Hashtagintro

ಸೊಳ್ಳೆ ಕಚ್ಚಿದ ತಕ್ಷಣ ಮೈಯಲ್ಲಿ ತುರಿಕೆ ಕಾಣಿಸಿಕೊಳ್ಳೋದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ತಿಳಿಯಿರಿ

ಸೊಳ್ಳೆ ಕಚ್ಚಿದ ತಕ್ಷಣ ಮೈಯಲ್ಲಿ ತುರಿಕೆ ಕಾಣಿಸಿಕೊಳ್ಳೋದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ತಿಳಿಯಿರಿ

ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು (mosquitos) ಮನೆಯೊಳಗೆ ಪ್ರವೇಶಿಸಲು ಆರಂಭಿಸುತ್ತವೆ. ಎಷ್ಟೇ ಜಾಗ್ರತೆ ವಹಿಸಿದರೂ ಸೊಳ್ಳೆಗಳು ಹುಡುಕಿ ಹುಡುಕಿ ಬಂದು ನಮ್ಮನ್ನೇ ಕಚ್ಚುತ್ತವೆ. ಇವು ಗಾತ್ರದಲ್ಲಿ ಸಣ್ಣದಾಗಿದ್ದರೂ, ಇವುಗಳು ಕಚ್ಚಿದಾಗ ಉಂಟಾಗುವ ಪರಿಣಾಮ ಅಷ್ಟಿಷ್ಟಲ್ಲ. ಹೌದು ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೆ ಇವುಗಳ ಕಡಿತದಿಂದ ತುರಿಕೆ, ದದ್ದುಗಳು ಉಂಟಾಗುತ್ತವೆ. ಅಷ್ಟಕ್ಕೂ ಸೊಳ್ಳೆ ಕಚ್ಚಿದ ತಕ್ಷಣವೇ ಮೈಯಲ್ಲಿ ತುರಿಕೆ ಕಾಣಿಸಿಕೊಳ್ಳುವುದೇಕೆ ಎಂಬುದನ್ನು ಎಂದಾದರೂ ನೀವು ಯೋಚಿಸಿದ್ದೀರಾ? ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂಬುದರ ಪೂರ್ಣ ವಿವರ ಇಲ್ಲಿದೆ.

ಸೊಳ್ಳೆ ಕಚ್ಚಿದಾಗ ತುರಿಕೆ ಉಂಟಾಗುವುದೇಕೆ?

ಮನುಷ್ಯರ ರಕ್ತ ಹೀರುವ ಸಲುವಾಗಿ ಹೆಣ್ಣು ಸೊಳ್ಳೆಗಳು, ರಕ್ತ ಹೀರುವ ಮೊದಲು, ತಮ್ಮ ಲಾಲಾರಸವನ್ನು ಮನುಷ್ಯನ ಚರ್ಮಕ್ಕೆ ಬಿಡುಗಡೆ ಮಾಡುತ್ತದೆ. ಈ ಲಾಲಾರಸವು ವಿಶೇಷ ಹೆಪ್ಪುರೋಧಕ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಅವುಗಳ ಕಾರ್ಯವೆಂದರೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದು, ಇದರಿಂದ ಸೊಳ್ಳೆಯು  ರಕ್ತವನ್ನು ಸುಲಭವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ಹೀರಿಕೊಳ್ಳುತ್ತದೆ. ಈ ಲಾಲಾರಸ ತುರಿಕೆ ಕಾಣಿಸಿಕೊಳ್ಳಲು ಕಾರಣ.

ಇನ್ನೊಂದು ಕಾರಣವೆಂದರೆ ಸೊಳ್ಳೆಯ ಲಾಲಾರಸವು ನಮ್ಮ ದೇಹದ ಸಂಪರ್ಕಕ್ಕೆ ಬಂದ ತಕ್ಷಣ, ನಮ್ಮ ರೋಗನಿರೋಧಕ ವ್ಯವಸ್ಥೆಯು ತಕ್ಷಣವೇ ಎಚ್ಚರಗೊಳ್ಳುತ್ತದೆ.  ದೇಹಕ್ಕೆ ಯಾವುದೋ ಹಾನಿಕಾರಕ ವಿಷಯ ಪ್ರವೇಶಿಸಿದೆ ಎಂಬುದನ್ನು ಗ್ರಹಿಸುತ್ತದೆ. ಈ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, ನಮ್ಮ ರೋಗನಿರೋಧಕ ವ್ಯವಸ್ಥೆಯು ಹಿಸ್ಟಮೈನ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಈ ಹಿಸ್ಟಮೈನ್ ವಾಸ್ತವವಾಗಿ ತುರಿಕೆ ಮತ್ತು ಊತಕ್ಕೆ ಕಾರಣವಾಗಿದೆ. ಹಿಸ್ಟಮೈನ್ ರಾಸಾಯನಿಕ ಸೊಳ್ಳೆ ಕಚ್ಚಿದ ಜಾಗದ ಸುತ್ತಲಿನ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಅಲ್ಲಿ ಊತವನ್ನು ಉಂಟುಮಾಡುತ್ತದೆ. ಹಿಸ್ಟಮೈನ್ ಅಲ್ಲಿನ ನರಗಳನ್ನು ಉತ್ತೇಜಿಸುತ್ತದೆ, ಇದು ಆ ಪ್ರದೇಶದಲ್ಲಿ ಏನೋ ತಪ್ಪಾಗಿದೆ ಎಂದು ಮೆದುಳಿಗೆ ನಿರಂತರ ಸಂಕೇತವನ್ನು ಕಳುಹಿಸುತ್ತದೆ, ಈ ಸಂಕೇತದಿಂದಾಗಿ ಸೊಳ್ಳೆ ಕಚ್ಚಿದ ಜಾಗದಲ್ಲಿ ತೀವ್ರವಾದ ತುರಿಕೆ ಕಾಣಿಸಿಕೊಳ್ಳುತ್ತದೆ.

ಸೊಳ್ಳೆ ಕಡಿತದ ಸಂದರ್ಭದಲ್ಲಿ  ಏನು ಮಾಡಬಾರದು?

ಸೊಳ್ಳೆ ಕಚ್ಚಿದ ಸ್ಥಳವನ್ನು ಎಂದಿಗೂ ಬಲವಾಗಿ ಕೆರೆದುಕೊಳ್ಳಬೇಡಿ. ಕೆರೆದುಕೊಳ್ಳುವುದರಿಂದ ಚರ್ಮದ ಮೇಲಿನ ಪದರವು  ಸುಲಿದು ಹೋಗಬಹುದು. ಇದು ಗಾಯವನ್ನು ಉಂಟು ಮಾಡುವುದು ಮಾತ್ರವಲ್ಲದೆ ಬ್ಯಾಕ್ಟೀರಿಯಾದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಹಲ್ಲುಗಳನ್ನು ಸ್ಟ್ರಾಂಗ್‌ ಆಗಿರಿಸಲು ಸಹಕಾರಿ ಈ ನ್ಯಾಚುರಲ್‌ ಟೂತ್‌ಪೇಸ್ಟ್‌; ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು

ಸೊಳ್ಳೆ ಕಚ್ಚಿದಾಗ ಕಾಣಿಸಿಕೊಳ್ಳುವ ತುರಿಕೆ ನಿವಾರಿಸುವ ಸುಲಭ ಪರಿಹಾರಗಳು:

  • ಐಸ್ ಕಂಪ್ರೆಸ್: ಬಟ್ಟೆಯಲ್ಲಿ ಐಸ್ ತುಂಡನ್ನು ಸುತ್ತಿ, ಅದನ್ನು ಸೊಳ್ಳೆ ಕಚ್ಚಿದ ಭಾಗಕ್ಕೆ 5 ರಿಂದ 10 ನಿಮಿಷ ಇಟ್ಟು ಬಿಡಿ.  ಶೀತ ತಾಪಮಾನವು ನರಗಳನ್ನು ಮರಗಟ್ಟುತ್ತದೆ, ಹಿಸ್ಟಮೈನ್ ಬಿಡುಗಡೆಯನ್ನು ಕಡಿಮೆ ಮಾಡುತ್ತದೆ ಮತ್ತು ಊತ ಮತ್ತು ತುರಿಕೆಯನ್ನು ತಕ್ಷಣವೇ ನಿವಾರಿಸುತ್ತದೆ.
  • ಅಲೋವೆರಾ ಜೆಲ್: ಅಲೋವೆರಾ ನೈಸರ್ಗಿಕ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದನ್ನು ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ಮೈ ತಂಪಾಗುತ್ತದೆ.
  • ಜೇನುತುಪ್ಪ: ಜೇನುತುಪ್ಪವು ನೈಸರ್ಗಿಕ ನಂಜುನಿರೋಧಕ ಗುಣಗಳನ್ನು ಹೊಂದಿದೆ. ಸೊಳ್ಳೆ ಕಚ್ಚಿದ ಜಾಗಕ್ಕೆ ಒಂದು ಹನಿ ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ.
  • ಅಡುಗೆ ಸೋಡಾ ಪೇಸ್ಟ್: ಒಂದು ಟೀ ಚಮಚ ಅಡುಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಅದನ್ನು ಸೊಳ್ಳೆ ಕಚ್ಚಿದ ಪ್ರದೇಶಕ್ಕೆ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ. ಇದು ಚರ್ಮದ pH ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ತುರಿಕೆಯನ್ನು ಶಮನಗೊಳಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Lifestyle

Read full article on TV9 Kannada Lifestyle

Leave a Comment

Your email address will not be published. Required fields are marked *

समाचार की भाषा चुनें / Choose News Language