Hashtagintro

ಆಸ್ಕರ್ 2027 ಅರ್ಹತಾ ಪಟ್ಟಿಗೆ ಭಾರತದ ‘ಗೋಂಧಲ್’ ಸಿನಿಮಾ ಎಂಟ್ರಿ: 104 ಚಿತ್ರಗಳ ನಡುವೆ ಪೈಪೋಟಿ

ಆಸ್ಕರ್ 2027 ಅರ್ಹತಾ ಪಟ್ಟಿಗೆ ಭಾರತದ ‘ಗೋಂಧಲ್’ ಸಿನಿಮಾ ಎಂಟ್ರಿ: 104 ಚಿತ್ರಗಳ ನಡುವೆ ಪೈಪೋಟಿ

99ನೇ ಆಸ್ಕರ್ ಪ್ರಶಸ್ತಿಯ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದ ಅರ್ಹತಾ ಪಟ್ಟಿಗೆ ಭಾರತದ ‘ಗೋಂಧಲ್’ ಸಿನಿಮಾ ಆಯ್ಕೆಯಾಗಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಮಂಗಳವಾರ ಈ ಘೋಷಣೆ ಮಾಡಿದೆ. ದಾಖಲೆಯ 104 ಸಿನಿಮಾಗಳ ಸಾಲಿನಲ್ಲಿ ಈ ಮರಾಠಿ ಚಿತ್ರವೂ ಸ್ಥಾನ ಪಡೆದಿದೆ. ಸದ್ಯಕ್ಕೆ ಇದು ಸ್ಪರ್ಧೆಗೆ ಅರ್ಹತೆ ಪಡೆದಿರುವ ಪಟ್ಟಿಯಷ್ಟೇ. ಅಂತಿಮ ನಾಮನಿರ್ದೇಶನ ಇನ್ನೂ ಆಗಬೇಕಿದೆ.

ಮಹಾರಾಷ್ಟ್ರದ ಸಾಂಪ್ರದಾಯಿಕ ‘ಗೋಂಧಲ್’ ಜಾನಪದ ಆಚರಣೆಯ ಹಿನ್ನೆಲೆಯಲ್ಲಿ ಈ ಥ್ರಿಲ್ಲರ್ ಸಿನಿಮಾ ಮೂಡಿಬಂದಿದೆ. ಆಸ್ಕರ್ ಅರ್ಹತೆ ಪಡೆಯುವ ಮುನ್ನವೇ ಈ ಚಿತ್ರ ದೊಡ್ಡ ಮಟ್ಟದ ಗಮನ ಸೆಳೆದಿತ್ತು. 2025ರ 56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರಕ್ಕೆ ಉತ್ತಮ ಮನ್ನಣೆ ಸಿಕ್ಕಿತ್ತು. ನಿರ್ದೇಶಕ ಸಂತೋಷ್ ದವಾಖರ್ ಅವರು ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಪ್ರತಿಷ್ಠಿತ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ ಗೆದ್ದಿದ್ದರು.

ಗ್ರಾಮೀಣ ಮಹಾರಾಷ್ಟ್ರದ ಹಿನ್ನೆಲೆಯಲ್ಲಿ ನಡೆಯುವ ಈ ಕಥೆ ಒಂದೇ ರಾತ್ರಿಯಲ್ಲಿ ಘಟಿಸುತ್ತದೆ. ಶ್ರೀಮಂತ ವ್ಯಕ್ತಿ ಆನಂದ್ ಜೊತೆಗಿನ ಅತೃಪ್ತ ದಾಂಪತ್ಯದಲ್ಲಿ ಸಿಲುಕಿರುವ ಸುಮನ್ ಎಂಬ ಮಹಿಳೆಯ ಸುತ್ತ ಕಥೆ ಸಾಗುತ್ತದೆ. ಸುಮನ್‌ಗೆ ಗೋಂಧಲಿ ಕಲಾವಿದ ಸಾಹೇಬನ ಮೇಲೆ ಪ್ರೀತಿಯಾಗುತ್ತದೆ. ತನ್ನ ದಾಂಪತ್ಯದಿಂದ ಹೊರಬರಲು ಆಕೆ ದಾರಿ ಹುಡುಕುತ್ತಾಳೆ. ಈ ಸಂಚಿನಲ್ಲಿ ಆನಂದ್ ಸಂಬಂಧಿ ಸರ್ಜೆರಾವ್ ಕೂಡ ಸಿಲುಕುತ್ತಾನೆ.

ತನ್ನ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಸುಮನ್ ಮಾಡುವ ಪ್ರಯತ್ನ ಮುಂದೆ ಬೇರೆಯದೇ ತಿರುವು ಪಡೆಯುತ್ತದೆ. ಅದು ಕೊಲೆ. ಮೋಸ, ಆಸೆ ಮತ್ತು ಬದುಕಿ ಉಳಿಯುವ ಹೋರಾಟದ ರೋಚಕ ಕಥೆಯಾಗಿ ಬದಲಾಗುತ್ತದೆ. ಚಿತ್ರದಲ್ಲಿ ಸುಮನ್ ಪಾತ್ರಕ್ಕೆ ಇಶಿತಾ ದೇಶಮುಖ್ ಜೀವ ತುಂಬಿದ್ದಾರೆ. ಕಿಶೋರ್ ಕದಂ, ಯೋಗೇಶ್ ಸೋಹೋನಿ, ನಿಶಾದ್ ಭೋಯಿರ್ ಮತ್ತು ಅನುಜ್ ಪ್ರಭು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್ ರೇಸ್‌ನಲ್ಲಿ ಗೋಂಧಲ್  ಅಸಮಾಧಾನ ಹೊರಹಾಕಿದ ಖ್ಯಾತ ನಿರ್ದೇಶಕ

99ನೇ ಅಕಾಡೆಮಿ ಪ್ರಶಸ್ತಿಗಳ ಪ್ರಾಥಮಿಕ ಮತದಾನ ಡಿಸೆಂಬರ್ 7 ರಿಂದ 11ರವರೆಗೆ ನಡೆಯಲಿದೆ. ಡಿಸೆಂಬರ್ 15ರಂದು ಶಾರ್ಟ್‌ಲಿಸ್ಟ್ ಪಟ್ಟಿ ಪ್ರಕಟವಾಗಲಿದೆ. 2027ರ ಜನವರಿ 21ರಂದು ಅಂತಿಮ ಆಸ್ಕರ್ ನಾಮನಿರ್ದೇಶನಗಳು ಘೋಷಣೆಯಾಗಲಿವೆ. ಮಾರ್ಚ್ 14ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಭವ್ಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language