Hashtagintro

‘ಸುಬ್ಬ ನಿಮ್ಮಲೊಬ್ಬ’: ನವೀನ್ ಸಜ್ಜು ಚಿತ್ರಕ್ಕೆ ವಿನಯ್ ಗುರೂಜಿ ಆಶೀರ್ವಾದ

‘ಸುಬ್ಬ ನಿಮ್ಮಲೊಬ್ಬ’: ನವೀನ್ ಸಜ್ಜು ಚಿತ್ರಕ್ಕೆ ವಿನಯ್ ಗುರೂಜಿ ಆಶೀರ್ವಾದ

ವಿಶಿಷ್ಟ ಗಾಯನ ಶೈಲಿಯ ಮೂಲಕ ಗುರುತಿಸಿಕೊಂಡಿರುವ ನವೀನ್ ಸಜ್ಜು ಅವರು 2026ರ ಆರಂಭದಲ್ಲಿ ‘ಲೋ ನವೀನ’ ಸಿನಿಮಾ ಮೂಲಕ ಹೀರೋ ಆಗಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದರು. ಆ ಸಿನಿಮಾದಲ್ಲಿ ಅವರು ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನವೀನ್ ಸಜ್ಜು ಅವರು ‘ಸುಬ್ಬ ನಿಮ್ಮಲೊಬ್ಬ’ ಎಂಬ ಹೊಸ ಸಿನಿಮಾ ಮೂಲಕ ಮತ್ತೆ ಹೀರೋ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಆ್ಯಕ್ಷನ್ ಹೀರೋ ಆಗಿ ಮನರಂಜನೆ ನೀಡಲಿದ್ದಾರೆ.

ಇತ್ತೀಚೆಗೆ ಶ್ರೀ ವಿನಯ್ ಗುರೂಜಿ ಅವರ ಅಮೃತಹಸ್ತದಿಂದ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಗುರೂಜಿ ಅವರ ಆಶೀರ್ವಾದ ಹಾಗೂ ಶುಭ ಹಾರೈಕೆಗಳೊಂದಿಗೆ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದೆ. ಮೊದಲ ಹಂತದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಸಿನಿಮಾದಲ್ಲಿ ನವೀನ್ ಸಜ್ಜು ಅವರಿಗೆ ಜೋಡಿಯಾಗಿ ಚಿಕ್ಕಮಗಳೂರು ಮೂಲದ ನಟಿ ಶ್ರುತಿ ಗೌಡ ಅಭಿನಯಿಸುತ್ತಿದ್ದಾರೆ.

‘ಯುನಿಕ್ ಪ್ರೊಡಕ್ಷನ್ಸ್ ಎಲ್‌ಎಲ್‌ಪಿ’ ಮೂಲಕ ಎಸ್.ಟಿ. ಉದಯ್ ಕುಮಾರ್ ಮತ್ತು ಅರುಣ್ ಕುಮಾರ್ ಸಿ. ಅವರು ‘ಸುಬ್ಬ ನಿಮ್ಮಲೊಬ್ಬ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿನಯ್ ಕೃಷ್ಣ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಥೆಗೆ ತಕ್ಕಂತೆ ಬೆಂಗಳೂರು, ಚೆನ್ನೈ, ಮೈಸೂರಿನಲ್ಲಿ ಈ ಸಿನಿಮಾಗೆ ಶೂಟಿಂಗ್ ನಡೆಯಲಿದೆ.

ಇದು ಸಾಮಾನ್ಯ ಲಾರಿ ಚಾಲಕನ ಅಸಾಮಾನ್ಯ ಹೋರಾಟದ ಕಥೆ ಎಂದು ಚಿತ್ರತಂಡ ಹೇಳಿದೆ. ಸಾಮಾನ್ಯ ಮಧ್ಯಮ ವರ್ಗದ ಕನ್ನಡಿಗ ಲಾರಿ ಚಾಲಕನ ಬದುಕಿನ ಸುತ್ತ ಹೆಣೆಯಲಾದ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ಪ್ರತಿದಿನದ ಬದುಕಿನ ಸವಾಲುಗಳು, ಜೀವನದಲ್ಲಿ ಎದುರಾಗುವ ಏರಿಳಿತಗಳು, ಕನಸುಗಳನ್ನು ನನಸಾಗಿಸಿಕೊಳ್ಳುವ ಹಂಬಲ ಮತ್ತು ಬದುಕಿಗಾಗಿ ನಡೆಸುವ ಹೋರಾಟಗಳೇ ಈ ಸಿನಿಮಾದ ಹೈಲೈಟ್ಸ್ ಆಗಿರಲಿವೆ.

ಇದನ್ನೂ ಓದಿ: ಕೋಮಾ ಸ್ಥಿತಿಯಲ್ಲೂ ನವೀನ್​ ಸಜ್ಜು ಹಾಡು ಕೇಳಿ ಅತ್ತಿದ್ದ ದುನಿಯಾ ವಿಜಯ್​ ತಾಯಿ; ವಿಡಿಯೋ ಹಂಚಿಕೊಂಡ ಗಾಯಕ

ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ನವೀನ್ ಸಜ್ಜು ಅವರನ್ನು ಆ್ಯಕ್ಷನ್ ಹೀರೋ ಅವತಾರದಲ್ಲಿ ನೋಡಲು ಅವರ ಅಭಿಮಾನಿಗಳಿಗೆ ಕೌತುಕ ಮೂಡಿದೆ. ನವೀನ್ ಸಜ್ಜು ಮತ್ತು ಶ್ರುತಿ ಗೌಡ ಅವರ ಹೊಸ ಕಾಂಬಿನೇಷನ್ ಬಗ್ಗೆಯೂ ನಿರೀಕ್ಷೆ ಮೂಡಿದೆ. ಇನ್ನುಳಿದ ಕಲಾವಿದರು ಹಾಗೂ ತಂತ್ರಜ್ಞರ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language