Hashtagintro

25 ವರ್ಷಗಳ ಬರಗಾಲ ಅಂತ್ಯ: ವಿದೇಶಿ ನೆಲದಲ್ಲಿ ಜಿಂಬಾಬ್ವೆ ಐತಿಹಾಸಿಕ ಗೆಲುವು

25 ವರ್ಷಗಳ ಬರಗಾಲ ಅಂತ್ಯ: ವಿದೇಶಿ ನೆಲದಲ್ಲಿ ಜಿಂಬಾಬ್ವೆ ಐತಿಹಾಸಿಕ ಗೆಲುವು

ಜಿಂಬಾಬ್ವೆ ಕ್ರಿಕೆಟ್ ತಂಡದ ಬರೋಬ್ಬರಿ 25 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಜಿಂಬಾಬ್ವೆ ತಂಡ ಇತಿಹಾಸ ನಿರ್ಮಿಸಿದೆ. ಶಾರ್ಜಾದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ 57 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು ಜಿಂಬಾಬ್ವೆ 418 ರನ್‌ಗಳ ಕಠಿಣ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಅಫ್ಘಾನ್ ಪಡೆ 360 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಜಿಂಬಾಬ್ವೆ 25 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತು.

ಪಂದ್ಯದ ಕೊನೆಯ ಹಂತದವರೆಗೂ ಅಫ್ಘಾನಿಸ್ತಾನ ಡ್ರಾ ಮಾಡಿಕೊಳ್ಳುವ ಲಕ್ಷಣಗಳು ಕಂಡುಬಂದಿದ್ದವು. ಆದರೆ ಕೊನೆಯ ಕ್ಷಣದಲ್ಲಿ ಗ್ರೇಮ್ ಕ್ರೀಮರ್ ಎಸೆತದಲ್ಲಿ ಜಿಯಾವುರ್ ರೆಹಮಾನ್‌ ಔಟಾದರು. ಇದರೊಂದಿಗೆ ಜಿಂಬಾಬ್ವೆ ತಂಡಕ್ಕೆ ಐತಿಹಾಸಿಕ ಗೆಲುವು ಒಲಿಯಿತು.

ಜಿಂಬಾಬ್ವೆ ಗೆಲುವಿನ ಹಾದಿ ಹೇಗಿತ್ತು?

ಶಾರ್ಜಾದಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 339 ರನ್ ಗಳಿಸಿತ್ತು. ತಂಡದ ಪರ ಇನ್ನೋಸೆಂಟ್ ಕೈಯಾ 96 ರನ್ ಗಳಿಸಿದರೆ, ಬ್ರೆಂಡನ್ ಟೇಲರ್ 119 ರನ್ ಸಿಡಿಸಿ ಶತಕದ ಸಂಭ್ರಮ ಆಚರಿಸಿದರು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆಡಿದ ಅಫ್ಘಾನಿಸ್ತಾನ ಕೇವಲ 217 ರನ್‌ಗಳಿಗೆ ಆಲೌಟ್ ಆಯಿತು. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರಬಾನಿ 3 ವಿಕೆಟ್ ಪಡೆದರೆ, ವಿನ್ಸೆಂಟ್ ಮಸೆಕೆಸಾ 4 ವಿಕೆಟ್ ಕಬಳಿಸಿ ಮಿಂಚಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 295 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬ್ರೆಂಡನ್ ಟೇಲರ್ ಮತ್ತು ಗ್ರೇಮ್ ಕ್ರೀಮರ್ ತಲಾ 50 ರನ್ ಗಳಿಸಿದರು. ಬ್ಲೆಸಿಂಗ್ ಮುಜರಬಾನಿ ಕೂಡ 59 ರನ್‌ಗಳ ಕೊಡುಗೆ ನೀಡಿದರು. ಇದರಿಂದ ಅಫ್ಘಾನಿಸ್ತಾನಕ್ಕೆ 418 ರನ್‌ಗಳ ಬೃಹತ್ ಗುರಿ ಎದುರಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ 360 ರನ್ ಗಳಿಸಿದರೂ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ನಸೀರ್ ಖಾನ್ ಮರೂಫಖಿಲ್ ಅಜೇಯ 101 ರನ್ ಗಳಿಸಿ ಹೋರಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

25 ವರ್ಷಗಳ ಬಳಿಕ ಸಿಕ್ಕ ಐತಿಹಾಸಿಕ ಗೆಲುವು

ಜಿಂಬಾಬ್ವೆ ತಂಡ ವಿದೇಶಿ ನೆಲದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿ ಗೆದ್ದಿದ್ದು 2001ರಲ್ಲಿ. ಅಂದು ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆ ಈ ಸಾಧನೆ ಮಾಡಿತ್ತು. ಇದೀಗ ಬರೋಬ್ಬರಿ 25 ವರ್ಷಗಳ ಬಳಿಕ ಮತ್ತೊಮ್ಮೆ ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ವಿಶೇಷವೆಂದರೆ, 2001ರಲ್ಲಿ ಜಿಂಬಾಬ್ವೆ ವಿದೇಶಿ ನೆಲದಲ್ಲಿ ಕೊನೆಯ ಬಾರಿ ಟೆಸ್ಟ್ ಸರಣಿ ಗೆದ್ದಾಗಿನ ಮೂರು ವರ್ಷಗಳ ನಂತರ ತಂಡದ ನಾಯಕ ಬ್ರಿಯಾನ್ ಬೆನೆಟ್ ಜನಿಸಿದ್ದರು. ಇಂತಹ ಅಪರೂಪದ ಸಾಧನೆಯ ಮೂಲಕ ಜಿಂಬಾಬ್ವೆ ಕ್ರಿಕೆಟ್ ತಂಡ ಹೊಸ ಇತಿಹಾಸ ಬರೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language