Hashtagintro

ಇತಿಹಾಸ ಸೃಷ್ಟಿಸಿದ ಮನಿಷಾ ಭಾನ್ವಾಲಾ; ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದ ಭಾರತದ ಮೊದಲ ಮಹಿಳಾ ಕುಸ್ತಿಪಟು!

ಇತಿಹಾಸ ಸೃಷ್ಟಿಸಿದ ಮನಿಷಾ ಭಾನ್ವಾಲಾ; ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದ ಭಾರತದ ಮೊದಲ ಮಹಿಳಾ ಕುಸ್ತಿಪಟು!

ನವದೆಹಲಿ, ಅಕ್ಟೋಬರ್ 30: ಭಾರತದ ಕ್ರೀಡಾಲೋಕಕ್ಕೆ ಇಂದು ಹೆಮ್ಮೆಯ ಕ್ಷಣ. ಏಕೆಂದರೆ, ಕಜಕಸ್ತಾನ್‌ನ ಅಸ್ತಾನಾದಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ 29 ವರ್ಷದ ಕುಸ್ತಿಪಟು ಮನಿಷಾ ಭಾನ್ವಾಲಾ ಚಿನ್ನದ ಪದಕ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇಂದು ನಡೆದ ಮಹಿಳೆಯರ 59 ಕೆಜಿ ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಅಮೆರಿಕದ ಎಲಿಜಬೆತ್ ನೆಟ್ಟೆ ಅವರನ್ನು 8-6 ಅಂತರದಿಂದ ಸೋಲಿಸುವ ಮೂಲಕ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮನಿಷಾ ಭಾನ್ವಾಲಾ ಪಾತ್ರರಾಗಿದ್ದಾರೆ.

59 ಕೆಜಿ ವಿಭಾಗವು ಒಲಿಂಪಿಕ್​ಯೇತರ ವಿಭಾಗವಾಗಿದ್ದರೂ, ಭಾರತದ ಯಾವುದೇ ಮಹಿಳಾ ಕುಸ್ತಿಪಟು ಇದುವರೆಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರದ ಕಾರಣ ಈ ಗೆಲುವು ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಎದುರಾಗಿದ್ದ ಹಿನ್ನಡೆಯನ್ನು ಮರೆತು ಮನಿಷಾ ಭಾನ್ವಾಲಾ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನಿಷಾ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಅಕಾರಿ ಫ್ಯೂಜಿನಾಮಿ ವಿರುದ್ಧ ಸೋತಿದ್ದರು. ಆದರೆ, ವಿಶ್ವ ಚಾಂಪಿಯನ್‌ಷಿಪ್‌ಗಾಗಿ 59 ಕೆಜಿ ವಿಭಾಗಕ್ಕೆ ಬದಲಾದ ಅವರ ನಿರ್ಧಾರ ಅವರನ್ನು ಚಿನ್ನದ ಪದಕದತ್ತ ಕೊಂಡೊಯ್ದಿತು.

ಇದನ್ನೂ ಓದಿ: ಪ್ರಸಿದ್ಧ್ ಕೃಷ್ಣ ಬದಲಿಗೆ ಸಿರಾಜ್‌ಗೆ ಹೆಚ್ಚಿನ ಜವಾಬ್ದಾರಿ; ಬಿಸಿಸಿಐ ಮಹತ್ವದ ಅಪ್‌ಡೇಟ್

ಫೈನಲ್‌ಗೆ ತಲುಪುವ ಮುನ್ನ ಮನಿಷಾ ಕೆನಡಾದ ಲಾರೆನ್ಸ್ ಬೊರೆಗಾರ್ಡ್, ಮಂಗೋಲಿಯಾದ ಬೊಲೊರ್ತುಯಾ ಖುರೆಲ್ಖೂ ಮತ್ತು ಕಜಕಸ್ತಾನ್‌ನ ಅಲ್ಟಿನ್ ಶಾಗಾಯೇವಾ ಅವರನ್ನು ಸೋಲಿಸಿದ್ದರು.

ಅಮೆರಿಕದ ಪ್ಯಾನ್ ಅಮೆರಿಕನ್ ಚಾಂಪಿಯನ್ ಎಲಿಜಬೆತ್ ನೆಟ್ಟೆ ವಿರುದ್ಧದ ಫೈನಲ್‌ನ ಮೊದಲಾರ್ಧದಲ್ಲಿ ಮನಿಷಾ 1-5ರಿಂದ ಹಿನ್ನಡೆಯಲ್ಲಿದ್ದರು. ಆದರೆ, ದ್ವಿತೀಯಾರ್ಧದಲ್ಲಿ 8-6 ಅಂತರದಿಂದ ಜಯಭೇರಿ ಬಾರಿಸಿದರು.

ಅಭಿನಂದನೆಗಳ ಮಹಾಪೂರ:

ಭಾರತೀಯ ಕುಸ್ತಿ ಫೆಡರೇಶನ್, ಕ್ರೀಡಾ ಸಚಿವಾಲಯ ಹಾಗೂ ಪ್ರಮುಖ ಕ್ರೀಡಾಪಟುಗಳು ಮನಿಷಾ ಅವರ ಈ ಅಭೂತಪೂರ್ವ ಸಾಧನೆಗೆ ದೇಶದಾದ್ಯಂತ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಐತಿಹಾಸಿಕ ಗೆಲುವು ಭಾರತೀಯ ಮಹಿಳಾ ಕುಸ್ತಿಯ ಹೊಸ ಯುಗಕ್ಕೆ ನಾಂದಿ ಹಾಡಿದ್ದು, ಮುಂಬರುವ ಒಲಿಂಪಿಕ್ಸ್ ಹಾಗೂ ಪ್ರಮುಖ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳ ಭರವಸೆಯನ್ನು ಮೂಡಿಸಿದೆ.

ಇದನ್ನೂ ಓದಿ: WPLನಲ್ಲಿ ಹೊಸ ಇತಿಹಾಸ: ಯಾರು ಈ ಉಮಾ ಕಾಶ್ವಿ?

ಅಂದಹಾಗೆ, ಈ ಬಾರಿಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅನೇಕ ಮಹಿಳಾ ಪಟುಗಳು ಅಭೂತಪೂರ್ವ ಪ್ರದರ್ಶನ ನೀಡಿದ್ದಾರೆ.  ನೀಲಮ್ ಸಿರೋಹಿ (50 ಕೆಜಿ) ಮತ್ತು ಕಾಜಲ್ ಧೋಚಕ್ (76 ಕೆಜಿ) ಫೈನಲ್ ತಲುಪಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಹಿಂದೆ 2021ರಲ್ಲಿ ಅಂಶು ಮಲಿಕ್ (57 ಕೆಜಿ) ಫೈನಲ್ ತಲುಪಿ ಬೆಳ್ಳಿ ಗೆದ್ದಿದ್ದರು. ವಿನೇಶ್ ಫೋಗಟ್ ಹಾಗೂ ಅಂತಿಮ್ ಪಂಗಲ್ ತಲಾ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.

ಮನಿಷಾ ಭಾನ್ವಾಲಾ ಹಿನ್ನೆಲೆ:

ಹರ್ಯಾಣದ ಜಿಂದ್ ಜಿಲ್ಲೆಯವರಾದ 29 ವರ್ಷದ ಮನಿಷಾ, ತಮ್ಮ ವೃತ್ತಿಜೀವನದಲ್ಲಿ 57 ಕೆಜಿಯಿಂದ 65 ಕೆಜಿವರೆಗಿನ ವಿವಿಧ ವಿಭಾಗಗಳಲ್ಲಿ ಹಾಗೂ 3 ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿದ ಅನುಭವವನ್ನು ಬಳಸಿಕೊಂಡು ಕ್ರೀಡಾ ಜೀವನದ ಬೃಹತ್ ಯಶಸ್ಸನ್ನು ದೇಶಕ್ಕೆ ತಂದುಕೊಟ್ಟಿದ್ದಾರೆ.

 

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language