Hashtagintro

‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ; ರಜನಿಕಾಂತ್ ಜೊತೆ ನಟಿಸುವ ಅವಕಾಶ

‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ; ರಜನಿಕಾಂತ್ ಜೊತೆ ನಟಿಸುವ ಅವಕಾಶ

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಮತ್ತು ಕಮಲ್ ಹಾಸನ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ‘ಧರ್ಮನ್’ ಸಿನಿಮಾದ ತಾರಾಗಣ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಇದೀಗ ಚಿತ್ರತಂಡಕ್ಕೆ ನಟಿ ಶ್ರೀಲೀಲಾ ಪ್ರಮುಖ ಪಾತ್ರಕ್ಕಾಗಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಪ್ರಕಟಿಸಿದ್ದು, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾ ಮೂಲಕ ಶ್ರೀಲೀಲಾ ಅವರಿಗೆ ಬಹುದೊಡ್ಡ ಅವಕಾಶ ಸಿಕ್ಕಂತಾಗಿದೆ.

‘ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್’ ಹಾಗೂ ‘ಟರ್ಮರಿಕ್ ಮೀಡಿಯಾ’ ಸಂಸ್ಥೆಗಳ ಮೂಲಕ ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಅವರು ಈ ಬಿಗ್ ಬಜೆಟ್ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ‘ಓ ಮೈ ಕಡವುಳೆ’ ಖ್ಯಾತಿಯ ಅಶ್ವತ್ಥ್ ಮಾರಿಮುತ್ತು ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಹೊಸ ಬಗೆಯ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಇದೀಗ ಶ್ರೀಲೀಲಾ ಅವರ ಆಗಮನದಿಂದ ಚಿತ್ರದ ಮೆರುಗು ಮತ್ತಷ್ಟು ಹೆಚ್ಚಿದೆ.

‘ಧರ್ಮನ್’ ಚಿತ್ರಕ್ಕೆ ತಾಂತ್ರಿಕವಾಗಿಯೂ ಪ್ರಬಲ ತಂಡ ಸಾಥ್ ನೀಡಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅದ್ದೂರಿ ಸಾಹಸ ದೃಶ್ಯಗಳಿಗಾಗಿ ಜನಪ್ರಿಯ ಸಾಹಸ ನಿರ್ದೇಶಕರಾದ ಅನ್ಬರಿವ್ ಜೋಡಿ ಕೈಜೋಡಿಸಿದೆ. ಅತ್ಯುನ್ನತ ತಾಂತ್ರಿಕ ಗುಣಮಟ್ಟ ಹಾಗೂ ಬಲಿಷ್ಠ ತಾರಾಗಣದೊಂದಿಗೆ ಸಿದ್ಧವಾಗುತ್ತಿರುವ ‘ಧರ್ಮನ್’ ಚಿತ್ರವು ಹೊಸದೊಂದು ಮ್ಯಾಜಿಕ್ ಸೃಷ್ಟಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿದೆ.

ಈ ಚಿತ್ರಕ್ಕೆ ಈಚೆಗಷ್ಟೆ ನಯನತಾರಾ ಎಂಟ್ರಿ ಕೊಟ್ಟಿದ್ದರು. ಚಿತ್ರತಂಡ ತನ್ನ ಮೂರನೇ ಹಂತದ ಚಿತ್ರೀಕರಣವನ್ನು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಿದ್ದು, ಸದ್ಯ ಕೊನೆಯ ಹಂತದ ಪ್ರಮುಖ ಭಾಗಗಳ ಶೂಟಿಂಗ್‌ಗೆ ಸಜ್ಜಾಗುತ್ತಿದೆ ಎನ್ನಲಾಗಿದೆ. ಶ್ರೀಲೀಲಾ ಮತ್ತು ನಯನತಾರಾ ಈ ಚಿತ್ರದ ತಾರಾಗಣಕ್ಕೆ ಇತ್ತೀಚೆಗೆ ಸೇರ್ಪಡೆ ಆದ ಬಳಿಕ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಾಗಿದೆ.

ಇದನ್ನೂ ಓದಿ: ಬೆಂಗಳೂರು-ಹೈದರಾಬಾದ್ ತೊರೆದು ಮುಂಬೈಗೆ ಹೊರಟ ಶ್ರೀಲೀಲಾ

ಶ್ರೀಲೀಲಾ ಅವರು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಪರಾಶಕ್ತಿ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅವರು ಶಿವಕಾರ್ತಿಕೇಯನ್, ರವಿ ಮೋಹನ್ ಮತ್ತು ಅಥರ್ವ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಅದಾದ ನಂತರ, ತಮಿಳಿನಲ್ಲಿ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source: TV9 Kannada Entertainment

Read full article on TV9 Kannada Entertainment

Leave a Comment

Your email address will not be published. Required fields are marked *

समाचार की भाषा चुनें / Choose News Language