
ಬಳ್ಳಾರಿ, ಅ.27: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ವಿಶ್ವವಿಖ್ಯಾತ ಹಂಪಿ ಪ್ರವಾಸಿ ಸ್ಥಳಕ್ಕೆ ಯುನೆಸ್ಕೋ ತಂಡ ಭೇಟಿ ನೀಡಿದೆ. ಕಳೆದ ಮೂರು ದಿನಗಳಿಂದ ಹಂಪಿಯಲ್ಲಿ ಪ್ರವಾಸ ಕೈಗೊಂಡಿರುವ ಈ ತಂಡ, ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠಲ ಮಂದಿರ, ಸಂಗೀತ ಮಂಟಪ, ಮಹಾನವಮಿ ದಿಬ್ಬ, ಕಲ್ಲಿನ ರಥ ಸೇರಿದಂತೆ ಹಲವು ಐತಿಹಾಸಿಕ ತಾಣಗಳನ್ನು ಪರಿಶೀಲಿಸಿದೆ. ಯುನೆಸ್ಕೋ ತಂಡವು ಹಂಪಿಯ ಅಭಿವೃದ್ಧಿ, ಸಂರಕ್ಷಣೆ ಹಾಗೂ ಇಲ್ಲಿರುವ ಮೂಲಭೂತ ಸೌಕರ್ಯಗಳ ಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಪ್ರವಾಸಿಗರು ಮತ್ತು ಮಾರ್ಗದರ್ಶಕರಿಂದ ಶೌಚಾಲಯ, ಕುಡಿಯುವ ನೀರು, ರಸ್ತೆ ಹಾಗೂ ವಾಹನ ವ್ಯವಸ್ಥೆಗಳ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿವೆ. 1986ರಲ್ಲಿ ವಿಶ್ವ ಪಾರಂಪರಿಕ ತಾಣವಾಗಿ ಸೇರ್ಪಡೆಗೊಂಡ ಹಂಪಿಯನ್ನು ಹೇಗೆ ಸಂರಕ್ಷಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು ಎಂಬ ನಿಟ್ಟಿನಲ್ಲಿ ತಂಡವು ಅಧ್ಯಯನ ನಡೆಸಿದೆ. ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪ್ರವಾಸೋದ್ಯಮ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ್ದು, ಮುಂದಿನ ಪೀಳಿಗೆಗೆ ಹಂಪಿಯ ಇತಿಹಾಸವನ್ನು ಉಳಿಸುವ ಮಹತ್ವವನ್ನು ಒತ್ತಿಹೇಳಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
