Hashtagintro

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯ, ಪಾಲಿಸದಿದ್ದರೆ ಕ್ರಮ: ಪರಿಶೀಲನೆಗೆ ಡಿಹೆಚ್​ಒಗಳಿಗೆ ಸೂಚನೆ

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯ, ಪಾಲಿಸದಿದ್ದರೆ ಕ್ರಮ: ಪರಿಶೀಲನೆಗೆ ಡಿಹೆಚ್​ಒಗಳಿಗೆ ಸೂಚನೆ

ಬೆಂಗಳೂರು, ನವೆಂಬರ್ 17: ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಮುಖ ಚಿಕಿತ್ಸೆಗಳು ಮತ್ತು ವೈದ್ಯಕೀಯ ಪ್ರೊಸೀಜರ್‌ಗಳ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಈ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ನಿರ್ದೇಶನ ನೀಡಿದೆ. ದರಪಟ್ಟಿ ಅಳವಡಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಮುನ್ನವೇ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಚಿಕಿತ್ಸಾ ವೆಚ್ಚದ ಮಾಹಿತಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿ ಲಭ್ಯವಿರುವ ಪ್ರಮುಖ ಚಿಕಿತ್ಸೆಗಳು ಹಾಗೂ ವೈದ್ಯಕೀಯ ಪ್ರಕ್ರಿಯೆಗಳ ದರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಕಡ್ಡಾಯವಾಗಿದೆ.

ಆಸ್ಪತ್ರೆಗಳಲ್ಲಿ ಸಾವಿರಾರು ಬಗೆಯ ಚಿಕಿತ್ಸಾ ಪ್ರೊಸೀಜರ್‌ಗಳಿರುವುದರಿಂದ ಎಲ್ಲದರ ದರಪಟ್ಟಿಯನ್ನು ಪ್ರದರ್ಶಿಸುವುದು ಕಷ್ಟ ಎಂದು ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್‌ ಆರೋಗ್ಯ ಇಲಾಖೆಯೊಂದಿಗಿನ ಸಭೆಯಲ್ಲಿ ತಿಳಿಸಿತ್ತು. ಇದಕ್ಕೆ ಪರ್ಯಾಯ ವ್ಯವಸ್ಥೆ ರೂಪಿಸಿರುವ ಇಲಾಖೆ, ಪ್ರಮುಖ ಚಿಕಿತ್ಸೆಗಳ ದರಪಟ್ಟಿಯನ್ನು ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಸೂಚಿಸಿದೆ. ಉಳಿದ ಚಿಕಿತ್ಸಾ ಪ್ರೊಸೀಜರ್‌ಗಳ ದರವನ್ನು ಒಳಗೊಂಡ ಪ್ರತ್ಯೇಕ ಬುಕ್‌ಲೆಟ್ ಸಿದ್ಧಪಡಿಸಬೇಕು. ರೋಗಿಗಳು ಅಥವಾ ಅವರ ಸಂಬಂಧಿಕರು ಕೇಳಿದಾಗ ಈ ಬುಕ್‌ಲೆಟ್ ನೀಡಬೇಕು ಎಂದು ತಿಳಿಸಿದೆ. ಸರ್ಕಾರದ ಈ ಪ್ರಸ್ತಾವನೆಗೆ ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಕೂಡ ಒಪ್ಪಿಗೆ ಸೂಚಿಸಿದೆ.

ಆಡಳಿತಾತ್ಮಕ ಸಮಸ್ಯೆಗಳಿದ್ದರೆ ಪರಿಹಾರ ಕಂಡುಕೊಳ್ಳಲು ಸೂಚನೆ

ಹಲವು ಖಾಸಗಿ ಆಸ್ಪತ್ರೆಗಳು ಇನ್ನೂ ದರಪಟ್ಟಿಯನ್ನು ಪ್ರದರ್ಶಿಸಿಲ್ಲ ಎಂಬುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ದರಪಟ್ಟಿ ಅಳವಡಿಸಿರುವುದನ್ನು ಪರಿಶೀಲಿಸುವಂತೆ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ನಿಯಮ ಅನುಷ್ಠಾನದಲ್ಲಿ ಏನಾದರೂ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ಅವುಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ನಿರ್ದೇಶಿಸಲಾಗಿದೆ.

ಇದನ್ನೂ ಓದಿ: ಕ್ಯಾನ್ಸರ್ ಬಳಿಕ ಹಾರ್ಟ್‌, ಕಿಡ್ನಿ ಔಷಧಗಳ ದರ ನಿಯಂತ್ರಣಕ್ಕೆ ಚಿಂತನೆ: ರಾಜ್ಯದಿಂದ ಕೇಂದ್ರಕ್ಕೆ ಮನವಿ

ಇದೇ ವೇಳೆ, ಖಾಸಗಿ ಆಸ್ಪತ್ರೆಗಳ ಅಸೋಸಿಯೇಷನ್ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ದರಪಟ್ಟಿ ಪ್ರದರ್ಶಿಸದೆ ನಿಯಮ ಉಲ್ಲಂಘಿಸುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Health

Read full article on TV9 Kannada Health

Leave a Comment

Your email address will not be published. Required fields are marked *

समाचार की भाषा चुनें / Choose News Language