
ಇತ್ತೀಚೆಗೆ ಸಿನಿಮಾಗಳಲ್ಲಿ ಎಐ ಬಳಕೆ ಎಂಬುದು ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಖರ್ಚು ಕಡಿಮೆ ಮಾಡಲು ಹಲವು ನಿರ್ದೇಶಕರುಗಳು ಎಐ ಬಳಕೆ ಮಾಡಿ ದೃಶ್ಯಗಳನ್ನು ಸೃಷ್ಟಿಸುತ್ತಿದ್ದಾರೆ. ಎಐ ಬಳಸಿ ಕಠಿಣದಲ್ಲೇ ಕಠಿಣ ದೃಶ್ಯಗಳನ್ನು ಸಹ ಸುಲಭವಾಗಿ ಸೃಷ್ಟಿಸಬಹುದಾಗಿದೆ. ಹಾಗಾಗಿ ಹಲವು ನಿರ್ಮಾಪಕರು, ನಿರ್ದೇಶಕರು ಎಐ ಬಳಕೆ ಮಾಡುತ್ತಿದ್ದಾರೆ. ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಬಗ್ಗೆ ಚರ್ಚೆ ಜೋರಾಗಿದೆ. ಆದರೆ ಈ ಸಿನಿಮಾನಲ್ಲಿ ಎಐ ಬಳಕೆ ಮಾಡಲಾಗಿದೆ ಎಂಬ ‘ಆರೋಪ’ದ ಬಗ್ಗೆ ನಿರ್ದೇಶಕ ನಿತೀಶ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ.
‘ರಾಮಾಯಣ’ ಸಿನಿಮಾದ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 27 ರಂದು ಲಾಸ್ ಏಂಜಲೀಸ್ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ, ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿದ್ದರು. ನಿರ್ದೇಶಕ ನಿತೀಶ್ ಸಹ ಜೊತೆಗಿದ್ದರು. ಸಿನಿಮಾದ ಪ್ರೀಮಿಯರ್ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾದ ನಿರ್ಮಾಣ ಕಾರ್ಯದಲ್ಲಿ ಎಐ ಬಳಕೆ ಮಾಡಿರುವ ಬಗ್ಗೆ ಮಾತನಾಡಿದರು.
ಸಿನಿಮಾನಲ್ಲಿ ಕಾಣುವ ಎಲ್ಲ ದೃಶ್ಯಗಳು ಚಿತ್ರೀಕರಣ ಮತ್ತು ವಿಎಫ್ಎಕ್ಸ್ ನೆರವಿನಿಂದಲೇ ಮಾಡಲಾಗಿದೆ ಎಂದ ನಿತೀಶ್, ‘ಎಐ’ ಅನ್ನು ಪಾತ್ರಗಳ ತುಟಿಗಳ ಚಲನೆಯನ್ನು ಹೊಂದಿಸಲು ಮಾತ್ರವೇ ಬಳಸಲಾಗಿದೆ ಎಂದಿದ್ದಾರೆ. ‘ರಾಮಾಯಣ’ ಸಿನಿಮಾವನ್ನು ಹಿಂದಿ ಮಾತ್ರವೇ ಅಲ್ಲದೆ ಭಾರತದ ಹಲವು ಭಾಷೆಗಳ ಜೊತೆಗೆ ಕೆಲ ವಿದೇಶಿ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಹಾಗಾಗಿ ಪಾತ್ರಗಳ ತುಟಿಗಳ ಚಲನೆ, ಆಯಾ ಭಾಷೆಗೆ, ಸಂಭಾಷಣೆಗೆ ತಕ್ಕಂತೆ ಇರುವಂತೆ ತೋರಿಸಲು ಮಾತ್ರವೇ ಎಐ ಬಳಸಲಾಗಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಅನ್ನು ಸಹ ಡಬ್ಬಿಂಗ್ ಕಲಾವಿದರೇ ಮಾಡಿದ್ದಾರೆ ಎಂದು ನಿತೀಶ್ ಮಾಹಿತಿ ನೀಡಿದರು.
ಇದನ್ನೂ ಓದಿ:ತೆಲುಗು ಸಿನಿಮಾ ‘ಕಲ್ಟ್’ಗೆ ಸಂಗೀತ ನೀಡುತ್ತಿರುವ ರವಿ ಬಸ್ರೂರು: ವಿಡಿಯೋ ನೋಡಿ
‘ಎಐ ಗೆ ಸಂಬಂಧಿಸಿದಂತೆ, ಪ್ರಪಂಚದ ಜನರಿಗೆ ಅವರದೇ ಭಾಷೆಯಲ್ಲಿ ಚಿತ್ರವನ್ನು ತಲುಪಿಸಲು ತುಟಿಗಳ ಚಲನೆಯನ್ನು (lip-sync) ಹೊಂದಿಸಲು ಮಾತ್ರ ಇದನ್ನು ಬಳಸಲಾಗುತ್ತಿದೆ. ಎಲ್ಲಾ ಧ್ವನಿಗಳನ್ನು ಕಲಾವಿದರೇ ಡಬ್ ಮಾಡಿದ್ದಾರೆ. ಪ್ರೇಕ್ಷಕರು ತಮ್ಮ ಮಾತೃಭಾಷೆಯಲ್ಲಿ ಆನಂದಿಸಲು ತಕ್ಕಂತೆ ತುಟಿಗಳ ಚಲನೆಯನ್ನು ಸರಿಯಾಗಿ ತರಲು ಮಾತ್ರ AI ಬಳಸಲಾಗಿದೆ. ಡಬ್ಬಿಂಗ್ನಲ್ಲಿ ಯಾವುದೇ AI ಬಳಸಿಲ್ಲ, ಧ್ವನಿಯನ್ನು ನೈಜ ಕಲಾವಿದರೇ ಡಬ್ ಮಾಡಿದ್ದಾರೆ, ತುಟಿಗಳ ಚಲನೆಗೆ ಮಾತ್ರ AI ಬಳಸಲಾಗಿದೆ” ಎಂದರು.
‘ರಾಮಾಯಣ’ ಸಿನಿಮಾವು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾ ಅನ್ನು ನಿತೀಶ್ ನಿರ್ದೇಶನ ಮಾಡಿದ್ದು, ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟನೆ ಮಾಡಿದ್ದು, ಸಿನಿಮಾ ನವೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Entertainment
