
ವಿಶ್ವ ಕ್ರಿಕೆಟ್ನ ಚೇಸ್ ಮಾಸ್ಟರ್ ಯಾರು? ಈ ಪ್ರಶ್ನೆಗೆ ಥಟ್ಟನೆ ಬರುವ ಉತ್ತರ ವಿರಾಟ್ ಕೊಹ್ಲಿ… ಇದೀಗ ವಿರಾಟ್ ಕೊಹ್ಲಿ ಚೇಸಿಂಗ್ ವೇಳೆ ಬರೆದಿದ್ದ ಭರ್ಜರಿ ದಾಖಲೆಯನ್ನು ಶ್ರೀಲಂಕಾದ ಯುವ ದಾಂಡಿಗ ಪವನ್ ರತ್ನಾಯಕೆ ಮುರಿದಿದ್ದಾರೆ. ಅದು ಸಹ 350+ ರನ್ಗಳ ಚೇಸಿಂಗ್ ವೇಳೆ ಎಂಬುದು ವಿಶೇಷ.
ಇಷ್ಟು ದಿನ ರನ್ ಬೆನ್ನಟ್ಟುವ ಕರಗತ ಕಲೆ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಮಾತ್ರ ಸಿದ್ದಿಸಿದೆ ಎಂದೇ ನಂಬಲಾಗಿತ್ತು. ಆದರೆ, ಈಗ ಈ ಇಬ್ಬರೂ ದಿಗ್ಗಜರ ಹೆಜ್ಜೆಯ ಗುರುತುಗಳನ್ನು ಅಳಿಸಿ ಹಾಕಿ ಅವರದ್ದೇ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಿದ್ದಾನೆ ಲಂಕಾದ ಈ 24 ವರ್ಷದ ಯುವ ದಾಂಡಿಗ.
ಏನಿದು ಅಪರೂಪದ ದಾಖಲೆ?
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 350 ಕ್ಕೂ ಹೆಚ್ಚು ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಇದೀಗ ಈ ದಾಖಲೆ ಪಟ್ಟಿಗೆ ಪವನ್ ರತ್ನಾಯಕೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಸಹ ಕೇವಲ ಇನಿಂಗ್ಸ್ಗಳಲ್ಲೇ ಎಂಬುದೇ ಇಲ್ಲಿ ವಿಶೇಷ.
ಅಂದರೆ ಏಕದಿನ ಕ್ರಿಕೆಟ್ನಲ್ಲಿ 350+ ಸ್ಕೋರ್ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಲಾ 3 ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಈ ಸಾಧನೆ ಮಾಡಲು ಇವರಿಬ್ಬರು ತೆಗೆದುಕೊಂಡಿರುವುದು 8 ಮತ್ತು 11 ಇನಿಂಗ್ಸ್ಗಳನ್ನು. ಆದರೆ ಪವನ್ ರತ್ನಾಯಕೆ ಈ ಸಾಧನೆಯನ್ನು ಕೇವಲ 4 ಇನಿಂಗ್ಸ್ಗಳಲ್ಲೇ ಮಾಡಿ ಮುಗಿಸಿದ್ದಾರೆ.
- ರೋಹಿತ್ ಶರ್ಮಾ: 350 ಕ್ಕೂ ಹೆಚ್ಚು ರನ್ ಚೇಸ್ ಮಾಡಿದಂತಹ 8 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ, ಅದರಲ್ಲಿ 3 ಶತಕ ಸಿಡಿಸಿದ್ದಾರೆ.
- ವಿರಾಟ್ ಕೊಹ್ಲಿ: 350+ ರನ್ಗಳ ಗುರಿ ಬೆನ್ನಟ್ಟುವ ಪಂದ್ಯಗಳಲ್ಲಿ 11 ಬಾರಿ ಬ್ಯಾಟ್ ಬೀಸಿದ್ದ ವಿರಾಟ್ ಕೊಹ್ಲಿ, ಅದರಲ್ಲಿ 3 ಮ್ಯಾಚ್ಗಳಲ್ಲಿ ಸೆಂಚುರಿ ಸಿಡಿಸಿದ್ದರು.
- ಪವನ್ ರತ್ನಾಯಕೆ: ಶ್ರೀಲಂಕಾದ ಯುವ ದಾಂಡಿಗ ಪವನ್ ರತ್ನಾಯಕೆ 350+ ರನ್ಗಳನ್ನು ಚೇಸ್ ಮಾಡಿದ ಕೇವಲ 4 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದು, ಈ ವೇಳೆ ಬರೋಬ್ಬರಿ 3 ಬಾರಿ ಸೆಂಚುರಿ ಸಿಡಿಸಿದ್ದಾರೆ.
ಈ ಮೂಲಕ 350+ ಏಕದಿನ ಪಂದ್ಯಗಳ ಚೇಸಿಂಗ್ ವೇಳೆ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ ಮೂರು ಶತಕ ಸಿಡಿಸಿದ ವಿಶ್ವ ದಾಖಲೆಯನ್ನು ಪವನ್ ರತ್ನಾಯಕೆ ತಮ್ಮದಾಗಿಸಿಕೊಂಡಿದ್ದಾರೆ.
ಕೇವಲ 24ನೇ ವಯಸ್ಸಿನಲ್ಲೇ ಇಂತಹ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಪವನ್ ರತ್ನಾಯಕೆ ಅವರನ್ನು ಸದ್ಯ ವಿಶ್ವ ಕ್ರಿಕೆಟ್ನ ‘ಹೊಸ ಚೇಸ್ ಮಾಸ್ಟರ್’ ಎಂದು ಬಣ್ಣಿಸಲಾಗುತ್ತಿದೆ.
ಬೃಹತ್ ಮೊತ್ತದ, ಅತ್ಯಂತ ಒತ್ತಡದ ಪಂದ್ಯಗಳಲ್ಲೂ ಯಾವುದೇ ಆತಂಕವಿಲ್ಲದೆ ನಿರಾಯಾಸವಾಗಿ ಬ್ಯಾಟ್ ಬೀಸುವ ಅಪರೂಪದ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಆ ಮೂಲಕ ದೀರ್ಘಕಾಲದ ನಂತರ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಹೊಸದೊಂದು ಗೆಲುವಿನ ಭರವಸೆಯನ್ನು ಹುಟ್ಟುಹಾಕಿದ್ದಾರೆ.
ಪವನ್ ಪವರ್ಫುಲ್ ಸೆಂಚುರೀಸ್:
- ಮೊದಲ ಶತಕ (ಜನವರಿ 2026): ಕೊಲಂಬೊದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ 121 ರನ್ ಸಿಡಿಸಿ ಶ್ರೀಲಂಕಾ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು.
- ಎರಡನೇ ಶತಕ (ಅಕ್ಟೋಬರ್ 22, 2026): ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 430 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಲಂಕಾ ಪರ ರತ್ನಾಯಕೆ ಕೇವಲ 106 ಎಸೆತಗಳಲ್ಲಿ 130 ರನ್ ಚಚ್ಚಿ ಇತಿಹಾಸ ಸೃಷ್ಟಿಸಿದರು.
- ಮೂರನೇ ಶತಕ (ಅಕ್ಟೋಬರ್ 29, 2026): ಇಂಗ್ಲೆಂಡ್ ನೀಡಿದ 387 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ಕೇವಲ 77 ಎಸೆತಗಳಲ್ಲಿ 118 ರನ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು.
ಇದನ್ನೂ ಓದಿ: 6,6,6,6,6,6,6: ರಾಹುಲ್ ಸಿಡಿಲಬ್ಬರ, ಸ್ಫೋಟಕ ಅರ್ಧಶತಕ
ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವ ಕ್ರಿಕೆಟ್ನ ಘಟಾನುಘಟಿ ಬೌಲರ್ಗಳ ನಿದ್ದೆಗೆಡಿಸಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸಾರ್ವಕಾಲಿಕ ದಾಖಲೆಯ ಪಟ್ಟಿಗೆ ಪವನ್ ರತ್ನಾಯಕೆ ಲಗ್ಗೆ ಇಟ್ಟಿರುವುದು ಸಾಮಾನ್ಯ ಸಾಧನೆಯಲ್ಲ. ಕೇವಲ 24ನೇ ವಯಸ್ಸಿನಲ್ಲೇ ಇಂಗ್ಲೆಂಡ್ನಂತಹ ಬಲಿಷ್ಠ ತಂಡದ ವಿರುದ್ಧದ ಬೃಹತ್ ರನ್ ಚೇಸಿಂಗ್ಗಳಲ್ಲಿ ಅವರು ತೋರಿರುವ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ಜಗತ್ತಿಗೆ ಹೊಸದೊಂದು ದಿಕ್ಸೂಚಿಯಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಯುವ ಬ್ಯಾಟರ್ ಕಡೆಯಿಂದ ಇಂತಹ ಮತ್ತಷ್ಟು ದಾಖಲೆಗಳನ್ನು ನಿರೀಕ್ಷಿಸಬಹುದು.
Source: TV9 Kannada Sports
