
ಚಾಮರಾಜನಗರ, ನವೆಂಬರ್ 10: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್ಕುಮಾರ್ ಅವರ ಸಂಬಂಧಿ ಮನೆಯಲ್ಲಿ ರಾತ್ರಿ 10.22ರ ವೇಳೆಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮನೆಯ ಗಾಜು ಪುಡಿ ಪುಡಿಯಾಗಿವೆ. ಸ್ಥಳಕ್ಕೆ ತಮಿಳುನಾಡಿನ ತಾಳವಾಡಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ದೀಪಾವಳಿ ಹಿನ್ನೆಲೆ ಪಟಾಕಿಯಿಂದ ಈ ಸ್ಫೋಟ ಆಗಿರಬಹುದೆಂದು ಮೊದಲು ಅನುಮಾನವಿತ್ತಾದರೂ, ಸ್ಫೋಟದ ತೀವ್ರತೆ ಗಮನಿಸಿದಾಗ ಕಚ್ಚಾ ಬಾಂಬ್ನಿಂದ ಸ್ಫೋಟ ಆಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸ್ಫೋಟಕದ ಮಾದರಿಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ.
ಒಟ್ಟು ಆರು ಜನರು ಪರಾರಿಯಾಗಿರುವ ಮಾಹಿತಿ
ಘಟನೆ ಬಗ್ಗೆ ಮಾಹಿತಿ ನೀಡಿರುವ ರಾಜ್ಕುಮಾರ್ ತಂಗಿ ಮೊಮ್ಮಗಳು ಮನೋಜ್ಞ, ದೇವರ ದಯೆಯಿಂದ ಯಾರಿಗೂ ಪ್ರಾಣಾಪಾಯ ಆಗಿಲ್ಲ. ಸ್ಫೋಟದ ಶಬ್ದ ಕೇಳಿ ಹೊರ ಬಂದ ಕೂಡಲೇ ಇಬ್ಬರು ಓಡಿ ಹೋಗಿರೋದು ಕಂಡುಬಂದಿದೆ. ನಾವು ಕೂಡ ಅವರನ್ನು ಫಾಲೋ ಮಾಡಿ ವಿಡಿಯೋ ಮಾಡಿದ್ದೇವೆ. ಆ ಹುಡುಗರು ನಮ್ಮ ಊರಿನವರೇ ಎಂದವರು ತಿಳಿಸಿದ್ದಾರೆ. ಒಟ್ಟು ಆರು ಜನರು ಪರಾರಿಯಾಗಿರುವ ಮಾಹಿತಿ ಇದೆ ಎನ್ನಲಾಗಿದೆ. ಗಾಜನೂರಿನಲ್ಲಿ ತನ್ನದೇ ಆದ ಗೌರವ ಹೊಂದಿರುವ ರಾಜಕುಮಾರ್ ಕುಟುಂಬದ ವಿರುದ್ಧ ಇಂತಹ ಕೃತ್ಯ ಎಸಗಿರುವುದು ಯಾರು ಎಂಬುದೇ ಸದ್ಯ ದೊಡ್ಡ ಪ್ರಶ್ನೆಯಾಗಿದೆ. ಘಟನೆ ಸಂಬಂಧ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆಯೂ ನಡೆಯುತ್ತಿದೆ.
ಇದನ್ನೂ ಓದಿ: ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಕೇರಳದ ಆಸ್ಪತ್ರೆ ತ್ಯಾಜ್ಯದ ಹಾವಳಿ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸ್ಫೋಟದ ಬಗ್ಗೆ ತಕ್ಷಣವೇ ತಮಿಳುನಾಡಿನ ತಾಳವಾಡಿ ಪೊಲೀಸರಿಗೆ ತಿಳಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಫೋಟಕ್ಕೆ ಕಾರಣವಾದ ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ. ಪ್ರಸ್ತುತ, ಇದು ಕಚ್ಚಾ ಬಾಂಬ್ ದಾಳಿಯೇ ಅಥವಾ ಬೇರೆ ಯಾವುದಾದರೂ ಸ್ಫೋಟಕ ವಸ್ತುವಿನಿಂದ ಸಂಭವಿಸಿದೆಯೇ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಫೋಟದ ಹಿಂದಿನ ಉದ್ದೇಶ ಮತ್ತು ಅದನ್ನು ನಡೆಸಿದವರು ಯಾರು ಎಂಬುದು ತನಿಖೆಯಿಂದ ಹೊರಬರಬೇಕಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಫೋಟದ ಸ್ಯಾಂಪಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದು, ಮಾದರಿಗಳ ವಿಶ್ಲೇಷಣೆ ನಡೆಸಿದ ನಂತರವೇ ಸ್ಫೋಟದ ಸ್ವರೂಪ ಮತ್ತು ಬಳಸಲಾದ ಸ್ಫೋಟಕಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Source: TV9 Kannada National
