Hashtagintro

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಫೋಟೋ ಎಡಿಟ್ ಪೋಸ್ಟ್: ರಾಯಚೂರಿನಲ್ಲಿ ಆರೋಪಿ ಪಂಪೇಶ್ ಬಂಧನ

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಫೋಟೋ ಎಡಿಟ್ ಪೋಸ್ಟ್: ರಾಯಚೂರಿನಲ್ಲಿ ಆರೋಪಿ ಪಂಪೇಶ್ ಬಂಧನ

ರಾಯಚೂರು, ಅ.20: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ರಾಯಚೂರು ಜಿಲ್ಲೆಯ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಿಂಧನೂರು ತಾಲೂಕಿನ ಹುಡಾ ಗ್ರಾಮದ ನಿವಾಸಿ ಪಂಪೇಶ್ ಎಂದು ಗುರುತಿಸಲಾಗಿದೆ.

ಆರೋಪಿ ಪಂಪೇಶ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಫೋಟೋಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಖವನ್ನು ಎಡಿಟ್ (Morphing) ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅವಹೇಳನ ಉಂಟುಮಾಡಿದ್ದ ಎನ್ನಲಾಗಿದೆ. ಈ ಕುರಿತು ರಾಮಣ್ಣ ಗೋನ್ವಾರ್ ಎಂಬುವವರು ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿ ಪಂಪೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.

ಆರ್‌ಎಸ್‌ಎಸ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ:

ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸುವ ಪಥಸಂಚಲನಕ್ಕೆ ಪೊಲೀಸ್ ಠಾಣೆಗೆ ಕೇವಲ ‘ಮಾಹಿತಿ’ ನೀಡುವುದು ಅಥವಾ ‘ಸಹಕರಿಸುವಂತೆ’ ಕೋರುವುದು ಸರಿಯಾದ ಕ್ರಮವಲ್ಲ ಎಂದು ಗೃಹ ಇಲಾಖೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಂದು ಸಂಸ್ಥೆಗೂ ಅನ್ವಯಿಸುವ ನಿಯಮಾವಳಿಗಳಂತೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ವಿವರಗಳನ್ನು ಒದಗಿಸಿ ಅಧಿಕೃತ ಅನುಮತಿಗಾಗಿ ಕಾಯಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಾಳೆ (ಅಕ್ಟೋಬರ್ 21) ವಿಜಯದಶಮಿಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಪಥಸಂಚಲನ ನಡೆಸುವ ಕುರಿತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ನೀಡಿರುವ ಪತ್ರವನ್ನು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನನ್ನ ಪ್ರೀತಿಯ ಸ್ವಯಂಸೇವಕರೇ: RSS ವಿಜಯದಶಮಿ ಪಥಸಂಚಲನದ ಬಗ್ಗೆ ಖರ್ಗೆ ಖಡಕ್ ಸೂಚನೆ

ವಿಪಕ್ಷಗಳಿಂದ ರಾಜಕೀಯ ಪ್ರೇರಿತ ಆರೋಪ:

ರಾಜ್ಯದಲ್ಲಿ ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಮ್ಮಿಕೊಳ್ಳುವ ಪಥಸಂಚಲನಗಳಿಗೆ ಸಂಬಂಧಿಸಿದಂತೆ ಪೊಲೀಸ್ ಅನುಮತಿ ಕಡ್ಡಾಯಗೊಳಿಸುವ ವಿಚಾರವು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಕ್ರಮವನ್ನು ಸಮರ್ಥಿಸುವವರು ಸಾರ್ವಜನಿಕ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನಿಯಮಗಳ ಪಾಲನೆ ಅನಿವಾರ್ಯ ಎಂದು ವಾದಿಸುತ್ತಿದ್ದರೆ, ವಿರೋಧ ಪಕ್ಷದ ನಾಯಕರು ಮತ್ತು ಸಂಘಟನೆಯ ಬೆಂಬಲಿಗರು ಸರ್ಕಾರದ ಧೋರಣೆಯನ್ನು ‘ರಾಜಕೀಯ ದುರುದ್ದೇಶ’ ಹಾಗೂ ‘ಅಬ್ಸೆಷನ್’ ಎಂದು ತೀವ್ರವಾಗಿ ಟೀಕಿಸುತ್ತಿದ್ದಾರೆ. ಲಕ್ಷಾಂತರ ಸ್ವಯಂಸೇವಕರು ಏಕಕಾಲದಲ್ಲಿ ರಸ್ತೆಗಿಳಿದು ಪಥಸಂಚಲನ ನಡೆಸುವಾಗ ಸಂಚಾರ ನಿರ್ವಹಣೆ, ಭದ್ರತೆ, ಸಿಬ್ಬಂದಿ ನಿಯೋಜನೆ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಗಾಗಿ ಕೇವಲ ‘ಮಾಹಿತಿ’ ನೀಡುವುದು ಸಾಕಾಗುವುದಿಲ್ಲ. ಪ್ರತಿಯೊಂದು ಸಂಘಟನೆಗೂ ಅನ್ವಯಿಸುವಂತೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯ ಎಂಬುದು ಸರ್ಕಾರದ ನಿಲುವು.

ಹಿಂದೆಯೂ ಯಾವುದೇ ಅಹಿತಕರ ಘಟನೆಗಳು ನಡೆಯದೆ ನೂರಾರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿರುವಾಗ, ಈಗ ಅನುಮತಿ ಹಾಗೂ ನೋಂದಣಿಯ ಹೆಸರಿನಲ್ಲಿ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಟೀಕಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ರಾಜಕೀಯ ಲಾಭಕ್ಕಾಗಿ ಆರ್‌ಎಸ್‌ಎಸ್ ವಿಷಯವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂಬುದು ವಿಪಕ್ಷಗಳ ಆರೋಪ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language