
ನವದೆಹಲಿ, ನವೆಂಬರ್ 13: ವಿಶ್ವಾದ್ಯಂತ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ಹಠಾತ್ ತಾಂತ್ರಿಕ ದೋಷ ಉಂಟಾಗಿದ್ದು, ಭಾರತ ಸೇರಿದಂತೆ 74ಕ್ಕೂ ಹೆಚ್ಚು ದೇಶಗಳಲ್ಲಿ ಬಳಕೆದಾರರು ಬಾಧಿತರಾಗಿದ್ದಾರೆ. ಮೈಕ್ರೋಸಾಫ್ಟ್ 365 ಆಫೀಸ್ ಸ್ಯೂಟ್ನ ಔಟ್ಲುಕ್ (Outlook), ಟೀಮ್ಸ್ (Teams) ಮತ್ತು ವರ್ಡ್/ಎಕ್ಸೆಲ್ ಸೇರಿದಂತೆ ಪ್ರಮುಖ ಕ್ಲೌಡ್ ಆಧಾರಿತ ಅಪ್ಲಿಕೇಶನ್ಗಳನ್ನು ಬಳಸುವಾಗ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ.
ಮೈಕ್ರೋಸಾಫ್ಟ್ ಸ್ಥಗಿತವು ಗುರುವಾರ ಸಂಜೆ 6 ಗಂಟೆಗೆ (ಜಿಎಂಟಿ ಸಮಯ) ಆರಂಭವಾಗಿದ್ದು. ಭಾರತೀಯ ಕಾಲಮಾನದಲ್ಲಿ ಗುರುವಾರ ರಾತ್ರಿ 11:30ಕ್ಕೆ ಮೈಕ್ರೋಸಾಫ್ಟ್ ಔಟೇಜ್ ಶುರುವಾಗಿದೆ. 22 ಗಂಟೆಗಳಾದರೂ ಮೈಕ್ರೋಸಾಫ್ಟ್ಗೆ ಈ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಕೆಲ ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ ಈ ಸಮಸ್ಯೆ ಸರಿಪಡಿಸಲು 48 ಗಂಟೆ ಕಾಲಾವಕಾಶ ಕೋರಿದೆ ಎನ್ನಲಾಗಿದೆ.
ಇದನ್ನೂ ಓದಿ: ಎನ್ವಿಡಿಯಾ ಸಿಇಒ ಸ್ಥಾನಕ್ಕೆ ಹಲವರ ಹೆಸರು ಪರಿಗಣನೆಯಲ್ಲಿ; ಭಾರತ ಮೂಲದ ಮೂವರ ಹೆಸರೂ ಪಟ್ಟಿಯಲ್ಲಿ
ಮೈಕ್ರೋಸಾಫ್ಟ್ 365 ಸಮಸ್ಯೆಗೆ ಕಾರಣವೇನು?
ಸರ್ವರ್ನಲ್ಲಿ ಉಂಟಾದ ಏರಿಳಿತ ಮತ್ತು ನೆಟ್ವರ್ಕ್ ಸಮಸ್ಯೆಯು ಮೈಕ್ರೋಸಾಫ್ಟ್ 365 ಆಫೀಸ್ ಸ್ಯೂಟ್ನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂಬುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಒಂದು ಕಾನ್ಫಿಗರೇಶನ್ ಅಪ್ಡೇಟ್ನಿಂದಾಗಿ ಈ ವ್ಯತ್ಯಯ ಆಗಿರಬಹುದು ಎನ್ನಲಾಗಿದೆ.
ಯಾವುದೇ ಹ್ಯಾಕಿಂಗ್, ಅಥವಾ ವೈರಸ್ ಸ್ಥಾಪನೆಯು ಈ ಸಮಸ್ಯೆ ಹಿಂದೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಮೈಕ್ರೋಸಾಫ್ಟ್ ಸಂಸ್ಥೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಾಂತ್ರಿಕ ದೋಷವನ್ನು ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದು, ಹಂತ ಹಂತವಾಗಿ ಸೇವೆಗಳನ್ನು ಮರುಸ್ಥಾಪಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಟೀಮ್ಸ್ ಮೀಟಿಂಗ್ಸ್, ಚಾಟ್ಸ್ ಸರ್ವಿಸ್ಗಳು ಸರಿಗೊಂಡಿವೆ. ಔಟ್ಲುಕ್ ಇಮೇಲ್ ಸರ್ವಿಸ್ನ ಸಮಸ್ಯೆ ಉಳಿದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಟಾಟಾ ಗ್ರೂಪ್ನ ಆರು ಕಂಪನಿಗಳ ನಾಯಕತ್ವ ತ್ಯಜಿಸಿದ ನೋಯೆಲ್; ಗ್ರೂಪ್ನಲ್ಲಿ ಅವರ ಹಿಡಿತಕ್ಕೇನು ಆಗಿಲ್ಲ ಧಕ್ಕೆ
ಸರ್ಕಾರಿ ಚಟುವಟಿಕೆಗಳ ಮೇಲೂ ಪರಿಣಾಮ
ಮೈಕ್ರೋಸಾಫ್ಟ್ 365 ಸ್ಯೂಟ್ ಹಾಕಿಸಿಕೊಂಡಿರುವ ಪ್ರತಿಯೊಬ್ಬರೂ ಕೂಡ ಬಾಧಿತರಾಗಿದ್ದಾರೆ. ಆಸ್ಟ್ರೇಲಿಯಾ, ಬ್ರಿಟನ್ ಮೊದಲಾದ ಹಲವು ದೇಶಗಳ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಮೊದಲಾದವು ಈ ಆಫೀಸ್ ಸ್ಯೂಟ್ ಹೊಂದಿವೆ. ಇಮೇಲ್ ಸೇರಿದಂತೆ ಸಂವಹನ ಸೇವೆಗಳು ಸ್ಥಗಿತಗೊಂಡು ಸಮಸ್ಯೆಯಾಗಿದೆ.
ಭಾರತದ ಇಂಡಿಗೋ, ಆಕಾಶ ಏರ್ಲೈನ್ಸ್ ಸಂಸ್ಥೆಗಳ ಇಮೇಲ್ ಸಪೋರ್ಟ್ ಸರ್ವಿಸ್ಗಳಿಗೆ ತೊಂದರೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
