Hashtagintro

ಸಿಮ್ ಇಲ್ಲದ ಫೋನ್‌ಗೆ ₹15 ಸಾವಿರ! ವೈ-ಫೈ ಮೂಲಕ ವಿಡಿಯೋ ಅಪ್‌ಲೋಡ್, ಸಿಸಿಬಿ ತನಿಖೆಯಲ್ಲಿ ಸ್ಟಿಂಗ್ ರಹಸ್ಯ ಬಯಲು

ಸಿಮ್ ಇಲ್ಲದ ಫೋನ್‌ಗೆ ₹15 ಸಾವಿರ! ವೈ-ಫೈ ಮೂಲಕ ವಿಡಿಯೋ ಅಪ್‌ಲೋಡ್, ಸಿಸಿಬಿ ತನಿಖೆಯಲ್ಲಿ ಸ್ಟಿಂಗ್ ರಹಸ್ಯ ಬಯಲು

ಬೆಂಗಳೂರು, ಅಕ್ಟೋಬರ್ 24: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತ ಸ್ಟಿಂಗ್ ವಿಡಿಯೋ ಪ್ರಕರಣ ಸಂಬಂಧ ಇದೀಗ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ‘ಕರ್ನಾಟಕ ಹನಿಟ್ರ್ಯಾಪ್’ ಎಂಬ ಯೂಟ್ಯೂಬ್ ಖಾತೆಯ ಮೂಲಕ ವಿಡಿಯೋ ಅಪ್‌ಲೋಡ್ ಮಾಡಿದ್ದಾನೆ ಎಂಬ ಆರೋಪ ಹೊತ್ತಿರುವ ದೆಹಲಿ ಮೂಲದ ರಿತೇಶ್ ಪಾಂಡೆ, ಇದಕ್ಕಾಗಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದ ಎಂಬುದು ಸಿಸಿಬಿ ತನಿಖೆಯಲ್ಲಿ ತಿಳಿದುಬಂದಿದೆ. ಮೊಬೈಲ್ ಖರೀದಿಯಿಂದ ಹಿಡಿದು ವಿಡಿಯೋ ಅಪ್‌ಲೋಡ್ ಮಾಡುವವರೆಗಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿರುವುದು ತಿಳಿದುಬಂದಿದೆ.

ಕರೋಲ್ ಬಾಗ್​ನಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದ ರಿತೇಶ್ ಪಾಂಡೆ

ರಿತೇಶ್ ಪಾಂಡೆ ಬಂಧನದ ಬೆನ್ನಲ್ಲೇ ಸ್ಟಿಂಗ್ ಪ್ರಕರಣದಲ್ಲಿ ಆತನ ಪಾತ್ರದ ಕುರಿತು ಅನೇಕ ಮಾಹಿತಿಗಳು ಬಯಲಾಗಿವೆ. ಸಿಮ್ ಕಾರ್ಡ್ ಬಳಸದೆ ವೈ-ಫೈ ಮೂಲಕ ಇಂಟರ್ನೆಟ್ ಸಂಪರ್ಕಿಸಬಹುದಾದ ಮೊಬೈಲ್‌ಗಾಗಿ ಆತ ಹುಡುಕಾಟ ನಡೆಸಿದ್ದ. ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿ 15 ಸಾವಿರ ರೂಪಾಯಿ ನೀಡಿ ಮೊಬೈಲ್ ಖರೀದಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಸಿಸಿಬಿ ಮೂಲಗಳ ಪ್ರಕಾರ, ರಿತೇಶ್ ಪಾಂಡೆ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಗೆ ತೆರಳಿ ಮೊಬೈಲ್ ಖರೀದಿಸಿದ್ದ. ಆತನಿಗೆ ಮೊದಲೇ ತಲುಪಿದ್ದ ಪೆನ್‌ಡ್ರೈವ್ ಅನ್ನು ಒಟಿಜಿ ಕನೆಕ್ಟರ್ ಮೂಲಕ ಮೊಬೈಲ್‌ಗೆ ಜೋಡಿಸಿ ಅದರಲ್ಲಿದ್ದ ವಿಡಿಯೋವನ್ನು ವೀಕ್ಷಿಸಿದ್ದ.

ಬಳಿಕ ಅದೇ ಮೊಬೈಲ್‌ಗೆ ವೈ-ಫೈ ಮೂಲಕ ಇಂಟರ್ನೆಟ್ ಸಂಪರ್ಕ ಕಲ್ಪಿಸಿ, ‘ಕರ್ನಾಟಕ ಹನಿಟ್ರ್ಯಾಪ್’ ಹೆಸರಿನಲ್ಲಿ ಯೂಟ್ಯೂಬ್ ಖಾತೆ ತೆರೆದಿದ್ದ. ಆ ಖಾತೆಯ ಮೂಲಕವೇ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದ ಎಂಬುದಕ್ಕೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಮೊಬೈಲ್ ಅಂಗಡಿಯ ಬಿಲ್, ಸಿಸಿಟಿವಿ ದೃಶ್ಯ ಪರಿಶೀಲನೆ

ರಿತೇಶ್ ಪಾಂಡೆ ಮೊಬೈಲ್ ಖರೀದಿಸಿದ್ದ ಅಂಗಡಿಯ ಬಿಲ್ ಹಾಗೂ ಅಲ್ಲಿನ ಸಿಸಿಟಿವಿ ದೃಶ್ಯಗಳನ್ನೂ ಪೊಲೀಸರು ಪರಿಶೀಲನೆಗೆ ಒಳಪಡಿಸಿದ್ದಾರೆ. ಮೊಬೈಲ್ ಖರೀದಿಯ ವಿವರಗಳು ಮತ್ತು ದೃಶ್ಯಾವಳಿಗಳ ಆಧಾರದಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ ವ್ಯಕ್ತಿಯ ಚಟುವಟಿಕೆಗಳನ್ನು ಪತ್ತೆಹಚ್ಚಲು ಸಿಸಿಬಿ ತನಿಖೆ ನಡೆಸಿದೆ.

ಆದರೆ, ವಿಡಿಯೋ ಅಪ್‌ಲೋಡ್ ಮಾಡುವಂತೆ ರಿತೇಶ್‌ಗೆ ಸೂಚನೆ ನೀಡಿದವರು ಯಾರು, ಪೆನ್‌ಡ್ರೈವ್ ಅನ್ನು ಆತನಿಗೆ ತಲುಪಿಸಿದವರು ಯಾರು, ಈ ಕೆಲಸಕ್ಕಾಗಿ ಹಣ ನೀಡಿದವರು ಯಾರು ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ವಿಡಿಯೋ ಅಪ್‌ಲೋಡ್ ಮಾಡಲು 50 ಸಾವಿರ ರೂಪಾಯಿ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಅದೂ ಸಹ ತನಿಖೆಯ ಪ್ರಮುಖ ಅಂಶವಾಗಿದೆ. ಈ ಹಣದ ವ್ಯವಹಾರದ ಹಿಂದೆ ಯಾರಿದ್ದಾರೆ ಎಂಬುದು ಮುಂದಿನ ತನಿಖೆಯಿಂದ ತಿಳಿಯಬೇಕಿದೆ.

ಷರತ್ತುಬದ್ಧ ಜಾಮೀನು ನೀಡಿದ ನ್ಯಾಯಾಲಯ

ಬಂಧನದ ಬಳಿಕ ಸಿಸಿಬಿ ಪೊಲೀಸರು ರಿತೇಶ್ ಪಾಂಡೆಯನ್ನು 66ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಅನ್ವಯವಾಗಿರುವ ಸೆಕ್ಷನ್‌ಗಳ ಅಡಿಯಲ್ಲಿ ಏಳು ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ವಿಧಿಸಲು ಅವಕಾಶವಿದೆ ಹಾಗೂ ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗೆ ನಿರೀಕ್ಷಣಾ ಜಾಮೀನು ದೊರೆತಿದೆ ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ರಿತೇಶ್ ಪರ ವಕೀಲರು ಜಾಮೀನು ಕೋರಿ ಮನವಿ ಸಲ್ಲಿಸಿದ್ದರು.

ವಾದ ಆಲಿಸಿದ ನ್ಯಾಯಾಲಯವು ರಿತೇಶ್ ಪಾಂಡೆಗೆ ಷರತ್ತುಬದ್ಧ ಜಾಮೀನು ನೀಡಿದೆ. ಸಿಸಿಬಿ ಪೊಲೀಸರ ತನಿಖೆಗೆ ಸಹಕರಿಸಬೇಕು, ನಗರ ಬಿಟ್ಟು ತೆರಳುವಾಗ ಪೊಲೀಸರಿಗೆ ಮಾಹಿತಿ ನೀಡಬೇಕು ಹಾಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದಾಗ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

ವಿಡಿಯೋದಲ್ಲಿರುವ ಮಹಿಳೆಯ ಹೇಳಿಕೆ ದಾಖಲು

ಇನ್ನೊಂದೆಡೆ, ಸ್ಟಿಂಗ್ ವಿಡಿಯೋದಲ್ಲಿರುವ ಮಹಿಳೆಯನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ವಿಡಿಯೋವನ್ನು ರೆಕಾರ್ಡ್ ಮಾಡಿದವರು ಯಾರು ಎಂಬ ಪ್ರಶ್ನೆಯ ಜೊತೆಗೆ, ಅದನ್ನು ಅಪ್‌ಲೋಡ್ ಮಾಡಿಸಿದವರು ಯಾರು, ಇದರ ಹಿಂದೆ ಹಣಕಾಸಿನ ವ್ಯವಹಾರ ನಡೆದಿದೆಯೇ ಮತ್ತು ಈ ಕಾರ್ಯಾಚರಣೆಯ ಹಿಂದಿರುವವರು ಯಾರು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸೆಕೆಂಡ್ ಹ್ಯಾಂಡ್ ಫೋನ್ ರಹಸ್ಯ ಬಹಿರಂಗ

ವಿಡಿಯೋ ಅಪ್‌ಲೋಡ್ ಮಾಡಿದ ವ್ಯಕ್ತಿಯ ಪತ್ತೆ ಹಾಗೂ ಮೊಬೈಲ್ ಖರೀದಿಗೆ ಸಂಬಂಧಿಸಿದ ಮಾಹಿತಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಆದರೆ, ಈ ಕಾರ್ಯಾಚರಣೆಯ ಹಿಂದಿನ ಸೂತ್ರಧಾರರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂದಿನ ತನಿಖೆಯಲ್ಲಿ ಹೊರಬರುವ ಮಾಹಿತಿಯ ಮೇಲೆ ಪ್ರಕರಣದ ಮುಂದಿನ ಬೆಳವಣಿಗೆಗಳು ಅವಲಂಬಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language