Hashtagintro

Nepal Earthquake: ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ, ಭಾರತ ಸೇರಿದಂತೆ 5 ದೇಶಗಳಲ್ಲಿ ಕಂಪಿಸಿದ ಭೂಮಿ

Nepal Earthquake: ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ, ಭಾರತ ಸೇರಿದಂತೆ 5 ದೇಶಗಳಲ್ಲಿ ಕಂಪಿಸಿದ ಭೂಮಿ

ಕಠ್ಮಂಡು, ನವೆಂಬರ್ 24: ನೇಪಾಳದಲ್ಲಿ ಭೂಕಂಪ ಸಂಭವಿಸಿದೆ. ಭಾರತ ಸೇರಿದಂತೆ ಹಲವು ಗಡಿ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮಂಗಳವಾರ ಬೆಳಗ್ಗೆ ನೇಪಾಳದ ಕೋಶಿ ಪ್ರಾಂತ್ಯದ ಲೆಲೆಪ್ ಸಮೀಪ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಪರಿಣಾಮ ಭಾರತ, ಭೂತಾನ್, ಬಾಂಗ್ಲಾದೇಶ ಮತ್ತು ಚೀನಾದ ಕೆಲವು ಭಾಗಗಳಲ್ಲೂ ಕಂಪನದ ಅನುಭವವಾಗಿದೆ. ಬೆಳಗಿನ ಜಾವ ಜನರು ಭೂಮಿ ನಡುಗಿದ ಅನುಭವದಿಂದ ಆತಂಕಕ್ಕೊಳಗಾಗಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಬೆಳಗ್ಗೆ ಸುಮಾರು 7.02ಕ್ಕೆ ಭೂಕಂಪ ಸಂಭವಿಸಿದೆ. ಭೂಮಿಯ ಒಳಗೆ ಸುಮಾರು 20 ಕಿಲೋಮೀಟರ್ ಆಳದಲ್ಲಿ ಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.

ಆದರೆ ನೇಪಾಳದ ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರವು ಭೂಕಂಪದ ತೀವ್ರತೆ 5.6 ಎಂದು ದಾಖಲಿಸಿದೆ. ನೇಪಾಳ-ಟಿಬೆಟ್ ಗಡಿಯ ಸಮೀಪದ ತಾಪ್ಲೆಜಂಗ್ ಜಿಲ್ಲೆಯ ಓಲಾಂಗ್‌ಚುಂಗ್ ಗೋಲಾ ಪ್ರದೇಶವನ್ನು ಕೇಂದ್ರಬಿಂದುವೆಂದು ಗುರುತಿಸಲಾಗಿದೆ ಎಂದು ದಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

ಭಾರತದ ಬಿಹಾರ, ಮೇಘಾಲಯ ಮತ್ತು ಪಶ್ಚಿಮ ಬಂಗಾಳದ ಕೆಲವು ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದೆ. ವಿಶೇಷವಾಗಿ ಹಿಮಾಲಯದ ಗಡಿ ಭಾಗಗಳಲ್ಲಿ ಭೂಕಂಪನದ ಪರಿಣಾಮ ಕಂಡುಬಂದಿದೆ. ಆದರೆ ಎಲ್ಲಿಯೂ ದೊಡ್ಡ ಪ್ರಮಾಣದ ಹಾನಿ ಸಂಭವಿಸಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಒಂದೇ ದಿನ ಅಸ್ಸಾಂನಲ್ಲೂ ಭೂಕಂಪ
ನೇಪಾಳದಲ್ಲಿ ಭೂಕಂಪ ಸಂಭವಿಸಿದ ದಿನವೇ ಅಸ್ಸಾಂನಲ್ಲೂ ಮತ್ತೊಂದು ಸಣ್ಣ ಪ್ರಮಾಣದ ಭೂಕಂಪ ದಾಖಲಾಗಿದೆ. ಮಂಗಳವಾರ ಬೆಳಗಿನ ಜಾವ 3.39ಕ್ಕೆ ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ 2.5 ತೀವ್ರತೆಯ ಕಂಪನ ಸಂಭವಿಸಿದೆ. ಭೂಮಿಯ ಸುಮಾರು 15 ಕಿಲೋಮೀಟರ್ ಆಳದಲ್ಲಿ ಇದರ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಇದನ್ನೂ ಓದಿ: ಪೆಸಿಫಿಕ್ ಸಾಗರದಲ್ಲಿ ನಡುಗಿದ ಭೂಮಿ: ವನವಾಟು ದ್ವೀಪಗಳಲ್ಲಿ 3 ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಭೂಕಂಪ ಸಂಭವಿಸಲು ಕಾರಣವೇನು?
ಭಾರತ ಮತ್ತು ನೇಪಾಳದ ಬಹುತೇಕ ಹಿಮಾಲಯ ಪ್ರದೇಶಗಳು ಭೂಕಂಪದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಾಗಿವೆ. ಇದಕ್ಕೆ ಪ್ರಮುಖ ಕಾರಣ ಭೂಮಿಯ ಒಳಭಾಗದಲ್ಲಿರುವ ಭೂಫಲಕಗಳ ಚಲನೆ.

ಭಾರತೀಯ ಭೂಫಲಕವು ಉತ್ತರದ ಕಡೆಗೆ ಚಲಿಸಿ ಯುರೇಷಿಯನ್ ಭೂಫಲಕದೊಂದಿಗೆ ನಿರಂತರವಾಗಿ ಘರ್ಷಿಸುತ್ತಿದೆ. ಈ ಒತ್ತಡದಿಂದ ಭೂಮಿಯ ಒಳಭಾಗದಲ್ಲಿ ಶಕ್ತಿ ಸಂಗ್ರಹವಾಗುತ್ತದೆ. ಅದು ಬಿಡುಗಡೆಯಾದಾಗ ಭೂಕಂಪ ಸಂಭವಿಸುತ್ತದೆ. ಹೀಗಾಗಿ ಹಿಮಾಲಯದ ಸುತ್ತಮುತ್ತ ಆಗಾಗ ಭೂಕಂಪಗಳು ಸಂಭವಿಸುತ್ತವೆ.

ಭೂಕಂಪ ಸಂಭವಿಸಿದಾಗ ಏನು ಮಾಡಬೇಕು?
– ಕಂಪನದ ಅನುಭವವಾದರೆ ಗಾಬರಿಯಾಗದೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು.
– ಮನೆಯೊಳಗಿದ್ದರೆ ಗಟ್ಟಿಯಾದ ಮೇಜಿನ ಕೆಳಗೆ ಕುಳಿತು ತಲೆ ಮತ್ತು ಕುತ್ತಿಗೆಯನ್ನು ರಕ್ಷಿಸಿಕೊಳ್ಳಬೇಕು.
– ಕಿಟಕಿ, ಗಾಜು ಮತ್ತು ಭಾರವಾದ ವಸ್ತುಗಳಿಂದ ದೂರವಿರಬೇಕು.
– ಲಿಫ್ಟ್ ಬಳಸಬಾರದು.
– ಕಂಪನ ನಿಂತ ಬಳಿಕ ಕಟ್ಟಡದಿಂದ ಸುರಕ್ಷಿತವಾಗಿ ಹೊರಬಂದು ತೆರೆದ ಜಾಗದಲ್ಲಿ ನಿಲ್ಲಬೇಕು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source: TV9 Kannada World

Read full article on TV9 Kannada World

Leave a Comment

Your email address will not be published. Required fields are marked *

समाचार की भाषा चुनें / Choose News Language