Hashtagintro

‘ರಾಮಾಯಣ’ ಸಿನಿಮಾಗೆ ಮೆಚ್ಚುಗೆ; ‘ಲಾರ್ಡ್ ಆಫ್ ದಿ ರಿಂಗ್ಸ್’ ಚಿತ್ರಕ್ಕೆ ಹೋಲಿಸಿದ ಪ್ರೇಕ್ಷಕರು

‘ರಾಮಾಯಣ’ ಸಿನಿಮಾಗೆ ಮೆಚ್ಚುಗೆ; ‘ಲಾರ್ಡ್ ಆಫ್ ದಿ ರಿಂಗ್ಸ್’ ಚಿತ್ರಕ್ಕೆ ಹೋಲಿಸಿದ ಪ್ರೇಕ್ಷಕರು

‘ರಾಕಿಂಗ್ ಸ್ಟಾರ್’ ಯಶ್, ಬಾಲಿವುಡ್‌ ನಟ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್‌ನ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಪ್ರೀಮಿಯರ್ ಶೋ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಅಕ್ಟೋಬರ್ 27ರಂದು ಅದ್ದೂರಿಯಾಗಿ ನಡೆದಿದೆ. ಪ್ರದರ್ಶನದ ಬೆನ್ನಲ್ಲೇ ಸಿನಿಮಾದ ಮೊದಲ ವಿಮರ್ಶೆಗಳು ಹೊರಬಿದ್ದಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಬೃಹತ್ ದೃಶ್ಯ ವೈಭವ, ಗ್ರಾಫಿಕ್ಸ್ ಮತ್ತು ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ವೀಕ್ಷಕರು, ಈ ಚಿತ್ರವನ್ನು ಹಾಲಿವುಡ್‌ನ ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ಗೆ ಹೋಲಿಸಿದ್ದಾರೆ.

ಲಾಸ್ ಏಂಜಲೀಸ್ ಪ್ರೀಮಿಯರ್ ಶೋ ವೀಕ್ಷಿಸಿದ ಕಂಟೆಂಟ್ ಕ್ರಿಯೇಟರ್ ಒಬ್ಬರು ತಮ್ಮ ಅನುಭವ ಹಂಚಿಕೊಂಡು, ‘ಚಿತ್ರರಂಗದ ಇತಿಹಾಸದಲ್ಲೇ ರಾಮಾಯಣ ರೀತಿಯ ಸಿನಿಮಾ ಬಂದಿಲ್ಲ. ‘ಲಾರ್ಡ್ ಆಫ್ ದಿ ರಿಂಗ್ಸ್’ ಮೊದಲ ಭಾಗ ಬಂದಾಗ ನನಗಾದ ಅನುಭವ ಈಗ ಮರಳಿ ಬಂದಿದೆ. ಸಿನಿಮಾ ಅತ್ಯಂತ ಭವ್ಯ ಹಾಗೂ ಮಹಾಕಾವ್ಯದಂತಿದೆ. ಶ್ರೀರಾಮನ ಪಾತ್ರ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಕ್ಲೈಮ್ಯಾಕ್ಸ್‌ನ ಟ್ವಿಸ್ಟ್ ಅದ್ಭುತವಾಗಿದೆ. 3 ಗಂಟೆಗಳ ಈ ಸಿನಿಮಾ ನೀಡಿದ ಅನುಭವವನ್ನು ವರ್ಣಿಸಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ವೀಕ್ಷಕರು ಟ್ವೀಟ್ ಮಾಡಿ, ‘ರಾಮಾಯಣ ಅತ್ಯಂತ ವೈಭವದಿಂದ ಕೂಡಿದೆ. ದೃಶ್ಯ ಸಂಯೋಜನೆ, ಆ್ಯಕ್ಷನ್ ಸನ್ನಿವೇಶಗಳು ಮತ್ತು ಸಂಗೀತದ ಮಟ್ಟ ಬೃಹತ್ ಆಗಿದೆ. ರಣಬೀರ್ ಕಪೂರ್ ಅಭಿನಯ ಅದ್ಭುತವಾಗಿದ್ದರೆ, ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಅವರು ತಮ್ಮ ಆಕರ್ಷಕ ನಟನೆಯಿಂದ ಗಮನ ಸೆಳೆಯುತ್ತಾರೆ’ ಎಂದು ಹೊಗಳಿದ್ದಾರೆ. ‘ಶ್ರೀರಾಮನಾಗಿ ನಟಿಸಿರುವ ರಣಬೀರ್ ಕಪೂರ್ ಅವರ ನಟನೆ ನನ್ನನ್ನು ಭಾವುಕಗೊಳಿಸಿ ಕಣ್ಣೀರು ತರಿಸಿತು’ ಎಂದು ಇನ್ನೊಬ್ಬರು ಪ್ರಶಂಸಿಸಿದ್ದಾರೆ.

ಚಿತ್ರದ ದೃಶ್ಯ ವೈಭವ ಹಾಗೂ ನಟನೆಯನ್ನು ಕೊಂಡಾಡಲಾಗಿದ್ದರೂ, ಕೆಲವು ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಚಿತ್ರವು ವಿಶುವಲ್ ಮತ್ತು ಆ್ಯಕ್ಷನ್‌ಗೆ ಹೆಚ್ಚು ಒತ್ತು ನೀಡಿದ್ದು, ಕೆಲವೆಡೆ ಭಾವನಾತ್ಮಕ ಸನ್ನಿವೇಶಗಳು ಮತ್ತು ನಾಟಕೀಯತೆ ಕಡಿಮೆಯಾಗಿದೆ. ಇದರಿಂದ ಕಥಾಹರಿವು ಕೆಲವೆಡೆ ಧಾರಾವಾಹಿಯಂತೆ ಭಾಸವಾಗುತ್ತದೆ’ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

‘ಇದನ್ನೂ ಓದಿ: ಮೊದಲ ದಿನವೇ 200 ಕೋಟಿ ರೂ. ಗಳಿಸಲಿದೆ ‘ರಾಮಾಯಣ’; ‘ಧುರಂಧರ್ 2’ ದಾಖಲೆ ಉಡೀಸ್?

‘ದ್ವಿತೀಯಾರ್ಧ ಕೊಂಚ ಎಳೆದಂತೆ ಅನಿಸುತ್ತದೆ. ಆದಾಗ್ಯೂ, ರಾವಣನಾಗಿ ಯಶ್ ಅವರ ಎಂಟ್ರಿ ಮತ್ತು ನಟನೆ ಸಿನಿಮಾದ ಅತಿ ದೊಡ್ಡ ಹೈಲೈಟ್’ ಎಂದು ವಿಮರ್ಶೆಯೊಂದರಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆಯಾಗಿ, ನಿತೇಶ್ ತಿವಾರಿ ಅವರ ಈ ಬಿಗ್ ಬಜೆಟ್ ಪ್ರಯತ್ನವು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗುವ ಮುನ್ಸೂಚನೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language