
ನ್ಯೂಜಿಲೆಂಡ್ ಎ ವಿರುದ್ಧದ ಕೊನೆಯ ಎರಡು, ನಾಲ್ಕು ದಿನಗಳ ಪಂದ್ಯಗಳಿಗೆ ಜಾರ್ಖಂಡ್ನ ಯುವ ಆರಂಭಿಕ ಬ್ಯಾಟರ್ ಶಿಖರ್ ಮೋಹನ್ ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. 21 ವರ್ಷದ ಶಿಖರ್ಗೆ ಇದೇ ಮೊದಲ ಬಾರಿಗೆ ಭಾರತ ಎ ತಂಡದಲ್ಲಿ ಅವಕಾಶ ಸಿಕ್ಕಿದೆ. ನ್ಯೂಜಿಲೆಂಡ್ ಎ ವಿರುದ್ಧದ ಮೊದಲ ನಾಲ್ಕು ದಿನಗಳ ಪಂದ್ಯಕ್ಕೆ ಭಾರತ ಎ ತಂಡದಲ್ಲಿರುವ ಕೆಎಲ್ ರಾಹುಲ್ ಅವರನ್ನು ಏಕದಿನ ಸರಣಿಗಾಗಿ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹೀಗಾಗಿ, ಕೊನೆಯ ಎರಡು ನಾಲ್ಕು ದಿನಗಳ ಪಂದ್ಯಗಳಿಂದ ರಾಹುಲ್ ಅವರನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಶಿಖರ್ ಮೋಹನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಎಡಗೈ ಬ್ಯಾಟರ್ ಶಿಖರ್ ಸದ್ಯ ದೇಶೀಯ ಕ್ರಿಕೆಟ್ನಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಪ್ರಸಕ್ತ ರಣಜಿ ಟ್ರೋಫಿ ಸೀಸನ್ನಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಜಮ್ಶೆಡ್ಪುರದಲ್ಲಿ ಕೇರಳ ವಿರುದ್ಧ 143 ರನ್ ಗಳಿಸಿದ್ದ ಅವರು, ಬಳಿಕ ಪುಣೆಯಲ್ಲಿ ಮಹಾರಾಷ್ಟ್ರ ವಿರುದ್ಧ 127 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು.
ದೇಶೀಯ ಕ್ರಿಕೆಟ್ನಲ್ಲಿ ಶಿಖರ್ ಅಬ್ಬರ
2025-26ರ ರಣಜಿ ಟ್ರೋಫಿ ಆವೃತ್ತಿಯಲ್ಲಿ ತಮ್ಮ ಚೊಚ್ಚಲ ಪಂದ್ಯಾವಳಿಯಲ್ಲೇ ಶಿಖರ್ ಮೋಹನ್ ಅದ್ಭುತ ಪ್ರದರ್ಶನ ನೀಡಿದ್ದರು. 55.73ರ ಸರಾಸರಿಯಲ್ಲಿ ಒಟ್ಟು 613 ರನ್ ಗಳಿಸಿದ್ದ ಅವರು, ಎರಡು ಶತಕಗಳನ್ನು ಬಾರಿಸಿದ್ದರು. ಪ್ರಸಕ್ತ ಆವೃತ್ತಿಯಲ್ಲೂ ತಮ್ಮ ಉತ್ತಮ ಲಯವನ್ನು ಮುಂದುವರಿಸಿರುವ ಶಿಖರ್, ಜಮ್ಶೆಡ್ಪುರದ ಕೀನನ್ ಕ್ರೀಡಾಂಗಣದಲ್ಲಿ ಕೇರಳ ವಿರುದ್ಧ ನಡೆದ ಜಾರ್ಖಂಡ್ನ ಮೊದಲ ಪಂದ್ಯದಲ್ಲಿ 143 ರನ್ ಗಳಿಸಿದ್ದರು. ಇದಲ್ಲದೆ, ದುಲೀಪ್ ಟ್ರೋಫಿ ಫೈನಲ್ನಲ್ಲಿ ಪೂರ್ವ ವಲಯದ ಪರ ಆಡಿದ ಅವರು, ಮೊದಲ ಇನ್ನಿಂಗ್ಸ್ನಲ್ಲಿ 85 ರನ್ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 52 ರನ್ ಗಳಿಸಿ ಗಮನ ಸೆಳೆದಿದ್ದರು.
ಬಳಿಕ ಇರಾನಿ ಟ್ರೋಫಿಯಲ್ಲಿ ರೆಸ್ಟ್ ಆಫ್ ಇಂಡಿಯಾ ತಂಡದ ಪರ ಕಣಕ್ಕಿಳಿದಿದ್ದ ಶಿಖರ್, ಶ್ರೀನಗರದ ಪಿಚ್ನಲ್ಲಿ 60 ರನ್ ಗಳಿಸಿದ್ದರು. ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಯುವ ಆಟಗಾರನಿಗೆ ಇದೀಗ ಭಾರತ ಎ ತಂಡದ ಪರ ಆಡುವ ಅವಕಾಶ ಒದಗಿಬಂದಿದೆ.
ದೊಡ್ಡ ಇನ್ನಿಂಗ್ಸ್ಗಳತ್ತ ಯುವ ಬ್ಯಾಟರ್ ಗಮನ
ಕಳೆದ ನಾಲ್ಕೈದು ವರ್ಷಗಳಿಂದ ಶಿಖರ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ವಯೋಮಾನದ ಕ್ರಿಕೆಟ್ನಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಆದರೆ, ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವ ವಿಚಾರದಲ್ಲಿ ಶಿಖರ್ ಕೆಲವೊಮ್ಮೆ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಮಾರ್ಗದರ್ಶಕರ ಸಲಹೆಗಳನ್ನು ಪಡೆದು ಆಟದಲ್ಲಿ ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ.
ಏಕದಿನ ವೃತ್ತಿಜೀವನದ 9ನೇ ಶತಕ ಬಾರಿಸಿದ ಕನ್ನಡಿಗ ಕೆಎಲ್ ರಾಹುಲ್..!
ಅ. 26ರಂದು ನ್ಯೂಜಿಲೆಂಡ್ಗೆ ಪ್ರಯಾಣ
ಶಿಖರ್ ಮೋಹನ್ ಅಕ್ಟೋಬರ್ 26ರಂದು ನ್ಯೂಜಿಲೆಂಡ್ಗೆ ಪ್ರಯಾಣಿಸಲಿದ್ದು, ಕ್ರೈಸ್ಟ್ಚರ್ಚ್ನಲ್ಲಿ ಭಾರತ ಎ ತಂಡವನ್ನು ಸೇರಿಕೊಳ್ಳಲಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಶಿಖರ್ ಮೋಹನ್, ಭಾರತ ಎ ತಂಡದ ಪರವೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಅವಕಾಶ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಮಹತ್ವದ ತಿರುವಾಗುವ ನಿರೀಕ್ಷೆಯಿದೆ. ಇನ್ನು ನ್ಯೂಜಿಲೆಂಡ್ ಎ ವಿರುದ್ಧದ ಎರಡನೇ ನಾಲ್ಕು ದಿನಗಳ ಪಂದ್ಯ ಅಕ್ಟೋಬರ್ 31ರಿಂದ ಆರಂಭವಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Sports
