
ಹಾಸನ, ನವೆಂಬರ್ 1: ಐತಿಹಾಸಿಕ ಹಾಗೂ ವಿಶ್ವಪ್ರಸಿದ್ಧ ಹಾಸನಾಂಬಾ ದೇವಾಲಯದ ದರ್ಶನೋತ್ಸವದ ಸಂಭ್ರಮ ಕಳೆಗಟ್ಟಿದ್ದು, ಪ್ರತಿದಿನ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆುತ್ತಿದ್ದಾರೆ. ಈ ನಡುವೆ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿ ಭಕ್ತರಿಗೆ ಕಲ್ಪಿಸಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ವೇಳೆ ಸಚಿವರು ಸರದಿ ಸಾಲುಗಳನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ, ಅಲ್ಲೇ ಪಕ್ಕದಲ್ಲೇ ಇದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ಬಳಿಗೆ ಸಚಿವ ಕೆ.ಎಂ. ಶಿವಲಿಂಗೇಗೌಡ ಆಗಮಿಸಿದರು. ಆ ವೇಳೆ ವೇದಿಕೆಯಲ್ಲಿ ಕನ್ನಡದ ಖ್ಯಾತ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡು ಮೊಳಗುತ್ತಿತ್ತು. ಹಾಡಿಗೆ ಮನಸೋತ ಸಚಿವರು, ಎಲ್ಲರ ಎದುರಲ್ಲೇ ವೇದಿಕೆ ಮೇಲೆ ಭರ್ಜರಿ ಸ್ಟೆಪ್ ಹಾಕಿ ಕುಣಿದರು.
ಸಚಿವರ ಈ ಉತ್ಸಾಹಭರಿತ ನೃತ್ಯವನ್ನು ಕಂಡ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಸಹಸ್ರಾರು ಭಕ್ತರು ಹಾಗೂ ಸಾರ್ವಜನಿಕರು ಹರ್ಷೋದ್ಘಾರಗೈದರು. ಅಲ್ಲದೆ, ಸಚಿವರ ಸರಳತೆ ಹಾಗೂ ಡ್ಯಾನ್ಸ್ ಕಂಡು ಕೆಲಕಾಲ ಶಿಳ್ಳೆ ಮತ್ತು ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸಿದರು. ಸಚಿವರ ಈ ಡ್ಯಾನ್ಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
