
‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಲು ದೊಡ್ಡ ಹಿಟ್ ಆಗಿದೆ. ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದ್ದು, ಇನ್ನೂ ಸಹ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನವನ್ನೇ ಕಾಣುತ್ತಿದೆ. ಹಲವು ಸಣ್ಣ-ಪುಟ್ಟ ನಗರ, ಪಟ್ಟಣ ಪ್ರದೇಶಗಳಲ್ಲಿ ಸಿನಿಮಾ ಹೌಸ್ಫುಲ್ ಆಗುತ್ತಿದೆ. ಸಿನಿಮಾ ಈಗಾಗಲೇ ಒಟಿಟಿಗೆ ಬಂದಿದ್ದರೂ ಸಹ ಇನ್ನೂ ಕಲೆವು ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನ ಕಾಣುತ್ತಲೇ ಇದೆ. ಈಗಾಗಲೇ ಹಲವಾರು ಸಿನಿಮಾ ಸೆಲೆಬ್ರಿಟಿಗಳು ‘ಪ್ರೇಮದ ಊರಲಿ’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹಲವರು ಸಿನಿಮಾ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಪ್ರೇಮದ ಊರಲಿ’ ಸಿನಿಮಾ ವೀಕ್ಷಿಸಿದ್ದು, ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಪ್ರೇಮದ ಊರಲಿ’ ಸಿನಿಮಾ ಒಟಿಟಿಗೆ ಬಂದಿದ್ದರೂ ಸಹ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದಾಗಿ ಹೇಳಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಟ್ವಿಟ್ಟರ್ನಲ್ಲಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಬರೆದಿದ್ದಾರೆ. ‘ಪ್ರೀತಿಯ ಮನೋಜ್ (ಪ್ರೇಮದ ಊರಲಿ ನಿರ್ದೇಶಕ) ಗದ್ದಲ ಗೌಜು ಮುಗಿಯಲಿ ಎಂದು ಕಾದಿದ್ದೆ. ನಿಮ್ಮ ಸಿನಿಮಾ ಅಮೆಜಾನ್ ನಲ್ಲಿ ಲಭ್ಯವಿದ್ದರೂ ಶಿಷ್ಯಕೋಟಿ ಜತೆ ನಿನ್ನೆ ವೆಗಾಸಿಟಿಗೆ ಹೋಗಿ ನೋಡಿ ಬಂದೆ. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಸಿನಿಮಾಗಳನ್ನು ವಿಶಾಲ ಪರದೆಯ ಮೇಲೆ ಹಣ ಕೊಟ್ಟು ಆಸ್ವಾದಿಸಬೇಕೆಂಬುದು ನನ್ನ ನಂಬಿಕೆ’ ಎಂದು ಮೊದಲ ಟ್ವೀಟ್ನಲ್ಲಿ ಹೇಳಿದ್ದಾರೆ ನಾಗತಿಹಳ್ಳಿ.
ಬಳಿಕ, ‘ಗುಣಕ್ಕೆ ಮತ್ಸರ ಸಲ್ಲ.ಸ್ವಯಾರ್ಜಿತ ಸೃಜನಶೀಲ ಗುಣ ಮತ್ತು ಅದೃಷ್ಟದಿಂದ ಬರುವ ಹಣ ಅಭಿನಂದನಾರ್ಹ. ಹೊಸಬರ ಸಿನಿಮಾ ಮಾಡುವುದು ನನಗೂ ನಿಮ್ಮಂತೆ ಇಷ್ಟ. ಮೂವರೂ ಶ್ರದ್ಧೆಯಿಂದ ನಟಿಸಿದ್ದಾರೆ. ರಘು ಮೂರು ಚಿತ್ರಗಳಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದಾರೆ. ಕೊಂಚ ಓವರ್ ಆಕ್ಟ್ ಮಾಡುತ್ತಾರೆ ಅನ್ನುವುದನ್ನು ಬಿಟ್ಟರೆ ಆತ ಬೆಳ್ಳಿ ತೆರೆಯ ಬಂಗಾರ’ ಎಂದು ನಟರುಗಳ ನಟನೆಯನ್ನು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ:‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನ ಬಗ್ಗೆ ರಂಗಾಯಣ ರಘು ಪತ್ನಿ ಮನದ ಮಾತು
‘ನನಗೆ ಮೆಚ್ಚುಗೆಯಾದ ದೃಶ್ಯ ಎಂದರೆ ಗಂಡ ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವುದು. ಮನುಷ್ಯರು ಮಾಡುವ ತಪ್ಪುಗಳಿಗೆಲ್ಲಾ ಇದೇ ಪರಿಹಾರ ಎನ್ನಲಾರೆ. ಆದರೆ ಇದು ನೀವು ಸ್ತ್ರೀತ್ವಕ್ಕೆ ಕೊಟ್ಟ ಸಂತೈಕೆ. ಒಂದು ಕಮರ್ಶಿಯಲ್ ಚಿತ್ರದಲ್ಲೂ ನಿರ್ದೇಶಕನಿಗಿರಬೇಕಾದ ಮೌಲ್ಯಪ್ರಜ್ಞೆ’ ಎಂದು ಮೆಚ್ಚಿಕೊಂಡಿರುವ ಹಿರಿಯ ನಿರ್ದೇಶಕ, ‘ಜನಪ್ರಿಯ ಯಶಸ್ವೀ ನಾಯಕ ನಟನಿದ್ದರೆ ಅವರು ಹೆಂಡತಿಯ ಕಾಲಿಗೆ ಬೀಳುತ್ತಿದ್ದರಾ? ಬಿದ್ದರೆ ಜನ ಒಪ್ಪುತ್ತಿದ್ದರಾ? ಗೊತ್ತಿಲ್ಲ. ಇಂಥದ್ದೊಂದು ಗೆಲುವು ಉದ್ಯಮಕ್ಕೆ , ಮತ್ತು ನಮಗೆಲ್ಲ ಬೇಕಿತ್ತು. ನಿಮ್ಮ ಗೆಲುವು ನಮ್ಮದೂ ಸಹ. ಅಭಿನಂದನೆಗಳು, ಶುಭವಾಗಲಿ’ ಎಂದು ಯುವ ನಿರ್ದೇಶಕನಿಗೆ ಹಾರೈಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Entertainment
