
ಇಂದಿನ ವೇಗದ ಜೀವನದಲ್ಲಿ, ಜನರು ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಮತ್ತು ಫಿಟ್ ಆಗಿರಲು ಬಯಸುತ್ತಾರೆ. ಅನೇಕರಿಗೆ ಇದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಆದರೆ ಇದನ್ನು ಸಾಧಿಸುವುದು ಅಷ್ಟೇನೂ ಕಷ್ಟಕರವಲ್ಲ. ಬೆಳಗಿನ ದಿನಚರಿಯಲ್ಲಿ (Morning Routine) ತಪ್ಪದೆ ಕೆಲವೊಂದು ಅಭ್ಯಾಸಗಳನ್ನು ಪಾಲಿಸುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು. ನಮ್ಮ ದೈನಂದಿನ ಅಭ್ಯಾಸಗಳು ನಮ್ಮ ಆರೋಗ್ಯ ಮತ್ತು ದೀರ್ಘಾಯುಷ್ಯ ಎರಡರ ಮೇಲೂ ಪರಿಣಾಮ ಬೀರುತ್ತವೆ. ಹೀಗಿರುವಾಗ ಬೆಳಗ್ಗೆ ಎದ್ದ ತಕ್ಷಣ ಈ ಕೆಲವು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಹೆಲ್ತಿ ಲೈಫ್ ಲೀಡ್ ಮಾಡಬಹುದು.
ಪ್ರತಿನಿತ್ಯ ಬೆಳಿಗ್ಗೆ ಬೇಗ ಎದ್ದೇಳಿ:
ಬೆಳಿಗ್ಗೆ ಬೇಗನೆ ಏಳುವುದು ಕೇವಲ ಅಭ್ಯಾಸವಲ್ಲ, ಬದಲಾಗಿ ಆರೋಗ್ಯಕರ ದಿನಚರಿಯ ಆರಂಭವಾಗಿದೆ. ಇದು ನಿಮ್ಮ ದೇಹವು ಅದರ ನೈಸರ್ಗಿಕ ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಬೆಳಿಗ್ಗೆ ಬೇಗನೆ ಏಳುವುದರಿಂದ ದೇಹಕ್ಕೆ ಶಕ್ತಿ ಲಭಿಸುತ್ತದೆ. ದಿನವನ್ನು ಉತ್ತಮವಾಗಿ ಯೋಜಿಸಲು ಸಮಯ ಸಿಗುತ್ತದೆ ಮತ್ತು ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣ ಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ಒತ್ತಡವೂ ಕಡಿಮೆಯಾಗುತ್ತದೆ. ಆದ್ದರಿಂದ ನಿತ್ಯ ಬೆಳಗ್ಗೆ ಬೇಗ ಎದೇಳುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ:
ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರನ್ನು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹವು ಒಳಗಿನಿಂದ ಸಕ್ರಿಯಗೊಳ್ಳುತ್ತದೆ. ಬೆಳಿಗ್ಗೆ ಒಂದು ಲೋಟ ನೀರು ರಾತ್ರಿಯ ನಿರ್ಜಲೀಕರಣವನ್ನು ನಿವಾರಿಸುತ್ತದೆ. ಇದು ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸುತ್ತದೆ, ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ. ಈ ಅಭ್ಯಾಸ ಚರ್ಮ ಮತ್ತು ಮೂತ್ರಪಿಂಡದ ಆರೋಗ್ಯಕ್ಕೂ ಪ್ರಯೋಜನಕಾರಿ.
ಬೆಳಗಿನ ದಿನಚರಿಯಲ್ಲಿ ಲಘು ವ್ಯಾಯಾಮ ಅಥವಾ ಯೋಗ ಮಾಡಿ:
ಬೆಳಗಿನ ವ್ಯಾಯಾಮವು ದೇಹಕ್ಕೆ ಇಡೀ ದಿನಕ್ಕೆ ಶಕ್ತಿಯನ್ನು ನೀಡುತ್ತದೆ. ಯೋಗ, ಸ್ಟ್ರೆಚಿಂಗ್, ವಾಕಿಂಗ್ ಅಥವಾ ಲಘು ವ್ಯಾಯಾಮವು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದಾಗಿ ನಿಮ್ಮ ಸ್ನಾಯುಗಳು ಸಕ್ರಿಯವಾಗುತ್ತವೆ. ಇದು ದೈಹಿಕ ಸದೃಢತೆಯನ್ನು ಹೆಚ್ಚಿಸುವುದಲ್ಲದೆ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಅಲ್ಲದೆ ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವುದರಿಂದ ನೀವು ಇಡೀ ದಿನ ಆಕ್ಟಿವ್ ಅಗಿರುತ್ತೀರಿ.
ಇದನ್ನೂ ಓದಿ: ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಬೇಕು? ಅಗತ್ಯಕ್ಕಿಂತ ಹೆಚ್ಚು ಕುಡಿದರೆ ಏನಾಗುತ್ತದೆ?
ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮಾಡಿ:
ಬೆಳಿಗ್ಗೆ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಈ ಅಭ್ಯಾಸವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ದಿನವಿಡೀ ಸಕಾರಾತ್ಮಕ ಚಿಂತನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಯಮಿತ ಧ್ಯಾನವು ಭಾವನಾತ್ಮಕ ಸಮತೋಲನವನ್ನು ಸುಧಾರಿಸುತ್ತದೆ. ಹಾಗಾಗಿ ಪ್ರತಿನಿತ್ಯ 5 ರಿಂದ 10 ನಿಮಿಷಗಳ ಕಾಲ ಧ್ಯಾನವನ್ನು ಮಾಡಿ.
ಆರೋಗ್ಯಕರ ಉಪಹಾರ ಸೇವಿಸಿ:
ಬೆಳಗಿನ ಉಪಾಹಾರವು ನಿಮ್ಮ ದೇಹಕ್ಕೆ ಇಡೀ ದಿನಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿರುವ ಆಹಾರಗಳನ್ನೇ ಸೇವನೆ ಮಾಡಿ. ಆರೋಗ್ಯಕರ ಉಪಹಾರ ಸೇವಿಸುವುದರಿಂದ ಅತಿಯಾಗಿ ತಿನ್ನುವುದನ್ನು ತಡೆಯಬಹುದು. ತೂಕವೂ ನಿಯಂತ್ರಣದಲ್ಲಿರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Lifestyle
