Hashtagintro

ಒಮಾನ್ ಕರಾವಳಿಯಲ್ಲಿ ಭಾರತೀಯ ನಾವಿಕನ ಸಾವಿಗೆ ಭಾರತ ಖಂಡನೆ; ಮಾತುಕತೆ ಮೂಲಕ ಉದ್ವಿಗ್ನತೆ ಶಮನಕ್ಕೆ ಆಗ್ರಹ

ಒಮಾನ್ ಕರಾವಳಿಯಲ್ಲಿ ಭಾರತೀಯ ನಾವಿಕನ ಸಾವಿಗೆ ಭಾರತ ಖಂಡನೆ; ಮಾತುಕತೆ ಮೂಲಕ ಉದ್ವಿಗ್ನತೆ ಶಮನಕ್ಕೆ ಆಗ್ರಹ

ನವದೆಹಲಿ, ನವೆಂಬರ್ 3: ಒಮಾನ್ ಕರಾವಳಿಯ ಬಳಿ ಭಾರತದ ಧ್ವಜ ಹೊಂದಿದ್ದ ವಾಣಿಜ್ಯ ಸರಕು ನೌಕೆಯ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕರೊಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಪಶ್ಚಿಮ ಏಷ್ಯಾ ವಲಯದಲ್ಲಿ ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಹಾಗೂ ರಾಜತಾಂತ್ರಿಕ ಮಾತುಕತೆಗಳ ಮೂಲಕ ಶಾಂತಿ ಸ್ಥಾಪಿಸಲು ಭಾರತ ಜಾಗತಿಕ ಸಮುದಾಯಕ್ಕೆ ಕರೆ ನೀಡಿದೆ. ನವೆಂಬರ್ 2ರಂದು ಒಮಾನ್‌ನ ಲಿಮಾ ಕರಾವಳಿಯ ಬಳಿ 14 ಭಾರತೀಯ ಸಿಬ್ಬಂದಿಯನ್ನೊಳಗೊಂಡ ‘MSV AL JUSUFI’ ಎಂಬ ವಾಣಿಜ್ಯ ನೌಕೆಯ ಮೇಲೆ ದಾಳಿ ನಡೆದಿತ್ತು. ಈ ಘಟನೆಯನ್ನು ಭಾರತೀಯ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ.

“ಒಮಾನ್‌ನ ಲಿಮಾ ಸಮೀಪ ವಾಣಿಜ್ಯ ನೌಕೆ ‘MSV AL JUSUFI’ ಮೇಲೆ ನಿನ್ನೆ ಸಂಜೆ ನಡೆದ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನೌಕೆಯಲ್ಲಿದ್ದ 14 ಭಾರತೀಯ ಪ್ರಜೆಗಳ ಪೈಕಿ 13 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ, ಒಬ್ಬ ಭಾರತೀಯ ನಾವಿಕ ಗಂಭೀರ ಗಾಯಗೊಂಡು ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಕ್ಕೆ ನಮ್ಮ ಸಂತಾಪಗಳು. ರಕ್ಷಿಸಲ್ಪಟ್ಟ ಭಾರತೀಯರನ್ನು ಹಾಗೂ ಮೃತರ ಪಾರ್ಥಿವ ಶರೀರವನ್ನು ಶೀಘ್ರವಾಗಿ ತಾಯ್ನಾಡಿಗೆ ತರಲು ಒಮಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಒಮಾನ್​ನಲ್ಲಿ ಅಮೆರಿಕದ ದಾಳಿಗೆ ಬಲಿಯಾಗಿದ್ದ ಇಬ್ಬರು ಭಾರತೀಯ ನಾವಿಕರ ಶವಗಳು ಭಾರತಕ್ಕೆ ರವಾನೆ

“ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳು ತೀವ್ರ ಕಳವಳಕಾರಿಯಾಗಿವೆ. ಉದ್ವಿಗ್ನತೆಯನ್ನು ತಕ್ಷಣವೇ ಶಮನಗೊಳಿಸಿ, ರಾಜತಾಂತ್ರಿಕ ಮಾತುಕತೆ ಮೂಲಕ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಬೇಕು. ವಾಣಿಜ್ಯ ನೌಕೆಗಳು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಜಲಮಾರ್ಗಗಳಲ್ಲಿ ಮುಕ್ತ ಮತ್ತು ಅಡೆತಡೆ ರಹಿತ ನೌಕಾಯಾನ ಹಾಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು” ಎಂದು ವಿದೇಶಾಂಗ ಸಚಿವಾಲಯ ಒತ್ತಾಯಿಸಿದೆ.

ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಒಮಾನ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಮೃತ ನಾವಿಕನ ಮೃತದೇಹವನ್ನು ಭಾರತಕ್ಕೆ ತರಲು ಹಾಗೂ ರಕ್ಷಿಸಲ್ಪಟ್ಟ 13 ನಾವಿಕರನ್ನು ಸುಲಭವಾಗಿ ತಾಯ್ನಾಡಿಗೆ ಕರೆತರಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರ ಹಡಗು ಮತ್ತು ಬಂದರು ಸಚಿವ ಶರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ. ಕೇಂದ್ರ ಸಚಿವ ಶರ್ಬಾನಂದ ಸೋನೋವಾಲ್ ಕೂಡ ಎಕ್ಸ್​​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಮೃತಪಟ್ಟ ನಾವಿಕ ಗುಜರಾತ್ ಮೂಲದ ಗಂಧರ್ ನಹೀಮ್ ಅಜೀಜ್ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್, 21 ಮಂದಿ ರಕ್ಷಣೆ, 3 ಭಾರತೀಯರು ಇನ್ನೂ ನಾಪತ್ತೆ

13 ನಾವಿಕರ ರಕ್ಷಣೆ:

ಒಮಾನ್ ಕರಾವಳಿ ಭದ್ರತಾ ಪಡೆಯು ತಕ್ಷಣವೇ ಕಾರ್ಯಾಚರಣೆ ನಡೆಸಿ ನೌಕೆಯಲ್ಲಿದ್ದ ಉಳಿದ 13 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಕೇಂದ್ರ ಸಚಿವ ಶರ್ಬಾನಂದ, ಗಾಯಾಳುಗಳಿಗೆ ತಕ್ಷಣದ ನೆರವು ನೀಡಲು ಹಾಗೂ ಮೃತದೇಹ ಮತ್ತು ರಕ್ಷಿಸಲ್ಪಟ್ಟ ನಾವಿಕರನ್ನು ಶೀಘ್ರವೇ ಭಾರತಕ್ಕೆ ಕರೆತರಲು ವಿದೇಶಾಂಗ ಸಚಿವಾಲಯ ಮತ್ತು ರಾಯಭಾರ ಕಚೇರಿ ಶ್ರಮಿಸುತ್ತಿದೆ ಎಂದಿದ್ದಾರೆ.

ಇತ್ತೀಚೆಗೆ ನಡೆದ G20 ವಿದೇಶಾಂಗ ಸಚಿವರ ಸಭೆಯಲ್ಲೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಾಣಿಜ್ಯ ಹಡಗುಗಳ ಮೇಲಿನ ದಾಳಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದರು. “ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ನೌಕೆಗಳ ಮೇಲಿನ ದಾಳಿಯಿಂದಾಗಿ ಇಂಧನ, ಆಹಾರ ಮತ್ತು ರಸಗೊಬ್ಬರಗಳ ಪೂರೈಕೆ ಹಾಗೂ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ‘ಗ್ಲೋಬಲ್ ಸೌತ್’ (ಅಭಿವೃದ್ಧಿಶೀಲ) ದೇಶಗಳು ಇದರ ಭಾರಿ ಹೊಡೆತವನ್ನು ಅನುಭವಿಸುತ್ತಿವೆ” ಎಂದು ಜೈಶಂಕರ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source: TV9 Kannada World

Read full article on TV9 Kannada World

Leave a Comment

Your email address will not be published. Required fields are marked *

समाचार की भाषा चुनें / Choose News Language