Hashtagintro

ಸ್ಟಿಂಗ್ ಪ್ರಕರಣ: ರೋಚಕ ಕಹಾನಿಯನ್ನು ಸಿಸಿಬಿ ಪೊಲೀಸರು ಬೇಧಿಸಿದ್ಹೇಗೆ, ಹೆಚ್​ಡಿಕೆ ಲಿಂಕ್ ಏನು? ಇಲ್ಲಿದೆ ಅಚ್ಚರಿಯ ಮಾಹಿತಿ

ಸ್ಟಿಂಗ್ ಪ್ರಕರಣ: ರೋಚಕ ಕಹಾನಿಯನ್ನು ಸಿಸಿಬಿ ಪೊಲೀಸರು ಬೇಧಿಸಿದ್ಹೇಗೆ, ಹೆಚ್​ಡಿಕೆ ಲಿಂಕ್ ಏನು? ಇಲ್ಲಿದೆ ಅಚ್ಚರಿಯ ಮಾಹಿತಿ

ಬೆಂಗಳೂರು, ನವೆಂಬರ್ 1: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯಲ್ಲಿ ಸಿಸಿಬಿ ಪೊಲೀಸರು ಮತ್ತೊಂದು ಮಹತ್ವದ ಸುಳಿವು ಪತ್ತೆಹಚ್ಚಿದ್ದಾರೆ. ಸ್ಟಿಂಗ್ ವಿಡಿಯೋವನ್ನು ಅಪ್ಲೋಡ್ ಮಾಡಲು ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್‌ನ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಅದರ ಖರೀದಿ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ವಿಡಿಯೋ ಅಪ್ಲೋಡ್ ಮಾಡಲು ಬಳಸಲಾಗಿದೆ ಎನ್ನಲಾದ ಮೊಬೈಲ್‌ನಲ್ಲಿ ಆ ಸಂದರ್ಭದಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೂ ಅದರ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಸಿಮ್ ಕಾರ್ಡ್ ಇಲ್ಲದಿದ್ದರೂ ಮೊಬೈಲ್‌ನ ಖರೀದಿ ವಿವರಗಳನ್ನು ಆಧರಿಸಿ ತನಿಖೆ ಮುಂದುವರಿಸಿದ ಸಿಸಿಬಿ ಪೊಲೀಸರು, ಮೊಬೈಲ್ ಖರೀದಿಸಿದವರ ಮಾಹಿತಿ ಪತ್ತೆಹಚ್ಚಿದ್ದಾರೆ.

ಸೆಪ್ಟೆಂಬರ್ 26ರಂದು ದೆಹಲಿಯಲ್ಲಿ ಮೊಬೈಲ್ ಖರೀದಿ

ತನಿಖೆಯ ಪ್ರಕಾರ, ಸೆಪ್ಟೆಂಬರ್ 26ರಂದು ದೆಹಲಿಯಲ್ಲಿ ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಎಂಬುವವರು ಎರಡು ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದರು. ಮಧ್ಯಾಹ್ನ ಸುಮಾರು 1.57ಕ್ಕೆ ಇಬ್ಬರೂ ಮೊಬೈಲ್ ಅಂಗಡಿಗೆ ಬಂದಿದ್ದರು. ಅಂಗಡಿಯಲ್ಲಿ ಮೊಬೈಲ್ ಖರೀದಿಸುವ ಮೊದಲು ಅದಕ್ಕೆ ಪೆನ್‌ಡ್ರೈವ್ ಅಳವಡಿಸಿ ಪರೀಕ್ಷೆ ನಡೆಸಿದ್ದರು. ಪೆನ್‌ಡ್ರೈವ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ, ಅಂಗಡಿಯಲ್ಲಿದ್ದ ಸಿಮ್ ಕಾರ್ಡ್‌ನ್ನು ಮೊಬೈಲ್‌ಗೆ ಅಳವಡಿಸಿ ಪರೀಕ್ಷೆ ನಡೆಸಿದ್ದರು ಎಂಬುದನ್ನು ಪೊಲೀಸರು ತನಿಖೆಯಿಂದ ಕಂಡುಕೊಂಡಿದ್ದಾರೆ.

ಬಳಿಕ 7,700 ರೂಪಾಯಿ ಮತ್ತು 8,000 ರೂಪಾಯಿ ಬೆಲೆಯ ಎರಡು ಮೊಬೈಲ್‌ಗಳನ್ನು ಖರೀದಿಸಲಾಗಿತ್ತು. ಈ ಪೈಕಿ 8,000 ರೂಪಾಯಿಗೆ ಖರೀದಿಸಿದ ಸ್ಯಾಮ್‌ಸಂಗ್ ಮೊಬೈಲ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ ಎಂಬ ಮಾಹಿತಿ ಸಿಸಿಬಿ ತನಿಖೆಯಲ್ಲಿ ಹೊರಬಂದಿದೆ.

ಸಿಮ್ ಇಲ್ಲದಿದ್ದರೂ ಸಿಕ್ಕಿತು ಮೊಬೈಲ್‌ನ ಜಾಡು!

ಮೊಬೈಲ್ ಖರೀದಿಸಿದ ಬಳಿಕ ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಹೊಸ ಸಿಮ್ ಕಾರ್ಡ್ ಖರೀದಿಸಿರಲಿಲ್ಲ. ಹೀಗಾಗಿ, ಸಿಮ್ ಕಾರ್ಡ್ ಬಳಸದೆ ವೈ-ಫೈ ಅಥವಾ ಇತರೆ ತಂತ್ರಜ್ಞಾನದ ಮೂಲಕ ವಿಡಿಯೋ ಅಪ್ಲೋಡ್ ಮಾಡಲಾಗಿದೆಯೇ ಎಂಬ ಅನುಮಾನವೂ ತನಿಖಾಧಿಕಾರಿಗಳಿಗೆ ವ್ಯಕ್ತವಾಗಿದೆ. ಆದರೆ, ಮೊಬೈಲ್ ಖರೀದಿ ವೇಳೆ ಅಂಗಡಿಯಲ್ಲಿ ಸಿಮ್ ಕಾರ್ಡ್ ಅಳವಡಿಸಿ ಪರೀಕ್ಷೆ ನಡೆಸಿದ್ದ ಮಾಹಿತಿ ತನಿಖೆಗೆ ಪ್ರಮುಖ ಸುಳಿವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಂಬಂಧಪಟ್ಟ ಮೊಬೈಲ್ ಅಂಗಡಿ ಸಿಬ್ಬಂದಿಯನ್ನು ಸಂಪರ್ಕಿಸಿ, ಮೊಬೈಲ್ ಖರೀದಿಸಿದ್ದವರು ಮತ್ತು ಸಿಮ್ ಕಾರ್ಡ್ ಪರೀಕ್ಷಿಸಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಈ ಸುಳಿವಿನ ಜಾಡು ಹಿಡಿದು ತನಿಖೆ ಮುಂದುವರಿಸಿದಾಗ, ಮೊಬೈಲ್ ಖರೀದಿಸಿದವರ ಪೈಕಿ ರಿತೇಶ್ ಪಾಂಡೆ ಎಂಬ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಸಿಮ್ ಕಾರ್ಡ್ ಇಲ್ಲದೆ ವಿಡಿಯೋ ಅಪ್ಲೋಡ್ ಆಗಿದ್ದರೂ, ಮೊಬೈಲ್ ಖರೀದಿ ಮತ್ತು ಅಂಗಡಿಯಲ್ಲಿ ನಡೆದ ಪರೀಕ್ಷೆಯ ಮಾಹಿತಿಯನ್ನು ಆಧರಿಸಿ ತನಿಖೆಯ ಜಾಲವನ್ನು ಸಿಸಿಬಿ ಪೊಲೀಸರು ಬೇಧಿಸಿರುವುದು ಈ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಸ್ಟಿಂಗ್ ಪ್ರಕರಣ ಇದೇ ಮೊದಲ ಬಾರಿಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ಹೆಸರನ್ನು ಪೊಲೀಸರು ಪ್ರಸ್ತಾಪಿಸಿದ ಬೆನ್ನಲ್ಲೇ ತನಿಖೆಗೆ ಸಂಬಂಧಿಸಿದ ರೋಚಕ ವಿಚಾರವೂ ಬಯಲಾಗಿದೆ. ಆರೋಪಿ ಜೊತೆಗೆ ಲಿಂಕ್ ಇರುವ ಬಗ್ಗೆ ಪೊಲೀಸರು ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ, ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಕೇಂದ್ರ ಸಚಿವ ಕುಮಾರಸ್ವಾಮಿ ನಿವಾಸದಲ್ಲಿ ಮೊಬೈಲ್ ಎಕ್ಸ್​​ಚೇಂಜ್ ಆಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ತನಿಖೆ ಸಂಬಂಧಿಸಿದ ಇಂಟರೆಸ್ಟಿಂಗ್ ವಿಚಾರ ಹೊರಬಿದ್ದಿದೆ.

ಸೀಮಂತ್ ಕುಮಾರ್ ಸಿಂಗ್ ಹೇಳಿದ್ದೇನು?


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗಾಗಿ ಹಲವು ಪೊಲೀಸ್ ತಂಡಗಳು ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ ದೆಹಲಿಗೆ ತೆರಳಿದ್ದ ಪೊಲೀಸ್ ತಂಡವು ಆರೋಪಿ ರಿತೇಶ್ ಪಾಂಡೆ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ರಿತೇಶ್ ಪಾಂಡೆ ನೀಡಿರುವ ಮಾಹಿತಿಯ ಆಧಾರದ ಮೇಲೆ ಮೊಬೈಲ್ ಖರೀದಿ ಹಾಗೂ ಅದರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಹಲವು ವಿವರಗಳು ಲಭ್ಯವಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಎಚ್‌ಡಿಕೆ ದೆಹಲಿ ನಿವಾಸದ ಬಳಿ ಮೊಬೈಲ್ ಹಸ್ತಾಂತರ?

ರಿತೇಶ್ ಪಾಂಡೆ ನೀಡಿರುವ ಹೇಳಿಕೆಯ ಪ್ರಕಾರ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದ ಬಳಿ ಮೊಬೈಲ್ ಅನ್ನು ಪ್ರಜ್ವಲ್ ಪ್ರಸಾದ್ ಅವರಿಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ತನಿಖಾ ತಂಡಕ್ಕೆ ಸಿಕ್ಕಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಿತೇಶ್ ಪಾಂಡೆ, ತನಗೆ ಪ್ರಜ್ವಲ್ ಪ್ರಸಾದ್ ಅವರಿಗೆ ಮೊಬೈಲ್ ತಲುಪಿಸುವ ಕೆಲಸ ನೀಡಲಾಗಿತ್ತು ಮತ್ತು ತಾನು ಆ ಕೆಲಸವನ್ನು ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಅಲ್ಲದೆ, ಪ್ರಜ್ವಲ್ ಪ್ರಸಾದ್ ಮತ್ತು ರಿತೇಶ್ ಪಾಂಡೆ ನಡುವೆ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದ್ದು, ಈ ಅಂಶವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮೂವರ ಪಾತ್ರದ ಬಗ್ಗೆ ತನಿಖೆ

ಪ್ರಕರಣದಲ್ಲಿ ರಿತೇಶ್ ಪಾಂಡೆ, ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ ಎಂಬ ಮೂವರ ಪಾತ್ರದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ರಿತೇಶ್ ಪಾಂಡೆ ಹೇಳಿಕೆಯ ಆಧಾರದ ಮೇಲೆ ಈವರೆಗೆ ಹಲವು ಮಾಹಿತಿಗಳನ್ನು ಕಲೆಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ಪ್ರಜ್ವಲ್ ಪ್ರಸಾದ್ ಮತ್ತು ವಿನೋದ್ ಶರ್ಮಾ ಅವರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಹೇಳಿಕೆ ಮತ್ತು ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ತನಿಖಾ ಕ್ರಮ ಕೈಗೊಳ್ಳಲಾಗುವುದು ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ಕೇಸ್ ಆರೋಪಿಗೆ ಕುಮಾರಸ್ವಾಮಿ ಲಿಂಕ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತ

ತನಿಖೆಯ ಪ್ರಕಾರ, ಈ ಮೂವರು ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿರುವವರು ಹಾಗೂ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದ ಕಂಟೆಂಟ್ ಸಿದ್ಧಪಡಿಸುವ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಬಂಧಿತ ಆರೋಪಿ ರಿತೇಶ್ ಪಾಂಡೆ ನೀಡಿರುವ ಮಾಹಿತಿಯ ಆಧಾರದ ಮೇಲೆ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language