
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಅಂತ್ಯವಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಅಲ್ಲದೆ ಪದೇ ಪದೇ ಗಾಯಕ್ಕೆ ತುತ್ತಾಗುತ್ತಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬದಲಿಗೆ ಹೊಸ ಆಲ್ರೌಂಡರ್ ಹುಡುಕಾಟಕ್ಕಾಗಿ ಆಯ್ಕೆ ಮಂಡಳಿ ನಾನಾ ಕಸರತ್ತುಗಳನ್ನು ಮಾಡಿತು. ಆದರೆ ಈ ಹುಡುಕಾಟದಲ್ಲಿ ಆಯ್ಕೆ ಮಂಡಳಿ ಯಶಸ್ವಿಯಾಗಲಿಲ್ಲ. ಇದನ್ನು ಗಮನಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಟೀಂ ಇಂಡಿಯಾಕ್ಕೆ ಸಲಹೆ ನೀಡಿದ್ದು, ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರನಿಗೆ ಪರ್ಯಾಯ ಆಟಗಾರನನ್ನು ಹುಡುಕುವ ಬದಲು, ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಆಟಗಾರರಿಗೆ ಅವಕಾಶ ನೀಡಬೇಕು ಎಂದಿದ್ದಾರೆ.
ಆಟಗಾರನನ್ನು ಹುಡುಕುವುದು ಸುಲಭವಲ್ಲ
ಬೆಂಗಳೂರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಬೇಕಿದ್ದ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದ ರದ್ದಾದ ಬಳಿಕ ಜಿಯೋಸ್ಟಾರ್ನಲ್ಲಿ ಮಾತನಾಡಿದ ಗವಾಸ್ಕರ್, ‘ಬ್ಯಾಟಿಂಗ್ ಬಲ ಹೆಚ್ಚಿಸುವ ಭರದಲ್ಲಿ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಬಾರದು. ಟಿ20 ಪಂದ್ಯಗಳಲ್ಲಿ ಭಾರತ ಕನಿಷ್ಠ ನಾಲ್ವರು ಪ್ರಮುಖ ಬೌಲರ್ಗಳೊಂದಿಗೆ ಕಣಕ್ಕಿಳಿಯಬೇಕು. ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರನಿಗೆ ಪರ್ಯಾಯ ಹುಡುಕುವ ಪ್ರಯತ್ನದಲ್ಲಿ ಭಾರತ ತಂಡ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದೆ. ಹಾರ್ದಿಕ್ ಅವರ ಸಾಮರ್ಥ್ಯಕ್ಕೆ ಸರಿಸಾಟಿಯಾದ ಆಟಗಾರನನ್ನು ಹುಡುಕುವುದು ಸುಲಭವಲ್ಲ. ಹೀಗಾಗಿ ಅವರನ್ನೇ ಹೋಲುವ ಆಟಗಾರನನ್ನು ಹುಡುಕುವ ಬದಲು, ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸಬಲ್ಲ ಆಟಗಾರರಿಗೆ ಅವಕಾಶ ನೀಡಬೇಕು.
ಇತರ ಆಟಗಾರರನ್ನು ಬೆಳೆಸಬೇಕು
ಹಾರ್ದಿಕ್ ಪಾಂಡ್ಯಗೆ ಪರ್ಯಾಯ ಆಟಗಾರನನ್ನು ಹುಡುಕುವ ಬದಲು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಬಲ್ಲ ಆಟಗಾರರನ್ನು ಬೆಳೆಸಬೇಕು ಎಂದು ಗವಾಸ್ಕರ್ ಹೇಳಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಯುವ ಆಟಗಾರ ನಮನ್ ಧೀರ್ ಅವರ ಹೆಸರನ್ನು ಉಲ್ಲೇಖಿಸಿರುವ ಗವಾಸ್ಕರ್, ನಮನ್ ಧೀರ್ ಬೌಲಿಂಗ್ನಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಬ್ಯಾಟಿಂಗ್ನಲ್ಲೂ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಭಾರತ ಕನಿಷ್ಠ ನಾಲ್ವರು ಪೂರ್ಣಾವಧಿ ಬೌಲರ್ಗಳನ್ನು ಆಡಿಸಬೇಕು. ಐದನೇ ಮತ್ತು ಆರನೇ ಬೌಲಿಂಗ್ ಆಯ್ಕೆಗಳಾಗಿ ಬ್ಯಾಟಿಂಗ್ ಮಾಡಬಲ್ಲ ಆಲ್ರೌಂಡರ್ಗಳನ್ನು ಬಳಸಿಕೊಳ್ಳಬಹುದು. ನಮನ್ ಧೀರ್ ಅವರಂತಹ ಬ್ಯಾಟರ್ಗಳು ಎರಡು ಅಥವಾ ಮೂರು ಓವರ್ಗಳನ್ನು ಬೌಲಿಂಗ್ ಮಾಡಬಲ್ಲರು. ಅಕ್ಷರ್ ಪಟೇಲ್ ಅವರಂತಹ ಆಟಗಾರರು ತಮ್ಮ ನಾಲ್ಕು ಓವರ್ಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಗವಾಸ್ಕರ್ ವಿವರಿಸಿದ್ದಾರೆ.
ಭಾರತ- ವಿಂಡೀಸ್ ಕೊನೆಯ ಟಿ20 ಪಂದ್ಯ ಮಳೆಯಿಂದ ರದ್ದು; ಸರಣಿ 2-2 ರ ಡ್ರಾದಲ್ಲಿ ಅಂತ್ಯ
ಬ್ಯಾಟಿಂಗ್ಗೆ ಆದ್ಯತೆ ನೀಡಿದರೆ ಅಪಾಯ
ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸುವ ಉದ್ದೇಶದಿಂದ ಬೌಲಿಂಗ್ ಬಲವನ್ನು ಕಡಿಮೆ ಮಾಡಬಾರದು ಎಂದು ಎಚ್ಚರಿಸಿರುವ ಗವಾಸ್ಕರ್, ‘ಎಂಟನೇ ಕ್ರಮಾಂಕದವರೆಗೂ ಬ್ಯಾಟಿಂಗ್ಗೆ ಆದ್ಯತೆ ನೀಡಿದಾಗ, ಬೌಲಿಂಗ್ ವಿಭಾಗ ದುರ್ಬಲವಾಗುತ್ತದೆ. ಇಂತಹ ಸಂದರ್ಭಗಳಲ್ಲೇ ತಂಡ ಸೋಲನ್ನು ಅನುಭವಿಸಬೇಕಾಗುತ್ತದೆ. ಅಲ್ಲದೆ, ತಂಡದ ಪ್ರಮುಖ ಸ್ಪಿನ್ನರ್ಗಳನ್ನು ಗುರುತಿಸಿ ಅವರಿಗೆ ನಿರಂತರ ಬೆಂಬಲ ನೀಡಬೇಕು. ಪ್ರತಿಯೊಂದು ಪಂದ್ಯದಲ್ಲೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗದಿದ್ದರೂ, ತಂಡದ ದೊಡ್ಡ ಯೋಜನೆಯಲ್ಲಿ ತಮ್ಮ ಸ್ಥಾನ ಭದ್ರವಾಗಿದೆ ಎಂಬ ವಿಶ್ವಾಸವನ್ನು ಸ್ಪಿನ್ನರ್ಗಳಲ್ಲಿ ಮೂಡಿಸಬೇಕು. ಟಿ20 ಮಾದರಿಯಲ್ಲಿ ಸ್ಪಿನ್ನರ್ಗಳು ಬೇಗನೆ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಅವರಿಗೆ ಸೂಕ್ತ ಬೆಂಬಲ ಅಗತ್ಯ ಎಂದು ಗವಾಸ್ಕರ್ ತಿಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
