Hashtagintro

ಇರಾನ್ ಮುಗಿದ ಮೇಲೆ ಕ್ಯೂಬಾ ಸರದಿ: ಕ್ಯೂಬಾ ಆಡಳಿತ ಬದಲಾವಣೆಗೂ ಅಮೆರಿಕ ಅಧ್ಯಕ್ಷ ಟ್ರಂಪ್ ನೇರ ಬೆದರಿಕೆ

ಇರಾನ್ ಮುಗಿದ ಮೇಲೆ ಕ್ಯೂಬಾ ಸರದಿ: ಕ್ಯೂಬಾ ಆಡಳಿತ ಬದಲಾವಣೆಗೂ ಅಮೆರಿಕ ಅಧ್ಯಕ್ಷ ಟ್ರಂಪ್ ನೇರ ಬೆದರಿಕೆ

ವಾಷಿಂಗ್ಟನ್, ಅಕ್ಟೋಬರ್ 24: ಇಸ್ಲಾಮಿಕ್ ಗಣರಾಜ್ಯ ಇರಾನ್ ಅಮೆರಿಕದೊಂದಿಗೆ ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಆ ದೇಶದ ಮೇಲೆ ಮತ್ತೊಂದು ಸುತ್ತಿನ ಭೀಕರ ವೈಮಾನಿಕ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಇರಾನ್ ಮೇಲಿನ ಕಾರ್ಯಾಚರಣೆ ಮುಗಿದ ನಂತರ ಕ್ಯೂಬಾದ ಮೇಲೂ ಕಣ್ಣಿಡುವುದಾಗಿ ಹೇಳುವ ಮೂಲಕ ಹೊಸ ಅಂತರರಾಷ್ಟ್ರೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ. ಫ್ಲೋರಿಡಾದಲ್ಲಿ ನಡೆದ ಮಧ್ಯಂತರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಸೇನಾ ಕಾರ್ಯಾಚರಣೆಯ ಸ್ಪಷ್ಟ ಸುಳಿವು ನೀಡಿದ್ದಾರೆ.

‘ಆಪರೇಷನ್ ಎಪಿಕ್ ಫ್ಯೂರಿ’ ಮರುಕಳಿಸುವ ಎಚ್ಚರಿಕೆ:

“ಇರಾನ್ ನಮ್ಮೊಂದಿಗೆ ಶಾಂತಿ ಮಾತುಕತೆಗೆ ಒಪ್ಪದಿದ್ದರೆ ನಾವು ಇನ್ನೊಂದು ಪುಟ್ಟ ‘ಎಪಿಕ್ ಫ್ಯೂರಿ’ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಅವರಿಗೆ ಬುದ್ಧಿಯಿದ್ದರೆ ನಮ್ಮೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬರುತ್ತಾರೆ. ಆದರೆ ಅವರು ಅಷ್ಟು ಬುದ್ಧಿವಂತರು ಎಂದು ನನಗನಿಸುವುದಿಲ್ಲ” ಎಂದು ಟ್ರಂಪ್ ವ್ಯಂಗ್ಯವಾಡಿದರು. ಈ ಹಿಂದೆ ಇರಾನ್ ವಿರುದ್ಧ ಅಮೆರಿಕ ಆರಂಭಿಸಿದ್ದ ಬೃಹತ್ ಮಿಲಿಟರಿ ದಾಳಿಗೆ ‘ಆಪರೇಷನ್ ಎಪಿಕ್ ಫ್ಯೂರಿ’ ಎಂದು ಹೆಸರಿಡಲಾಗಿತ್ತು.

ತೈಲ ಬೆಲೆ ಏರಿಕೆಗೆ ಸಮರ್ಥನೆ:

ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ತೈಲ ದರಗಳು ಹೆಚ್ಚಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಉಕ್ರೇನ್ ಸೇನೆಯು ರಷ್ಯಾದ ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆಸುತ್ತಿರುವುದೇ ಇಂಧನ ಬೆಲೆ ಗಗನಕ್ಕೇರಲು ಮುಖ್ಯ ಕಾರಣ ಎಂದು ಸಮರ್ಥಿಸಿಕೊಂಡರು.

ಕ್ಯೂಬಾ ವಿರುದ್ಧ ವಾಗ್ದಾಳಿ:

ರ್ಯಾಲಿಯಲ್ಲಿ ಲ್ಯಾಟಿನ್ ಅಮೆರಿಕನ್ ದೇಶವಾದ ಕ್ಯೂಬಾವನ್ನು ಗುರಿಯಾಗಿಸಿಕೊಂಡ ಟ್ರಂಪ್, “ಇರಾನ್‌ನಿಂದ ವಾಪಸ್ ಬರುವಾಗ ನಮ್ಮ ಯುದ್ಧನೌಕೆಗಳು ಕ್ಯೂಬಾವನ್ನು ಹಾದುಬರುತ್ತವೆ. ಕರಾವಳಿಯಿಂದ ಕೇವಲ 50 ಗಜ ದೂರದಲ್ಲಿ ನಮ್ಮ ನೌಕೆಗಳನ್ನು ನಿಲ್ಲಿಸಿದರೆ ಸಾಕು, ಅವರು ಕೈ ಎತ್ತಿ ಶರಣಾಗುತ್ತಾರೆ. ನಂತರ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಒಳಗೆ ಕಳುಹಿಸಿ ದೇಶವನ್ನು ಸರಿಪಡಿಸುತ್ತೇವೆ” ಎಂದರು.

ಇದನ್ನೂ ಓದಿ: ಪುಷ್ಟೀಕರಿಸಿದ ಯುರೇನಿಯಂ ಬಿಟ್ಟುಕೊಡಲು ಇರಾನ್ ನಕಾರ: ಅಸಿಮ್ ಮುನೀರ್ ಜೊತೆಗಿನ ಸಭೆಯಲ್ಲಿ ಸ್ಪಷ್ಟ ಸಂದೇಶ

ಕ್ಯೂಬಾದಿಂದ ತೀಕ್ಷ್ಣ ಪ್ರತಿಕ್ರಿಯೆ

ಟ್ರಂಪ್ ಅವರ ಈ ಬೆದರಿಕೆಗೆ ಕ್ಯೂಬಾದ ವಿದೇಶಾಂಗ ಸಚಿವ ಬ್ರೂನೋ ರೊಡ್ರಿಗಸ್ ಎಕ್ಸ್ನಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ.ನಮ್ಮ ಕಡಲತೀರಗಳು ಕೇವಲ ಸುಂದರವಾಗಿಲ್ಲ, ಅಲ್ಲಿ ರೇಜರ್‌ನಂತೆ ಹರಿತವಾದ ಸುಣ್ಣದ ಕಲ್ಲಿನ ಮುಳ್ಳುಗಳೂ ಇವೆ. ದಬ್ಬಾಳಿಕೆ ಮತ್ತು ಪ್ರಾಬಲ್ಯ ಮೆರೆಯುವ ದುರುದ್ದೇಶದಿಂದ ನಮ್ಮ ತೀರಕ್ಕೆ ಬರುವ ಶತ್ರುಗಳಿಗೆ ಇದು ನರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕ್ಯೂಬಾದಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ಕಿತ್ತೊಗೆದು ಸರ್ಕಾರ ಬದಲಾಯಿಸಲು ಅಮೆರಿಕ ಬಹಳ ದಿನಗಳಿಂದ ಯತ್ನಿಸುತ್ತಿದ್ದು, ಮೇ ತಿಂಗಳಲ್ಲಿ ಇಡೀ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದರು.

ಜಾಗತಿಕ ಮಾರುಕಟ್ಟೆ ಹಾಗೂ ಪೂರೈಕೆ ಸರಪಳಿಗೆ ಆತಂಕ

ಟರ್ಕಿಯಲ್ಲಿರುವ ಅಮೆರಿಕದ ರಾಯಭಾರಿ ಟಾಮ್ ಬರಾಕ್ ಅವರು ಈ ವಾರಾಂತ್ಯದಲ್ಲೇ ಇರಾನ್ ಮೇಲೆ ಪುನಃ ದಾಳಿಗಳು ನಡೆಯಬಹುದು ಎಂದು ಸುಳಿವು ನೀಡಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಪ್ರಚೋದನೆ ನೀಡಿದರೆ ಪ್ರತಿಯಾಗಿ ಅಮೆರಿಕನ್ ನೆಲೆಗಳ ಮೇಲೆಯೇ ಭೀಕರ ಪ್ರತಿದಾಳಿ ನಡೆಸುವುದಾಗಿ ಇರಾನ್ ಈಗಾಗಲೇ ಎಚ್ಚರಿಸಿದೆ. ಉಭಯ ದೇಶಗಳ ನಡುವಿನ ಈ ಉದ್ವಿಗ್ನತೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ಮತ್ತು ಪೂರೈಕೆ ಸರಪಳಿ ಮತ್ತಷ್ಟು ಅಸ್ತವ್ಯಸ್ತಗೊಳ್ಳುವ ಭೀತಿ ಎದುರಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source: TV9 Kannada National

Read full article on TV9 Kannada National

Leave a Comment

Your email address will not be published. Required fields are marked *

समाचार की भाषा चुनें / Choose News Language