Hashtagintro

ಚೀನಾದ 7 ಟ್ರಿಲಿಯನ್ ಡಾಲರ್ ಡೆಟ್ ಮಾರುಕಟ್ಟೆಯ ಅಪಾಯ; ಭಾರತದ ಬಾಂಡ್ ಮಾರುಕಟ್ಟೆಗಿಲ್ಲ ಈ ಅಪಾಯ

ಚೀನಾದ 7 ಟ್ರಿಲಿಯನ್ ಡಾಲರ್ ಡೆಟ್ ಮಾರುಕಟ್ಟೆಯ ಅಪಾಯ; ಭಾರತದ ಬಾಂಡ್ ಮಾರುಕಟ್ಟೆಗಿಲ್ಲ ಈ ಅಪಾಯ

ನವದೆಹಲಿ, ನವೆಂಬರ್ 22: ಸರ್ಕಾರಿ ಬಾಂಡ್ ಆದಾಯದ ಮೇಲೆ ತೆರಿಗೆ ವಿಧಿಸುವ ಚೀನಾದ ಪ್ರಸ್ತಾವನೆಯಿಂದ ಆ ದೇಶದ $7 ಟ್ರಿಲಿಯನ್ ಸಾಲದ ಮಾರುಕಟ್ಟೆಯಲ್ಲಿ ರಚನಾತ್ಮಕ ದುರ್ಬಲತೆ ಎದುರಾಗುತ್ತಿದೆ ಎಂದು ಜೆಪಿ ಮೋರ್ಗನ್ ವರದಿ ತಿಳಿಸಿದೆ. ವೈವಿಧ್ಯಮಯ ಹೂಡಿಕೆದಾರರ ನೆಲೆಯನ್ನು ಹೊಂದಿರುವ ಭಾರತದ ಬಾಂಡ್ ಮಾರುಕಟ್ಟೆ ಇಂತಹ ತೆರಿಗೆ ಬದಲಾವಣೆಯ ಅಪಾಯದಿಂದ ಸಾಕಷ್ಟು ರಕ್ಷಣೆ ಪಡೆದುಕೊಂಡಿದೆ.

ಚೀನಾದ ಬೃಹತ್ ಡೆಟ್ ಮಾರ್ಕೆಟ್ ಅಪಾಯ

ಚೀನಾದಲ್ಲಿ ಕೇಂದ್ರ ಮತ್ತು ಸ್ಥಳೀಯ ಸರ್ಕಾರಿ ಬಾಂಡ್‌ಗಳ (CGB ಮತ್ತು LGB) ಪೈಕಿ ಶೇಕಡಾ 67ರಷ್ಟು ಬಾಂಡ್‌ಗಳನ್ನು ಬ್ಯಾಂಕ್‌ಗಳೇ ಹೊಂದಿದ್ದು, ಸರ್ಕಾರ ನೀಡಿದ್ದ ತೆರಿಗೆ ವಿನಾಯಿತಿಗಳು ಇದಕ್ಕೆ ಪ್ರಮುಖ ಕಾರಣವಾಗಿದ್ದವು ಎಂದು ಜೆಪಿ ಮೋರ್ಗನ್ ಸಂಶೋಧನಾ ವರದಿ ತಿಳಿಸಿದೆ.

ಸರ್ಕಾರಿ ಬಾಂಡ್ ಬಡ್ಡಿ ಆದಾಯದ ಮೇಲೆ ತೆರಿಗೆ ವಿಧಿಸುವ ಚೀನಾದ ಪ್ರಸ್ತಾವನೆಯಿಂದ ಈ ತೆರಿಗೆ ವಿನಾಯಿತಿಗಳು ರದ್ದಾದರೆ, ಬಾಂಡ್‌ಗಳ ಆಕರ್ಷಣೆಯು 30 ರಿಂದ 55 ಬೇಸಿಸ್ ಪಾಯಿಂಟ್ಸ್ (bps) ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 2047ಕ್ಕೆ 26 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ: ಸಿಐಐನಿಂದ 15 ಪ್ರಮುಖ ಸುಧಾರಣೆಗಳಿಗೆ ಶಿಫಾರಸು

ಬಾಂಡ್ ಬಡ್ಡಿ ಆದಾಯದ ಮೇಲೆ ಶೇಕಡಾ 25ರಷ್ಟು ತೆರಿಗೆ ವಿಧಿಸಿದರೆ, 2027ರಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಗಳಿಕೆಯಲ್ಲಿ ಶೇಕಡಾ 4 ಮತ್ತು ಜಾಯಿಂಟ್-ಸ್ಟಾಕ್ ಬ್ಯಾಂಕ್‌ಗಳ ಗಳಿಕೆಯಲ್ಲಿ ಶೇಕಡಾ 3ರಷ್ಟು ಇಳಿಕೆಯಾಗಬಹುದು. ಹಾಲಿ ಬಾಂಡ್‌ಗಳಿಗೂ ಅನ್ವಯವಾದರೆ ಈ ಹೊಡೆತ ಕ್ರಮವಾಗಿ ಶೇಕಡಾ 17 ಮತ್ತು ಶೇಕಡಾ 12ಕ್ಕೆ ಏರಬಹುದು.

ಭಾರತದ ಬಾಂಡ್ ಮಾರುಕಟ್ಟೆಯ ರಚನಾತ್ಮಕ ಬಲ

ಬ್ಯಾಂಕ್‌ಗಳ ಜೊತೆಗೆ ವಿಮಾ ಕಂಪನಿಗಳು, ಭವಿಷ್ಯ ಮತ್ತು ಪಿಂಚಣಿ ನಿಧಿಗಳು, ಮ್ಯೂಚುವಲ್ ಫಂಡ್‌ಗಳು, ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು (FPI) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೇರಿದಂತೆ ವೈವಿಧ್ಯಮಯ ಹೂಡಿಕೆದಾರರ ನೆಲೆಯನ್ನು ಭಾರತದ ಸರ್ಕಾರಿ ಬಾಂಡ್ ಮಾರುಕಟ್ಟೆ ಹೊಂದಿದೆ.

ಅಲ್ಲದೆ, ಚೀನಾದಂತೆ ಬ್ಯಾಂಕ್‌ಗಳಿಗೆ ವಿಶೇಷ ತೆರಿಗೆ ವಿನಾಯಿತಿಗಳ ಮೇಲೆ ಭಾರತದ ಸರ್ಕಾರಿ ಬಾಂಡ್ ಮಾರುಕಟ್ಟೆ ಅವಲಂಬಿತವಾಗಿಲ್ಲದ ಕಾರಣ, ತೆರಿಗೆ ನೀತಿಯ ಹಠಾತ್ ಬದಲಾವಣೆಗಳಿಂದ ಎದುರಾಗುವ ಅಪಾಯ ಭಾರತಕ್ಕೆ ಕಡಿಮೆ ಇದೆ.

ಇದನ್ನೂ ಓದಿ: ಸೇನಾ ಡ್ರೋನ್ ಟೆಂಡರ್‌ಗಳಲ್ಲಿ ಚೀನಾ ಮೂಲದ ಬಿಡಿಭಾಗಗಳ ಉಲ್ಲೇಖ: ಭದ್ರತಾ ಅಪಾಯದ ಕುರಿತು ದೇಶೀಯ ಉದ್ಯಮದ ಎಚ್ಚರಿಕೆ

ಆರ್ಥಿಕ ಪರಿಣಾಮಗಳು ಮತ್ತು ಸಂಭಾವ್ಯ ರಕ್ಷಣಾ ಕ್ರಮಗಳು

ಚೀನಾದಲ್ಲಿ ಬಾಂಡ್‌ಗಳ ಮೇಲಿನ ಬೇಡಿಕೆ ಕಡಿಮೆಯಾಗಿ ಬಡ್ಡಿ ದರಗಳು (yields) ಏರಿದರೆ, 2025ರ ಅಂತ್ಯಕ್ಕೆ 54.8 ಟ್ರಿಲಿಯನ್ ಯುವಾನ್ ಸಾಲ ಹೊಂದಿರುವ ಸ್ಥಳೀಯ ಸರ್ಕಾರಗಳ ಸಾಲದ ವೆಚ್ಚ ಹೆಚ್ಚಾಗಿ, ಹೊಸ ತೆರಿಗೆಯಿಂದ ಬರುವ ಆರ್ಥಿಕ ಲಾಭವನ್ನು ಕುಗ್ಗಿಸಬಹುದು ಎಂದು ವರದಿ ಎಚ್ಚರಿಸಿದೆ.

ಹಾಲಿ ಬಾಂಡ್‌ಗಳಿಗೆ ತೆರಿಗೆ ವಿನಾಯಿತಿ ಮುಂದುವರಿಸುವುದು, ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ವರ್ಗಾಯಿಸುವುದು ಮತ್ತು ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಬಾಂಡ್ ಖರೀದಿಯನ್ನು ಹೆಚ್ಚಿಸುವುದು — ಈ ಮೂರು ಕ್ರಮಗಳು ಆಘಾತವನ್ನು ತಗ್ಗಿಸಬಲ್ಲವು ಎಂದು ಜೆಪಿ ಮೋರ್ಗನ್ ಗುರುತಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source: TV9 Kannada Business

Read full article on TV9 Kannada Business

Leave a Comment

Your email address will not be published. Required fields are marked *

समाचार की भाषा चुनें / Choose News Language