Hashtagintro

ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿ, ಸಹ ಪ್ರಯಾಣಿಕರು, ಸಿಬ್ಬಂದಿಯಿಂದ ತಪ್ಪಿದ ದುರಂತ

ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿ, ಸಹ ಪ್ರಯಾಣಿಕರು, ಸಿಬ್ಬಂದಿಯಿಂದ ತಪ್ಪಿದ ದುರಂತ

ಚಿಕಾಗೋ, ನವೆಂಬರ್ 26: ವಿಮಾನದಲ್ಲಿ ಪ್ರಯಾಣಿಕರೊಬ್ಬರ ವಿಚಿತ್ರ ವರ್ತನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆಯಲು ವ್ಯಕ್ತಿಯೊಬ್ಬ ಯತ್ನಿಸಿದ್ದು, ಇದನ್ನು ಕಂಡು ಸಹ ಪ್ರಯಾಣಿಕರು ಮತ್ತು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ವ್ಯಕ್ತಿಯನ್ನು ಹಿಡಿದು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ವಿಮಾನವನ್ನು ತುರ್ತಾಗಿ ಬೇರೆಡೆಗೆ ತಿರುಗಿಸಲಾಗಿದೆ.
ತಕ್ಷಣ ಎಚ್ಚೆತ್ತುಕೊಂಡ ವಿಮಾನ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಆತನನ್ನು ಹಿಡಿದು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ವಿಮಾನವನ್ನು ತುರ್ತಾಗಿ ಬೇರೆ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ. ಅಮೆರಿಕದಲ್ಲಿ ನಡೆದ ಈ ಘಟನೆ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕ

ಅಮೆರಿಕದ ಸ್ಯಾನ್ ಡಿಯಾಗೋದಿಂದ ಚಿಕಾಗೋಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್‌ನ ಫ್ಲೈಟ್ 1494ರಲ್ಲಿ ಈ ಘಟನೆ ನಡೆದಿದೆ. ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗಲೇ ಪ್ರಯಾಣಿಕನೊಬ್ಬ ತನ್ನ ಆಸನದಿಂದ ಎದ್ದು ವಿಮಾನದ ಮುಂಭಾಗಕ್ಕೆ ತೆರಳಿದ್ದಾನೆ. ಬಳಿಕ ತನ್ನ ನಿಗದಿತ ಆಸನಕ್ಕೆ ಮರಳುವಂತೆ ಸಿಬ್ಬಂದಿ ಸೂಚಿಸಿದರೂ ಅದನ್ನು ನಿರಾಕರಿಸಿದ್ದಾನೆ.

ಇಷ್ಟಕ್ಕೇ ನಿಲ್ಲದ ಆತ ವಿಮಾನದ ನಿರ್ಗಮನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಇದರಿಂದ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವಿಮಾನ ಸಿಬ್ಬಂದಿ ತಕ್ಷಣ ಇತರ ಪ್ರಯಾಣಿಕರ ನೆರವು ಪಡೆದು ಆತನನ್ನು ನಿಯಂತ್ರಿಸಲು ಮುಂದಾಗಿದ್ದಾರೆ.

ಪ್ರಯಾಣಿಕರ ಸಮಯಪ್ರಜ್ಞೆ, ಸಿಬ್ಬಂದಿಯ ಧೈರ್ಯ

ವ್ಯಕ್ತಿಯ ವರ್ತನೆ ಮಿತಿಮೀರಿದಾಗ ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ಮತ್ತು ಸಿಬ್ಬಂದಿ ಒಟ್ಟಾಗಿ ಆತನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ವ್ಯಕ್ತಿ ಅವರೊಂದಿಗೆ ವಾಗ್ವಾದ ನಡೆಸಿ ಪ್ರತಿರೋಧ ತೋರಿಸಿದ್ದಾನೆ. ಕೊನೆಗೆ ಎಲ್ಲರೂ ಸೇರಿ ಆತನನ್ನು ನೆಲಕ್ಕೆ ಒತ್ತಿ ಹಿಡಿದು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಶಬರಿಮಲೆ ಯಾತ್ರಿಕರಿಗೆ ಸಿಹಿ ಸುದ್ದಿ: ವಿಮಾನ ಕ್ಯಾಬಿನ್‌ನಲ್ಲಿ ‘ಇರುಮುಡಿ’ ಕೊಂಡೊಯ್ಯಲು ಕೇಂದ್ರ ಗ್ರೀನ್ ಸಿಗ್ನಲ್!

ಈ ಘಟನೆಯ ವಿಡಿಯೋವನ್ನು ವಿಮಾನದಲ್ಲಿದ್ದ ಸೀನ್ ಬೆನೆಟ್ ಎಂಬ ಪ್ರಯಾಣಿಕರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಮಾನವನ್ನು ವಶಪಡಿಸಿಕೊಳ್ಳಲು ಯಾರೋ ಪ್ರಯತ್ನಿಸಿದರು. ಆದರೆ ಹಲವು ಧೈರ್ಯಶಾಲಿ ಪ್ರಯಾಣಿಕರು ಆತನನ್ನು ನಿಯಂತ್ರಿಸಿದರು. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಫೀನಿಕ್ಸ್‌ನಲ್ಲಿ ತುರ್ತು ಭೂಸ್ಪರ್ಶ

ಘಟನೆಯ ಗಂಭೀರತೆಯನ್ನು ಗಮನಿಸಿದ ಪೈಲಟ್ ವಿಮಾನವನ್ನು ಅರಿಜೋನಾದ ಫೀನಿಕ್ಸ್‌ನಲ್ಲಿರುವ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದ್ದಾರೆ. ನವೆಂಬರ್ 26ರ ಬೆಳಗಿನ ಜಾವ ಸುಮಾರು 1 ಗಂಟೆಗೆ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ. ವಿಮಾನ ಇಳಿಯುತ್ತಿದ್ದಂತೆ ಫೀನಿಕ್ಸ್ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ವಿಮಾನವನ್ನು ತಲುಪಿದ್ದಾರೆ. ಬಳಿಕ ಅಶಿಸ್ತಿನ ವರ್ತನೆ ತೋರಿದ ಪ್ರಯಾಣಿಕನನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

ಮತ್ತೆ ಚಿಕಾಗೋಗೆ ಪ್ರಯಾಣ ಮುಂದುವರಿಸಿದ ವಿಮಾನ

ಪ್ರಯಾಣಿಕನನ್ನು ಕೆಳಗಿಳಿಸಿದ ಬಳಿಕ ಅಮೆರಿಕನ್ ಏರ್‌ಲೈನ್ಸ್ ವಿಮಾನ ತನ್ನ ಪ್ರಯಾಣವನ್ನು ಪುನರಾರಂಭಿಸಿದೆ. ಬಳಿಕ ಚಿಕಾಗೋದ ಒ’ಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆ.

ಈ ಕುರಿತು ಅಮೆರಿಕನ್ ಏರ್‌ಲೈನ್ಸ್ ಪ್ರತಿಕ್ರಿಯಿಸಿದ್ದು, ಪ್ರಯಾಣಿಕನೊಬ್ಬನ ಅಶಿಸ್ತಿನ ವರ್ತನೆಯಿಂದ ವಿಮಾನವನ್ನು ಫೀನಿಕ್ಸ್‌ಗೆ ತಿರುಗಿಸಲಾಗಿತ್ತು. ಅಲ್ಲಿನ ಕಾನೂನು ಜಾರಿ ಅಧಿಕಾರಿಗಳು ಆತನನ್ನು ವಿಮಾನದಿಂದ ಕೆಳಗಿಳಿಸಲು ನೆರವಾದರು. ನಂತರ ವಿಮಾನ ತನ್ನ ಗಮ್ಯಸ್ಥಾನಕ್ಕೆ ಪ್ರಯಾಣ ಮುಂದುವರಿಸಿತು ಎಂದು ತಿಳಿಸಿದೆ.

ಭಾರತ – ಮಾರ್ಚ್ 2026: ಬೆಂಗಳೂರಿನಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಲ್ಯಾಂಡಿಂಗ್‌ಗೂ ಮುನ್ನ ಎರಡು ಬಾರಿ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದು, ಸಿಬ್ಬಂದಿ ಆತನನ್ನು ತಡೆದಿದ್ದರು.
ಈ ವರ್ಷದ ಜೂನ್​ನಲ್ಲಿ ಪ್ಯೂರ್ಟೊ ರಿಕೊದಿಂದ ಚಿಕಾಗೋಗೆ ತೆರಳುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ್ದರಿಂದ ವಿಮಾನವನ್ನು ಮಿಯಾಮಿಗೆ ತಿರುಗಿಸಲಾಗಿತ್ತು.

ಪ್ರಯಾಣಿಕನ ಬಂಧನವಾಗಿಲ್ಲ, ಎಫ್‌ಬಿಐ ತನಿಖೆ
ಫೀನಿಕ್ಸ್ ಪೊಲೀಸರ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಪ್ರಯಾಣಿಕನನ್ನು ತಕ್ಷಣ ಬಂಧಿಸಲಾಗಿಲ್ಲ. ಆದರೆ ಈ ಕುರಿತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI)ಗೆ ಮಾಹಿತಿ ನೀಡಲಾಗಿದೆ. ಘಟನೆಯ ಹಿಂದಿನ ಕಾರಣ ಮತ್ತು ವ್ಯಕ್ತಿಯ ವರ್ತನೆಯ ಬಗ್ಗೆ ತನಿಖೆ ಮುಂದುವರಿದಿದೆ ಎಂದು ವರದಿಯಾಗಿದೆ. ವಿಮಾನ ಹಾರಾಟದ ನಡುವೆ ನಡೆದ ಈ ಘಟನೆಯಲ್ಲಿ ಸಹ ಪ್ರಯಾಣಿಕರು ಮತ್ತು ಸಿಬ್ಬಂದಿ ಸಮಯಪ್ರಜ್ಞೆ ತೋರಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language