
ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು (Deepavali) ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ರಾತ್ರಿ, ಮನೆಯ ಮುಖ್ಯ ದ್ವಾರ, ವರಾಂಡ, ಬಾಲ್ಕನಿ ಹೀಗೆ ಮನೆ ತುಂಬಾ ದೀಪ ಹಚ್ಚಿಡುವ ವಾಡಿಕೆಯಿದೆ. ಸಂಪ್ರದಾಯದ ಪ್ರಕಾರ ಈ ದೀಪವನ್ನು ಲಕ್ಷ್ಮಿ ದೇವಿಯನ್ನು ಸ್ವಾಗತಿಸುವ, ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಮತ್ತು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುವ ಪ್ರಮುಖ ಸಂಕೇತವೆಂದು ಪರಿಗಣಿಸಲಾಗಿದೆ. ದೀಪಾವಳಿಯಂದು ಮನೆ ತುಂಬಾ ದೀಪ ಬೆಳಗುವುದರ ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅದೇನೆಂಬುದರ ಪೂರ್ಣ ವಿವರ ಇಲ್ಲಿದೆ.
ದೀಪ ಬೆಳಗುವುದರ ಧಾರ್ಮಿಕ ಮಹತ್ವವೇನು?
ಲಕ್ಷ್ಮಿ ದೇವಿಯ ಸ್ವಾಗತವನ್ನು ಸಂಕೇತಿಸುತ್ತದೆ:
ಹಿಂದೂ ಧರ್ಮದಲ್ಲಿ, ದೀಪಾವಳಿಯನ್ನು ಲಕ್ಷ್ಮಿ ದೇವಿಯ ಆಗಮನದ ಹಬ್ಬವೆಂದು ಪರಿಗಣಿಸಲಾಗುತ್ತದೆ. ಈ ಹಬ್ಬದ ರಾತ್ರಿ, ಲಕ್ಷ್ಮಿ ದೇವಿಯು ತನ್ನ ಭಕ್ತರ ಮನೆಗಳಿಗೆ ಭೇಟಿ ನೀಡಿ ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸುತ್ತಾಳೆ ಎಂದು ನಂಬಲಾಗಿದೆ. ಹಾಗಾಗಿ ಲಕ್ಷ್ಮೀ ದೇವಿಯನ್ನು ಸ್ವಾಗತಿಸಲು ಪ್ರತಿಯೊಬ್ಬರೂ ಮನೆಯ ಮುಖ್ಯ ದ್ವಾರದ ಬಳಿ ದೀಪವನ್ನು ಬೆಳಗುತ್ತಾರೆ. ಹೀಗೆ ಮುಖ್ಯ ದ್ವಾರದ ಬಳಿ ದೀಪ ಬೆಳಗುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯೂ ಇದೆ.
ಕತ್ತಲೆ ಮತ್ತು ಅಶುಭವನ್ನು ಹೋಗಲಾಡಿಸುವ ಸಂಕೇತ:
ದೀಪವನ್ನು ಯಾವಾಗಲೂ ಕತ್ತಲೆಯ ಮೇಲೆ ಬೆಳಕಿನ ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆ ಮುಖ್ಯ ದ್ವಾರದಲ್ಲಿ ಬೆಳಗುವ ದೀಪವು ಕತ್ತಲೆ, ನಕಾರಾತ್ಮಕತೆ ಮತ್ತು ಹತಾಶೆಯನ್ನು ಬೆಳಕು, ಭರವಸೆ ಮತ್ತು ಸಂತೋಷದಿಂದ ಬದಲಾಯಿಸುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಅದಕ್ಕಾಗಿಯೇ ಜನರು ಈ ದಿನದಂದು ತಮ್ಮ ಮನೆ ಬಾಗಿಲನ್ನು ರಂಗೋಲಿ, ಹೂವುಗಳು ಮತ್ತು ದೀಪಗಳಿಂದ ಅಲಂಕರಿಸುತ್ತಾರೆ.
ಸಂತೋಷ ಮತ್ತು ಸಮೃದ್ಧಿಯ ಸಂಕೇತ:
ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯ ಮುಖ್ಯ ದ್ವಾರವು ಬಹಳ ಮುಖ್ಯ. ಇದು ಶಕ್ತಿ ಮತ್ತು ಸಮೃದ್ಧಿ ಮನೆಗೆ ಪ್ರವೇಶಿಸುವ ಸ್ಥಳವೆಂದು ಪರಿಗಣಿಸಲಾಗಿದೆ ಮನೆಯ ಮುಖ್ಯ ದ್ವಾರದಲ್ಲಿ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನೆಲೆಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ನರಕ ಚತುರ್ದಶಿಯಂದು ಅಭ್ಯಂಗ ಸ್ನಾನವನ್ನು ಏಕೆ ಮಾಡಲಾಗುತ್ತದೆ? ಅದರ ಪ್ರಯೋಜನಗಳೇನು?
ದೀಪಾವಳಿಯಂದು ದೀಪ ಬೆಳಗುವುದರ ಹಿಂದಿನ ವೈಜ್ಞಾನಿಕ ಕಾರಣಗಳು:
- ಮಳೆಗಾಲದ ನಂತರ ದೀಪಾವಳಿ ಬರುತ್ತದೆ. ಮಳೆಗಾಲದಲ್ಲಿ ಗಾಳಿಯು ತೇವಾಂಶದಿಂದ ಕೂಡಿರುತ್ತದೆ ಮತ್ತು ಬ್ಯಾಕ್ಟೀರಿಯಾಗಳಿಂದ ತುಂಬಿರುತ್ತದೆ. ಹೀಗಿರುವಾಗ ದೀಪಾವಳಿಯಂದು ದೀಪ ಹಚ್ಚುವುದರಿಂದ, ಅದರಿಂದ ಬರುವ ಶಾಖವು ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
- ಎಣ್ಣೆಯಲ್ಲಿರುವ ಮೆಗ್ನೀಸಿಯಮ್ ಗಾಳಿಯಲ್ಲಿರುವ ಸಲ್ಫರ್ ಮತ್ತು ಕಾರ್ಬನ್ ಆಕ್ಸೈಡ್‌ಗಳೊಂದಿಗೆ ಪ್ರತಿಕ್ರಿಯಿಸಿ ಸಲ್ಫೇಟ್‌ಗಳು ಮತ್ತು ಕಾರ್ಬೋನೇಟ್‌ಗಳನ್ನು ರೂಪಿಸುತ್ತದೆ. ಇದು ಗಾಳಿಯನ್ನು ಹಗುರಗೊಳಿಸುತ್ತವೆ.
- ಮನೆಯ ಒಳಗೆ ಮತ್ತು ಸುತ್ತಲೂ ಹಲವಾರು ದೀಪಗಳನ್ನು ಬೆಳಗಿಸಿದಾಗ, ವಾತಾವರಣವು ಶುದ್ಧವಾಗುತ್ತದೆ. ದೀಪಗಳಿಂದ ಬರುವ ಹೊಗೆ ವಾತಾವರಣದಲ್ಲಿರುವ ಹಾನಿಕಾರಕ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ.
- ದೀಪದ ಬೆಳಕಿನಿಂದ ಬರುವ ಶಾಖವು ಗಾಳಿಯಲ್ಲಿರುವ ಬ್ಯಾಕ್ಟೀರಿಯಾ, ವೈರಸ್‌ಗಳು ಇತ್ಯಾದಿಗಳನ್ನು ನಾಶಪಡಿಸುತ್ತದೆ.
- ಹಸುವಿನ ತುಪ್ಪದಿಂದ ದೀಪಗಳನ್ನು ಬೆಳಗಿಸುವುದರಿಂದ ಪರಿಸರವು ರೋಗಾಣು ಮುಕ್ತವಾಗಿರುತ್ತದೆ. ಶುದ್ಧ ಹಸುವಿನ ತುಪ್ಪದಿಂದ ದೀಪಗಳನ್ನು ಬೆಳಗಿಸುವುದರಿಂದ ಪರಿಸರವು ಶುದ್ಧವಾಗುತ್ತದೆ. ಪರಿಸರವನ್ನು ಸ್ವಚ್ಛವಾಗಿಡುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ.
- ದೀಪಾವಳಿಯಂದು ಬರುವ ಅಮಾವಾಸ್ಯೆ ಅತ್ಯಂತ ಕತ್ತಲೆಯಾದ ದಿನ. ಈ ಕತ್ತಲೆಯನ್ನು ಹೋಗಲಾಡಿಸಲು, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸಂದೇಶವನ್ನು ರವಾನಿಸಲು ಪ್ರತಿ ಮನೆಯಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Lifestyle
