
ದಲೇರ್ ಮೆಹಂದಿ ಬಹಳ ಜನಪ್ರಿಯ ಗಾಯಕ. ವಿಶೇಷವಾಗಿ ಪಂಜಾಬಿ ಹಾಡುಗಳಿಗೆ ವಿಶ್ವದಾದ್ಯಂತ ಜನಪ್ರಿಯತೆ ಸಿಗಲು ಕಾರಣವಾದ ಗಾಯಕರುಗಳಲ್ಲಿ ಒಬ್ಬರು ದಲೇರ್. ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉತ್ತರಾಖಂಡ್ನ ಸಚಿವ ಸುಬೋದ್ ಉನಿಯಲ್ ಅವರು ವೇದಿಕೆ ಮೇಲೆ ಜನರೆದುರು ದಲೇರ್ ಅವರನ್ನು ತೀವ್ರವಾಗಿ ಟೀಕಿಸಿ, ನಿಂದನೆ ಮಾಡಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಇದೀಗ ಹಿರಿಯ ನಟ ಅನುಪಮ್ ಖೇರ್ ಸೇರಿದಂತೆ ಇನ್ನೂ ಕೆಲವು ಬಾಲಿವುಡ್ ನಟರು, ಗಾಯಕರು ದಲೇರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ದಲೇರ್ ಅವರು ಗಾಯನ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ವೇದಿಕೆ ಏರಿದ ಸಚಿವ ಸಚಿವ ಸುಬೋದ್ ಉನಿಯಲ್ ‘ನಿಮಗೆ ಮಾತನಾಡಲು ಸಹ ಆಗುತ್ತಿಲ್ಲ ನೀವು ಹಾಡು ಹೇಗೆ ಆಡುತ್ತೀರಿ. ನೀವು ಲಿಪ್ ಸಿಂಕ್ ಮಾಡುತ್ತಿದ್ದೀರಿ. ನೀವು ಮದ್ಯ ಸೇವಿಸಿದ್ದೀರಿ’ ಎಂದೆಲ್ಲ ಟೀಕೆ ಮಾಡಿದ್ದಾರೆ. ವೇದಿಕೆಯಲ್ಲೇ ದಲೇರ್ ಅವರು ನಾವು ಪ್ರದರ್ಶನ ನೀಡುತ್ತೇವೆ ಎಂದು ಹೇಳಿದರೂ. ಸಹ ಸಚಿವರು ಮೈಕ್ನಲ್ಲಿ ದಲೇರ್ ಅವರ ಮೇಲೆ ಸತತ ಟೀಕೆಗಳನ್ನು ಮಾಡಿದ್ದು, ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಅನುಪಮ್ ಖೇರ್, ‘ಈ ಘಟನೆ ನಡೆಯಬಾರದಿತ್ತು. ನಾನು ದಲೇರ್ ಅವರನ್ನು ಕಳೆದ ಮೂರು ದಶಕಗಳಿಂದಲೂ ಬಲ್ಲೆ. ಅವರು ಮದ್ಯ ಸೇವಿಸುವುದಿಲ್ಲ. ಜೊತೆಗೆ ಬಹಳ ಮಾನವೀಯತೆ ಉಳ್ಳ ವ್ಯಕ್ತಿಯಲ್ಲಿ ಒಬ್ಬರು. ಅವರೊಂದಿಗೆ ಸಚಿವರು ಹೀಗೆ ಉದ್ಧಟತನದಿಂದ ವರ್ತನೆ ಮಾಡಬಾರದಿತ್ತು’ ಎಂದಿದ್ದಾರೆ. ಅಲ್ಲದೆ ಬಾಲಿವುಡ್ನ ಸೆಲೆಬ್ರಿಟಿಗಳು ಹಿರಿಯ ಕಲಾವಿದ ದಲೇರ್ ಅವರ ಪರವಾಗಿ ನಿಲ್ಲಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಖ್ಯಾತ ನಟ ರಾಜ್ಪಾಲ್ ಯಾದವ್ ಸಹ ದಲೇರ್ ಮೆಹಂದಿ ಪರವಾಗಿ ನಿಂತಿದ್ದು, ವೇದಿಕೆ ಏರಿ ಒಬ್ಬ ಹಿರಿಯ ಕಲಾವಿದರನ್ನು ಅವಮಾನಿಸುವ ಅವಶ್ಯಕತೆ ಏನಿತ್ತು? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವು ಕಲಾವಿದರು, ಗಾಯಕರುಗಳು ಸಹ ದಲೇರ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ದಲೇರ್ ಮೆಹಂದಿ ಅವರು ಭಾರತೀಯ ಸಿನಿಮಾ ಹಾಗೂ ಪಾಪ್ ಸಂಗೀತ ಕ್ಷೇತ್ರದ ದಿಗ್ಗಜರುಗಳಲ್ಲಿ ಒಬ್ಬರು. ದಶಕಗಳಿಂದಲೂ ಅವರು ಅದ್ಭುತ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಪಂಜಾಬಿ ಸಂಗೀತಕ್ಕೆ ವಿಶ್ವ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟ ಖ್ಯಾತಿ ಅವರಿಗೆ ಸಲ್ಲುತ್ತದೆ. ದಲೇರ್ ಅವರಿಗೆ ಈಗ 60 ವರ್ಷ ವಯಸ್ಸಾಗಿದ್ದು, ಇತ್ತೀಚೆಗೆ ಅವರು ಸಿನಿಮಾಗಳಿಗೆ ಕೆಲಸ ಮಾಡುವುದು ನಿಲ್ಲಿಸಿದ್ದಾರೆ. ಅವಕಾಶಗಳು ಸಹ ಕಡಿಮೆ ಆಗಿವೆ. ಲೈವ್ ಶೋಗಳನ್ನಷ್ಟೆ ಅವರು ನೀಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Entertainment
