Hashtagintro

ವೈಭವ್ ದ್ವಿಶತಕದ ಸುನಾಮಿ; 86 ಎಸೆತಗಳಲ್ಲಿ 250 ರನ್ ಬೆನ್ನಟ್ಟಿ ಗೆದ್ದ ಭಾರತ

ವೈಭವ್ ದ್ವಿಶತಕದ ಸುನಾಮಿ; 86 ಎಸೆತಗಳಲ್ಲಿ 250 ರನ್ ಬೆನ್ನಟ್ಟಿ ಗೆದ್ದ ಭಾರತ

ಭಾರತ ಎ ಮತ್ತು ಯುಎಇ ನಡುವೆ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯದಲ್ಲಿ ರನ್‌ಗಳ ಸುರಿಮಳೆಯೇ ಹರಿಯಿತು. ಯುವ ಆಟಗಾರ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಸಾಕ್ಷಿಯಾದ ಈ ಪಂದ್ಯದಲ್ಲಿ ಭಾರತ ಎ ತಂಡ ಸುಲಭ ಜಯ ದಾಖಲಿಸಿತು. ಈ ಭರ್ಜರಿ ಗೆಲುವಿನೊಂದಿಗೆ ಭಾರತ ಎ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಎ ತಂಡ ಕೇವಲ 14.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು. ವಿಶೇಷವೆಂದರೆ ಭಾರತ ಗಳಿಸಿದ ಒಟ್ಟು 254 ರನ್‌ಗಳಲ್ಲಿ ವೈಭವ್ ಒಬ್ಬರೇ 204 ರನ್ ಕೊಡುಗೆ ನೀಡಿದರು. ಉಳಿದ ಬ್ಯಾಟರ್‌ಗಳು ಸೇರಿ ಕೇವಲ 50 ರನ್​ಗಳ ಕಾಣಿಕೆ ನೀಡಿದರು.

ಹರ್ಭೀತ್ ಸಿಂಗ್ ಶತಕದ ಹೋರಾಟ

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಯುಎಇ ತಂಡವು ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 20 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಹರ್ಭೀತ್ ಸಿಂಗ್ ಭಾಟಿಯಾ ಆಸರೆಯಾದರು. ಭಾರತದ ಹರ್ಷಿತ್ ರಾಣಾ ಅವರು ಆರ್ಯನ್ಶ್ ಶರ್ಮಾ ಅವರನ್ನು 2 ರನ್‌ಗಳಿಗೆ ಔಟ್ ಮಾಡಿದರೆ, ಅರ್ಷದ್ ಖಾನ್ ಅನ್ಶ್ ಟಂಡನ್ ಅವರನ್ನು 8 ರನ್‌ಗಳಿಗೆ ಪೆವಿಲಿಯನ್‌ಗೆ ಕಳುಹಿಸಿದರು. ಆದರೆ ಹರ್ಭೀತ್ ಸಿಂಗ್ ಭಾಟಿಯಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 144 ಎಸೆತಗಳಲ್ಲಿ 130 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿದ್ದವು. ಮುಹಮ್ಮದ್ ಶಹಜಾದ್, 25 ರನ್ ಗಳಿಸಿದ ಈಥನ್ ಡಿಸೋಜಾ ಹಾಗೂ ಅಜೇಯ 36 ರನ್ ಗಳಿಸಿದ ನಾಯಕ ಬಸಿಲ್ ಹಮೀದ್ ಅವರೊಂದಿಗೆ ಪ್ರಮುಖ ಜೊತೆಯಾಟವಾಡಿದರು.

ಭಾರತದ ಪರ ಅರ್ಷದ್ ಖಾನ್ ಅದ್ಭುತ ಬೌಲಿಂಗ್ ಪ್ರದರ್ಶಿಸಿ 43 ರನ್ ನೀಡಿ 4 ವಿಕೆಟ್ ಕಬಳಿಸಿದರು. 47ನೇ ಓವರ್‌ನಲ್ಲಿ ಸತತ ಎರಡು ವಿಕೆಟ್ ಪಡೆದು ಯುಎಇ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ಯುಎಇ ತಂಡವು 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು.

ಭಾರತಕ್ಕೆ ಭರ್ಜರಿ ಆರಂಭ

ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಭರ್ಜರಿ ಆರಂಭವೇ ಸಿಕ್ಕಿತು. ಮೊದಲ ಓವರ್‌ನಲ್ಲಿ ಆರಂಭದ ಎರಡು ಎಸೆತಗಳಲ್ಲಿ ರನ್ ಗಳಿಸಲು ವಿಫಲರಾದ ವೈಭವ್, ನಂತರ ಸತತ ಮೂರು ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದರು. ಮೊದಲ ಆರು ಎಸೆತಗಳಿಂದಲೇ 19 ರನ್ ಕಲೆಹಾಕಿದರು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಅಷ್ಟರಲ್ಲೇ 8 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನೊಂದೆಡೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 5 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರೂ ವೈಭವ್ ಅಬ್ಬರ ಮಾತ್ರ ನಿಲ್ಲಲಿಲ್ಲ.

5 ಓವರ್‌ಗಳಲ್ಲೇ 100 ರನ್ ಪೂರ್ಣ

ಐದನೇ ಓವರ್‌ನಲ್ಲಿ ಸ್ಪಿನ್ನರ್ ಸಿಮ್ರನ್‌ಜೀತ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಮನಬಂದಂತೆ ಬ್ಯಾಟ್ ಬೀಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ಕೇವಲ 5 ಓವರ್‌ಗಳಲ್ಲೇ 100 ರನ್ ಪೂರೈಸಿತು. ಇದು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಂಡವೊಂದು ದಾಖಲಿಸಿದ ಅತ್ಯಂತ ವೇಗದ ಶತಕವಾಗಿದೆ. ಆರನೇ ಓವರ್‌ನಲ್ಲಿ ಪ್ರಭ್‌ಸಿಮ್ರನ್ ಸಿಂಗ್ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಇದರಿಂದ ವೈಭವ್ ಆಟಕ್ಕೆ ಯಾವುದೇ ಅಡ್ಡಿಯಾಗಲಿಲ್ಲ.

15 ಸಿಕ್ಸರ್, 28 ಎಸೆತಗಳಲ್ಲೇ ಶತಕ: ವೈಭವ್ ಅಬ್ಬರಕ್ಕೆ ಕ್ರಿಕೆಟ್ ಜಗತ್ತು ಬೆರಗು

52 ಎಸೆತಗಳಲ್ಲಿ ದ್ವಿಶತಕ

ಮುಂದಿನ ಓವರ್‌ಗಳಲ್ಲಿ ವೈಭವ್ ರನ್‌ಗಳ ಮಳೆ ಸುರಿಸಿದರು. ಕೇವಲ 28 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಏಳನೇ ಓವರ್‌ನಲ್ಲೇ ಬರೋಬ್ಬರಿ 30 ರನ್ ಚಚ್ಚಿದರು. ಬಳಿಕ ಕೇವಲ 40 ಎಸೆತಗಳಲ್ಲಿ 150 ರನ್‌ಗಳ ಗಡಿ ದಾಟಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ 150 ರನ್ ಗಳಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಈ ಹಿಂದೆ 59 ಎಸೆತಗಳಲ್ಲಿ 150 ರನ್ ಗಳಿಸಿದ್ದು ಅವರದೇ ದಾಖಲೆಯಾಗಿತ್ತು.

ಇಷ್ಟಕ್ಕೇ ನಿಲ್ಲದ ವೈಭವ್ ಮತ್ತೊಂದು ವಿಶ್ವದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು. ಯುಎಇ ನಾಯಕ ಬಸಿಲ್ ಹಮೀದ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕ ದಾಖಲಿಸಿದರು. 2024ರಲ್ಲಿ ಫೋರ್ಡ್ ಟ್ರೋಫಿಯಲ್ಲಿ ಕ್ಯಾಂಟರ್‌ಬರಿ ಪರ ಒಟಾಗೊ ವಿರುದ್ಧ ಚಾಡ್ ಬೋವ್ಸ್ 103 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಇದೀಗ ವೈಭವ್ ಆ ದಾಖಲೆಯನ್ನು ಅಳಿಸಿಹಾಕಿದ್ದಾರೆ.

15ನೇ ಓವರ್‌ನಲ್ಲಿ ತಂಡಕ್ಕೆ ಗೆಲುವು

ದ್ವಿಶತಕದ ಬಳಿಕ ಎದುರಿಸಿದ ಮುಂದಿನ ಎಸೆತದಲ್ಲೇ ಮತ್ತೊಂದು ದೊಡ್ಡ ಹೊಡೆತಕ್ಕೆ ಕೈಹಾಕಿದ ವೈಭವ್, ಯುಎಇ ಆಟಗಾರ ಆರ್ಯನ್ಶ್ ಶರ್ಮಾ ಹಿಡಿದ ಅದ್ಭುತ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು. 53 ಎಸೆತಗಳಲ್ಲಿ 28 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 204 ರನ್ ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ವೈಭವ್ ಔಟಾದಾಗ ಭಾರತ ಗೆಲುವಿಗೆ ಇನ್ನೂ 5 ರನ್‌ಗಳ ಅಗತ್ಯವಿತ್ತು. ಬಳಿಕ ರಿಂಕು ಸಿಂಗ್ ಸಿಕ್ಸರ್ ಬಾರಿಸಿ 15ನೇ ಓವರ್‌ನಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language