ಲೋಸ್ ಆಗಿದ್ದಾಗ ಮಾತ್ರ ಅವರಿಗೆ ‘ಸಿಂಗಲ್ ಸಿಂಹ’ ಎಂದು ಅವರಿಗೆ ನೆನಪಾಗುತ್ತದೆ’ ಎಂದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ಲವ್ಸ್ಟೋರಿ? ಕೊನೆಗೂ ಸಿಕ್ತಾ ತಾಂಡವ್ಗೆ ಜೋಡಿ?
ಆ ಬಳಿಕ ಸೋನಿಕಾ ಅವರೇ ಮಾತನಾಡಿ, ‘ನನಗೆ ಎಲ್ಲರೊಟ್ಟಿಗೆ ಒಳ್ಳೆಯ ಬಾಂಡಿಂಗ್ ಇದೆ. ನನಗೆ ಇಲ್ಲಿ ಒಂದು ರೀತಿ ಕುಟುಂಬದ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಅವರಲ್ಲಿ ಧನುಶ್ ಸಹ ಒಬ್ಬರು. ಆದರೆ ಅವರಿಗೆ ಆ ರೀತಿ ಲವ್ವಲ್ಲಿ ಬಿದ್ದು ಡಮ್ಮಿ ಎಲ್ಲ ಆಗಿಲ್ಲ’ ಎಂದು ಗಂಭೀರವಾಗಿ ಹೇಳಿದರು. ಬಳಿಕ ಮಾತನಾಡಿದ ಧನುಶ್, ‘ನಾನು ನನ್ನ ಗಮನವನ್ನು ಎಲ್ಲಿಯೂ ಶಿಫ್ಟ್ ಮಾಡಿಲ್ಲ. ನನಗೆ ಜೀವನದಲ್ಲಿ ಸಾಕಷ್ಟು ಗುರಿಗಳಿವೆ. ನನ್ನ ಫೋಕಸ್ ಎಲ್ಲ ಆಟದ ಮೇಲೆಯೇ ಇದೆ’ ಎಂದು ಧನುಶ್ ಹೇಳಿದರು. ಆದರೆ ಅದನ್ನು ಖುದ್ದು ಸುದೀಪ್ ಅವರೇ ಒಪ್ಪಲಿಲ್ಲ.
ಅಸಲಿಗೆ ಸೋನಿಕಾ ಅವರು ತಾಂಡವ್ ಬಳಿ ತುಸು ಆಪ್ತವಾಗಿದ್ದಾರೆ. ಇತ್ತೀಚೆಗಷ್ಟೆ ತಾಂಡವ್ ಜೊತೆಗೆ ಮಾತನಾಡುತ್ತಾ, ‘ನೀವು ಎಲ್ಲಿರುತ್ತೀರೋ ಅಲ್ಲೆಲ್ಲ ನಗು ಇರುತ್ತದೆ. ನಿಮ್ಮನ್ನು ಮದುವೆ ಆಗುವ ಯುವತಿ ಲಕ್ಕಿ, ಒಳ್ಳೆಯ ಎಂಟರ್ಟೈಮ್ಮೆಂಟ್ ಮಾಡುತ್ತೀರ’ ಎಂದೆಲ್ಲ ಹೇಳಿದರು. ಅದಾದ ಬಳಿಕ ಅಲ್ಲಿದ್ದವರು ನೇರವಾಗಿಯೇ ಸೋನಿಕಾ ಹಾಗೂ ತಾಂಡವ್ ಮದುವೆ ಆಗಬೇಕು ಎಂದರು. ಈ ಮಾತಿಗೆ ಇಬ್ಬರೂ ನಕ್ಕರು. ಸುದೀಪ್ ಎದುರು ಸಹ ತಾಂಡವ್ ಅವರನ್ನು ಅವರ ಆಟವನ್ನು ಸೋನಿಕಾ ಕೊಂಡಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
