Hashtagintro

ನಾಲ್ವರು ಇರಲಿದ್ದಾರೆ… ನ್ಯೂಝಿಲೆಂಡ್ ಸರಣಿಗೂ ಮುನ್ನ ಗಿಲ್ ರಣತಂತ್ರ!

ನಾಲ್ವರು ಇರಲಿದ್ದಾರೆ… ನ್ಯೂಝಿಲೆಂಡ್ ಸರಣಿಗೂ ಮುನ್ನ ಗಿಲ್ ರಣತಂತ್ರ!

ನ್ಯೂಝಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ನಾಲ್ವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲಿದೆ ಎಂದು ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, ತಂಡದ ಬೌಲಿಂಗ್ ತಂತ್ರಗಾರಿಕೆ ಮತ್ತು ಸಂಯೋಜನೆಯ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಭಾರತದ ವೇಗದ ಬೌಲರ್‌ಗಳು ನೀಡಿದ ಅದ್ಭುತ ಪ್ರದರ್ಶನವು ಆಡಳಿತ ಮಂಡಳಿಗೆ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವಲ್ಲಿ “ಸಂತೋಷದ ತಲೆನೋವು” ತಂದೊಡ್ಡಿದೆ ಎಂದು ಗಿಲ್ ಅಭಿಪ್ರಾಯಪಟ್ಟಿದ್ದಾರೆ. ಅಂತಿಮ ಪ್ಲೇಯಿಂಗ್ ಇಲೆವೆನ್ ಅನ್ನು ಇನ್ನೂ ನಿರ್ಧರಿಸಿಲ್ಲವಾದರೂ, ನಾಲ್ವರು ವೇಗಿಗಳು ಆಡುವುದು ಖಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಿಚ್ ತಂತ್ರ ಮತ್ತು ಬ್ಯಾಟಿಂಗ್ ಆಳ:

ನ್ಯೂಝಿಲೆಂಡ್‌ನ ಪಿಚ್‌ಗಳು ಪಂದ್ಯದ ಮೂರನೇ ದಿನದ ನಂತರ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿ ಬದಲಾಗುತ್ತವೆ. ಈ ಹಿನ್ನೆಲೆಯಲ್ಲಿ, ಚೆಂಡು ಹಳೆಯದಾದಾಗಲೂ ಪಿಚ್‌ಗೆ ಬಲವಾಗಿ ಅಪ್ಪಳಿಸುವಂತೆ ಬೌಲಿಂಗ್ ಮಾಡುವ ಸಾಮರ್ಥ್ಯವಿರುವ ವೇಗಿಗಳ ಅಗತ್ಯ ತಂಡಕ್ಕಿದೆ ಎಂದು ಗಿಲ್ ವಿವರಿಸಿದ್ದಾರೆ.

ಇದರೊಂದಿಗೆ ತಂಡದ ಬ್ಯಾಟಿಂಗ್ ಆಳಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ. ತಂಡದಲ್ಲಿ ಏಳು ಮಂದಿ ಪರಿಪೂರ್ಣ ಬ್ಯಾಟರ್‌ಗಳಿರಲಿದ್ದಾರೆ. ಅಲ್ಲದೆ, ಆಕಾಶ್ ದೀಪ್, ಅನ್ಶುಲ್ ಕಂಬೋಜ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರು 8 ಮತ್ತು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ತಂಡದಲ್ಲಿನ ಪ್ರಮುಖ ಬದಲಾವಣೆಗಳು:

ಹಿರಿಯ ವೇಗದ ಬೌಲರ್ ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಮರಳಿರುವುದು ಭಾರತದ ಬೌಲಿಂಗ್ ವಿಭಾಗಕ್ಕೆ ಆನೆಬಲ ತಂದಿದೆ. ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಯುವ ವೇಗಿ ಗುರ್ನೂರ್ ಬ್ರಾರ್ ಅವರನ್ನು ಟೆಸ್ಟ್ ತಂಡದಲ್ಲೂ ಉಳಿಸಿಕೊಳ್ಳಲಾಗಿದೆ. ಮತ್ತೊಂದೆಡೆ, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ.

ಬುಮ್ರಾ ಮತ್ತು ಬ್ರಾರ್ ಅವರೊಂದಿಗೆ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಅನ್ಶುಲ್ ಕಂಬೋಜ್ ಹಾಗೂ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ವೇಗದ ಬೌಲಿಂಗ್ ವಿಭಾಗದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಇವರಲ್ಲಿ ಅಂತಿಮ ಹನ್ನೊಂದರ ಬಳಗದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಧೋನಿ ನಿವೃತ್ತಿ? ಸಿಎಸ್​ಕೆ ಅಭಿಮಾನಿಗಳಿಗೆ ಕಾದಿದ್ಯಾ ಬಿಗ್ ಶಾಕ್!

ಭಾರತದ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅನ್ಶುಲ್ ಕಂಬೋಜ್, ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಗುರ್ನೂರ್ ಬ್ರಾರ್.

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language