Hashtagintro

ಸಿಬಿಎಫ್‌ಸಿ ಮಾಹಿತಿ ಸೋರಿಕೆ: 500ಕ್ಕೂ ಹೆಚ್ಚು ಸಿನಿಮಾಗಳ ಸ್ಕ್ರಿಪ್ಟ್, ಸೆನ್ಸಾರ್ ದಾಖಲೆ ಬಯಲು

ಸಿಬಿಎಫ್‌ಸಿ ಮಾಹಿತಿ ಸೋರಿಕೆ: 500ಕ್ಕೂ ಹೆಚ್ಚು ಸಿನಿಮಾಗಳ ಸ್ಕ್ರಿಪ್ಟ್, ಸೆನ್ಸಾರ್ ದಾಖಲೆ ಬಯಲು

ಸಿನಿಮಾಗಳಿಗೆ ಸೆನ್ಸಾರ್ ಪ್ರಮಾಣಪತ್ರ ನೀಡುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಸೈಬರ್ ಭದ್ರತಾ ಲೋಪಕ್ಕೆ ಒಳಗಾಗಿದ್ದು, ಬೃಹತ್ ಪ್ರಮಾಣದ ಡೇಟಾ ಲೀಕ್ ಆಗಿದೆ. 500ಕ್ಕೂ ಹೆಚ್ಚು ಸಿನಿಮಾಗಳ ಶೂಟಿಂಗ್ ಸ್ಕ್ರಿಪ್ಟ್‌ಗಳು, ಸೆನ್ಸಾರ್ ಕಟ್ ಆದೇಶಗಳು ಮತ್ತು ನಿರ್ಮಾಪಕರು ಸಲ್ಲಿಸಿದ್ದ ಅತ್ಯಂತ ಗೌಪ್ಯ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ಚಿತ್ರರಂಗದಲ್ಲಿ ಸಿನಿಮಾಗಳು ಬಿಡುಗಡೆಯಾಗುವ ಮುನ್ನ ಅವುಗಳ ಕಥೆ ಅಥವಾ ಪ್ರಮುಖ ದಾಖಲೆಗಳು ಬಹಿರಂಗವಾದರೆ ನಿರ್ಮಾಪಕರಿಗೆ ಮತ್ತು ವಿತರಕರಿಗೆ ಭಾರಿ ನಷ್ಟ ಉಂಟಾಗುವ ಆತಂಕ ಎದುರಾಗಿದೆ.

ಸಿನಿಮಾಗಳ ಪ್ರಮಾಣೀಕರಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲು ಸಿಬಿಎಫ್‌ಸಿ ಸುಮಾರು ಒಂದು ದಶಕದ ಹಿಂದೆ ‘ಇ-ಸಿನೆಪ್ರಮಾಣ್’ ಎಂಬ ಆನ್‌ಲೈನ್ ಪೋರ್ಟಲ್ ಪ್ರಾರಂಭಿಸಿತ್ತು. ನಿರ್ಮಾಪಕರು ಈ ಪೋರ್ಟಲ್ ಮೂಲಕವೇ ದಾಖಲೆಗಳನ್ನು ಸಲ್ಲಿಸುತ್ತಾರೆ. ‘ದಿ ಹಿಂದೂ’ ವರದಿಯ ಪ್ರಕಾರ, ಈ ಪೋರ್ಟಲ್ ಮೂಲಕವೇ ಗೌಪ್ಯ ದಾಖಲೆಗಳನ್ನು ಸೋರಿಕೆ ಮಾಡಲಾಗಿದೆ.

ಸೋರಿಕೆಯಾದ ಫೈಲ್‌ಗಳಲ್ಲಿ ಸಿನಿಮಾಗಳು ಇರಲಿಲ್ಲ; ಬದಲಿಗೆ ಸಿನಿಮಾಗಳ ಶೂಟಿಂಗ್ ಸ್ಕ್ರಿಪ್ಟ್‌ಗಳು, ಕಟ್ ಆದೇಶಗಳು ಹಾಗೂ ಸೆನ್ಸಾರ್‌ಗಾಗಿ ಸಲ್ಲಿಸಲಾಗಿದ್ದ ಇತರ ದಾಖಲೆಗಳಿದ್ದವು. ‘ಇಂಟರ್ನೆಟ್ ಆರ್ಕೈವ್’ ಮೂಲಕ ಈ ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಲಭ್ಯವಿತ್ತು. ವಿಷಯ ಬೆಳಕಿಗೆ ಬಂದ ತಕ್ಷಣವೇ ಆ ಫೈಲ್‌ಗಳನ್ನು ತೆರವುಗೊಳಿಸಲಾಗಿದೆ.

ಈ ಡೇಟಾ ಲೀಕ್ ಕೇವಲ ಸಿನಿಮಾದ ಕಥೆ ಅಥವಾ ಸ್ಕ್ರಿಪ್ಟ್‌ಗೆ ಮಾತ್ರ ಸೀಮಿತವಾಗಿಲ್ಲ. ವಿದೇಶಿ ಸಿನಿಮಾಗಳ ಸ್ಥಳೀಯ ವಿತರಣಾ ಒಪ್ಪಂದಗಳ ದಾಖಲೆಗಳೂ ಸೋರಿಕೆಯಾಗಿವೆ. ಬ್ರೆಜಿಲಿಯನ್ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶಿತ ಸಿನಿಮಾ ‘ದಿ ಸೀಕ್ರೆಟ್ ಏಜೆಂಟ್’ ಹಾಗೂ ಹಾಲಿವುಡ್ ಸಿನಿಮಾ ‘ಗುಡ್ ಲಕ್, ಹ್ಯಾವ್ ಫನ್, ಡೋಂಟ್ ಡೈ’ ಸೇರಿದಂತೆ ಹಲವು ಸಿನಿಮಾಗಳ ಲೈಸೆನ್ಸಿಂಗ್ ಫೀಸ್, ಆದಾಯ ಹಂಚಿಕೆ ಒಪ್ಪಂದ ಮತ್ತು ಹಕ್ಕುಗಳ ವಿವರಗಳು ಬಯಲಾಗಿವೆ.

ಇದನ್ನೂ ಓದಿ: ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ

ಈ ಭದ್ರತಾ ಲೋಪದ ಕುರಿತು ಸಿಬಿಎಫ್‌ಸಿ ತನಿಖೆ ಆರಂಭಿಸಿದ್ದು, ಪೋರ್ಟಲ್‌ನ ಸೆಕ್ಯೂರಿಟಿ ಆಡಿಟ್ ನಡೆಸುತ್ತಿದೆ. ಅಕ್ಟೋಬರ್ 4ರಂದು ಪೋರ್ಟಲ್ ಕೆಲವು ಗಂಟೆಗಳ ಕಾಲ ಬಂದ್ ಆದ ನಂತರ ಫೈಲ್ ಅಪ್‌ಲೋಡ್ ಮಾಡುವುದು ನಿಂತಿದೆ ಎಂದು ಸಿಬಿಎಫ್‌ಸಿ ತಿಳಿಸಿದೆ. ಯಾವುದೇ ನಿರ್ದಿಷ್ಟ ನಿರ್ಮಾಪಕರ ಖಾತೆ ಹ್ಯಾಕ್ ಆಗಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language