Hashtagintro

ಕೇವಲ 1 ರನ್… ಅಂಪೈರ್ ಮಾಡಿದ ಮಹಾ ತಪ್ಪಿನಿಂದ ಕೈತಪ್ಪಿದ ವಿಶ್ವಕಪ್!

ಕೇವಲ 1 ರನ್… ಅಂಪೈರ್ ಮಾಡಿದ ಮಹಾ ತಪ್ಪಿನಿಂದ ಕೈತಪ್ಪಿದ ವಿಶ್ವಕಪ್!

ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ರೋಮಾಂಚನಕಾರಿ ಮತ್ತು ಅಷ್ಟೇ ವಿವಾದಾತ್ಮಕ ಪಂದ್ಯವೆಂದರೆ ಅದು 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್. ಲಾರ್ಡ್ಸ್ ಮೈದಾನದಲ್ಲಿ ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಆ ಪಂದ್ಯ ಕೇವಲ ಒಂದು ಪಂದ್ಯವಾಗಿರಲಿಲ್ಲ, ಅದೊಂದು ಕ್ರಿಕೆಟ್ ಪ್ರೇಮಿಗಳ ಹೃದಯವನ್ನೇ ನಡುಗಿಸಿದ ಕ್ಷಣ. ಆದರೆ, ಪಂದ್ಯ ಮುಗಿದ ನಂತರ ಬೆಳಕಿಗೆ ಬಂದ ಸತ್ಯ ಮಾತ್ರ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ಗೆ ಇಡೀ ಜೀವನದ ದೊಡ್ಡ ಆಘಾತವಾಗಿ ಉಳಿದುಬಿಟ್ಟಿತು.

ಇತ್ತೀಚೆಗಷ್ಟೇ ಪ್ರಸಾರವಾದ ಪ್ರಸಿದ್ಧ ಕ್ರಿಕೆಟ್ ಪಾಡ್‌ಕಾಸ್ಟ್‌ ಆದ ‘Stick to Cricket’ ಶೋನಲ್ಲಿ ಮಾತನಾಡಿದ ಕೇನ್ ವಿಲಿಯಮ್ಸನ್, 2019ರ ಆ ಐತಿಹಾಸಿಕ ಫೈನಲ್ ಪಂದ್ಯದ ನೆನಪುಗಳನ್ನು ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ಅಂದು ಆ ಓವರ್ ಥ್ರೋ ಡಿಫ್ಲೆಕ್ಷನ್ ಆದಾಗ ಬ್ಯಾಟರ್‌ಗಳು ಪರಸ್ಪರ ಕ್ರಾಸ್ ಆಗಿರಲಿಲ್ಲ ಎಂಬ ಕಾರಣಕ್ಕೆ, ನಿಯಮದ ಪ್ರಕಾರ 5 ರನ್ ನೀಡುವ ಬದಲು ತಾಂತ್ರಿಕ ತಪ್ಪಿನಿಂದಾಗಿ ಇಂಗ್ಲೆಂಡ್‌ಗೆ 6 ರನ್ ನೀಡಲಾಗಿತ್ತು ಎಂಬುದನ್ನು ಅವರು ಈ ಸಂದರ್ಭದಲ್ಲಿ ಎತ್ತಿ ತೋರಿಸಿದ್ದಾರೆ.

“ಅಂದು ಆ ಚೆಂಡು ಬ್ಯಾಟ್‌ಗೆ ತಗುಲಿ ಬೌಂಡರಿ ಹೋದಾಗ ನಮಗೆ ಹಿನ್ನಡೆಯಾಯಿತು. ಆದರೆ ನಿಜ ಹೇಳಬೇಕೆಂದರೆ, ನಿಯಮಗಳ ಪ್ರಕಾರ ಅಂದು ನಾವು ಇಂಗ್ಲೆಂಡ್‌ಗಿಂತ ಹೆಚ್ಚು ರನ್‌ಗಳನ್ನೇ ಗಳಿಸಿದ್ದೆವು (ಒಂದು ರನ್ ಹೆಚ್ಚು). ಆದರೂ ನಾವು ಸೋತೆವು! ಬಹುಶಃ ಅದು ನಮ್ಮ ಹಣೆಬರಹದಲ್ಲಿ ಇರಲಿಲ್ಲ ಅನಿಸುತ್ತದೆ” ಎಂದು ಹೇಳಿದ್ದಾರೆ.

2019ರ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು 3 ಎಸೆತಗಳಲ್ಲಿ 9 ರನ್ ಬೇಕಿತ್ತು. ಆಗ ಬೆನ್ ಸ್ಟೋಕ್ಸ್ ಹೊಡೆದ ಚೆಂಡನ್ನು ಮಾರ್ಟಿನ್ ಗಪ್ಟಿಲ್ ಫೀಲ್ಡ್ ಮಾಡಿ ವಿಕೆಟ್‌ ಕಡೆಗೆ ಎಸೆದರು. ಬೆನ್ ಸ್ಟೋಕ್ಸ್ ಎರಡನೇ ರನ್‌ಗಾಗಿ ಡೈವ್ ಹೊಡೆದಾಗ ಚೆಂಡು ಅವರ ಬ್ಯಾಟ್‌ಗೆ ತಗುಲಿ ಬೌಂಡರಿ ಗೆರೆ ದಾಟಿತು. ಆಗ ಅಂಪೈರ್ ಕುಮಾರ್ ಧರ್ಮಸೇನ ಅವರು ಓಡಿದ 2 ರನ್ ಮತ್ತು ಬೌಂಡರಿಯ 4 ರನ್ ಸೇರಿಸಿ ಇಂಗ್ಲೆಂಡ್‌ಗೆ ಒಟ್ಟು 6 ರನ್ ನೀಡಿದರು.

ಆದರೆ ಕ್ರಿಕೆಟ್ ನಿಯಮ 19.8ರ ಪ್ರಕಾರ, ಓವರ್ ಥ್ರೋ ಬೌಂಡರಿ ಹೋದಾಗ ರನ್ ಲೆಕ್ಕ ಹಾಕುವ ವಿಧಾನ ಹೀಗಿದೆ:-

  • ಫೀಲ್ಡರ್ ಚೆಂಡನ್ನು ಕೈಯಿಂದ ಬಿಡುವ (ಥ್ರೋ ಮಾಡುವ) ನಿಖರ ಕ್ಷಣದಲ್ಲಿ ಬ್ಯಾಟರ್‌ಗಳು ಪರಸ್ಪರ ಕ್ರಾಸ್ ಆಗಿದ್ದರೆ ಮಾತ್ರ ಆ ರನ್ ಅನ್ನು ಪರಿಗಣಿಸಬೇಕು.

ವಿಡಿಯೋ ರೀಪ್ಲೇಗಳಲ್ಲಿ ಸ್ಪಷ್ಟವಾಗಿ ಕಂಡಂತೆ, ಮಾರ್ಟಿನ್ ಗಪ್ಟಿಲ್ ಚೆಂಡನ್ನು ಥ್ರೋ ಮಾಡಿದಾಗ ಬೆನ್ ಸ್ಟೋಕ್ಸ್ ಮತ್ತು ಆದಿಲ್ ರಶೀದ್ ಇನ್ನೂ ಎರಡನೇ ರನ್‌ಗಾಗಿ ಕ್ರಾಸ್ ಆಗಿರಲಿಲ್ಲ. ಅವರು ಕೇವಲ 1 ರನ್ ಮಾತ್ರ ಪೂರ್ಣಗೊಳಿಸಿದ್ದರು. ನಿಯಮದ ಪ್ರಕಾರ ಇಂಗ್ಲೆಂಡ್‌ಗೆ ಸಿಗಬೇಕಾಗಿದ್ದು ಕೇವಲ 5 ರನ್ (ಓಡಿದ 1 ರನ್ + ಬೌಂಡರಿಯ 4 ರನ್) ಮಾತ್ರ.

ಅಂಪೈರ್‌ಗಳು ತಾಂತ್ರಿಕ ತಪ್ಪು ಮಾಡಿ ಇಂಗ್ಲೆಂಡ್‌ಗೆ 6 ರನ್ ನೀಡಿದ್ದರಿಂದ ಪಂದ್ಯ ‘ಟೈ’ ಆಯಿತು. ನಂತರ ಸೂಪರ್ ಓವರ್ ಕೂಡ ಟೈ ಆಗಿ, ಅಂತಿಮವಾಗಿ ಹೆಚ್ಚು ಬೌಂಡರಿ ಬಾರಿಸಿದ ಆಧಾರದ ಮೇಲೆ ಇಂಗ್ಲೆಂಡ್ ವಿಶ್ವಕಪ್ ಗೆದ್ದಿತು.

ಈ ತಾಂತ್ರಿಕ ತಪ್ಪನ್ನು ಕೇನ್ ವಿಲಿಯಮ್ಸನ್, ಇಂಗ್ಲೆಂಡ್​ನ ಮೈಕೆಲ್ ವಾನ್, ಅಲಿಸ್ಟರ್ ಕುಕ್ ಮತ್ತು ಫಿಲ್ ಟಫ್ನೆಲ್ ಅವರನ್ನು ಒಳಗೊಂಡ ‘ಸ್ಟಿಕ್ ಟು ಕ್ರಿಕೆಟ್’ ಪಾಡ್​ಕಾಸ್ಟ್​ನಲ್ಲಿ ಬಿಚ್ಚಿಟ್ಟಿದ್ದಾರೆ.

ವಿಶೇಷವೆಂದರೆ, ಈ ಸಂದರ್ಶನದಲ್ಲಿದ್ದ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ಮತ್ತು ಇತರ ಇಂಗ್ಲೆಂಡ್ ಆಟಗಾರರಿಗೆ ಈ 5 vs 6 ರನ್‌ಗಳ ತಾಂತ್ರಿಕ ನಿಯಮದ ಬಗ್ಗೆ ಇಷ್ಟು ದಿನ ಗೊತ್ತೇ ಇರಲಿಲ್ಲ! ಕೇನ್ ವಿಲಿಯಮ್ಸನ್ ಆ ನಿಯಮವನ್ನು ವಿವರಿಸಿದಾಗ ಆಶ್ಚರ್ಯಚಕಿತರಾದ ಮೈಕೆಲ್ ವಾನ್, ಜೋಕ್ ಮಾಡುತ್ತಾ “ಓಹ್ ದೇವರೇ, ಹಾಗಾದರೆ ನಾವು ನಿಜವಾಗಿಯೂ ಆ ವಿಶ್ವಕಪ್ ಗೆದ್ದೇ ಇರಲಿಲ್ಲವೇ?” ಎಂದು ಉದ್ಗರಿಸಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 487 ರನ್… ಇಂಗ್ಲೆಂಡ್ ದಾಂಡಿಗರ ಆರ್ಭಟಕ್ಕೆ ವಿಶ್ವ ದಾಖಲೆ ಉಡೀಸ್!

ಒಟ್ಟಾರೆಯಾಗಿ ಹೇಳುವುದಾದರೆ, ಅಂದು ತಮ್ಮ ಜೀವಮಾನದ ಕನಸು ಕಣ್ಣೆದುರೇ ಅನ್ಯಾಯವಾಗಿ ಕರಗಿಹೋದರೂ, ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಂದು ನಡೆದುಕೊಂಡ ರೀತಿ ಇಡೀ ವಿಶ್ವದ ಗೌರವವನ್ನು ಸಂಪಾದಿಸಿತು. ಅವರು ಅಂಪೈರ್‌ಗಳನ್ನಾಗಲಿ, ಇಂಗ್ಲೆಂಡ್ ತಂಡವನ್ನಾಗಲಿ ಅಥವಾ ಅದೃಷ್ಟವನ್ನಾಗಲಿ ದೂಷಿಸಲಿಲ್ಲ. ಬದಲಿಗೆ ಕ್ರೀಡಾ ಜಗತ್ತಿಗೆ ‘ವಿನಮ್ರತೆ’ ಎಂದರೆ ಏನು ಎಂಬುದನ್ನು ಕಲಿಸಿಕೊಟ್ಟ ಮಹಾನ್ ನಾಯಕನಾದರು.

ಕ್ರಿಕೆಟ್ ಇತಿಹಾಸದ ದಾಖಲೆ ಪುಸ್ತಕಗಳಲ್ಲಿ 2019ರ ವಿಶ್ವಕಪ್ ವಿಜೇತರು ಯಾರು ಎಂದು ಹುಡುಕಿದರೆ ಇಂಗ್ಲೆಂಡ್ ಹೆಸರು ಸಿಗಬಹುದು. ಆದರೆ, ಜಗತ್ತಿನ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಹೃದಯದ ಪುಟಗಳನ್ನು ತಿರುವಿದರೆ, ಅಲ್ಲಿ ಸದಾಕಾಲ ವಿಜೇತರಾಗಿ ಮುಗುಳ್ನಗುತ್ತಾ ನಿಂತಿರುವುದು ಕೇವಲ ಒಬ್ಬರೇ—ಅವರೇ ಕೇನ್ ವಿಲಿಯಮ್ಸನ್! ಕಪ್‌ ಕನಸು ಕರಗಿ ಹೋಗಬಹುದು, ಆದರೆ ಅವರ ಈ ಅದ್ಭುತ ಕ್ರೀಡಾ ಸ್ಫೂರ್ತಿಯ ಪರಂಪರೆ ಎಂದಿಗೂ ಅಮರ.

Source: TV9 Kannada Sports

Read full article on TV9 Kannada Sports

Leave a Comment

Your email address will not be published. Required fields are marked *

समाचार की भाषा चुनें / Choose News Language