Hashtagintro

ರಾಜ್ಯದ ಮೊದಲ ಸರ್ಕಾರಿ ಐವಿಎಫ್ ಕೇಂದ್ರಕ್ಕೆ ಕೂಡಿಬಂತು ಕಾಲ: ಹುಬ್ಬಳ್ಳಿ ಕೆಎಂಸಿಯಲ್ಲಿ ಲೋಕಾರ್ಪಣೆಗೆ ಮುಹೂರ್ತ ನಿಗದಿ

ರಾಜ್ಯದ ಮೊದಲ ಸರ್ಕಾರಿ ಐವಿಎಫ್ ಕೇಂದ್ರಕ್ಕೆ ಕೂಡಿಬಂತು ಕಾಲ: ಹುಬ್ಬಳ್ಳಿ ಕೆಎಂಸಿಯಲ್ಲಿ ಲೋಕಾರ್ಪಣೆಗೆ ಮುಹೂರ್ತ ನಿಗದಿ

ಹುಬ್ಬಳ್ಳಿ, ನವೆಂಬರ್ 20: ಮಕ್ಕಳು ಬೇಕೆಂಬ ಆಸೆ ಇದ್ದರೂ, ಮಕ್ಕಳಾಗದ ಅನೇಕ ಬಡ ಮತ್ತು ಮಧ್ಯಮ ವರ್ಗದ ದಂಪತಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಐವಿಎಫ್ (IVF) ಚಿಕಿತ್ಸೆಯ ದುಬಾರಿ ವೆಚ್ಚ ಭರಿಸಲಾಗದೆ ಮಕ್ಕಳ ಕನಸನ್ನೇ ಕೈಬಿಡುವ ಪರಿಸ್ಥಿತಿ ಇದೆ. ಇಂತಹ ದಂಪತಿಗಳಿಗೆ ನೆರವಾಗುವ ಉದ್ದೇಶದಿಂದ ರಾಜ್ಯದ ಮೊದಲ ಸರ್ಕಾರಿ ಐವಿಎಫ್ ಕೇಂದ್ರವನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕೆಎಂಸಿ)ಯಲ್ಲಿ ಆರಂಭಿಸಲು ಸಿದ್ಧತೆ ಪೂರ್ಣಗೊಂಡಿದೆ. ಇದೀಗ ಅದಕ್ಕೆ ಮುಹೂರ್ತವೂ ನಿಗದಿಯಾಗಿದೆ. ಡಿಸೆಂಬರ್ 5ರಂದು ಕೇಂದ್ರ ಉದ್ಘಾಟನೆಯಾಗಲಿದೆ.

ಇತ್ತೀಚಿನ ಜೀವನಶೈಲಿ, ಆಹಾರ ಪದ್ಧತಿ ಸೇರಿದಂತೆ ಹಲವು ಕಾರಣಗಳಿಂದ ದಂಪತಿಗಳಲ್ಲಿ ಬಂಜೆತನದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಮಕ್ಕಳಾಗದ ದಂಪತಿಗಳು ಖಾಸಗಿ ಐವಿಎಫ್ ಕೇಂದ್ರಗಳ ಮೊರೆ ಹೋಗುತ್ತಿದ್ದರೂ, ಅಲ್ಲಿ ಚಿಕಿತ್ಸೆಗೆ ತಗಲುವ ಹೆಚ್ಚಿನ ವೆಚ್ಚ ಬಡ ಮತ್ತು ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಔಷಧಗಳು, ಮಾತ್ರೆಗಳು ಮತ್ತು ಇಂಜೆಕ್ಷನ್‌ಗಳ ಬೆಲೆಯೂ ಹೆಚ್ಚಿರುವುದರಿಂದ ಚಿಕಿತ್ಸೆ ಪಡೆಯುವುದು ಹಲವರಿಗೆ ಕಷ್ಟಸಾಧ್ಯವಾಗಿದೆ.

ಐವಿಎಫ್​ಗೆ ಹೆರಿಗೆ ವಾರ್ಡ್‌ನಲ್ಲಿ ಪ್ರತ್ಯೇಕ ಕೇಂದ್ರ

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೆಎಂಸಿಯಲ್ಲಿ ಸರ್ಕಾರಿ ಐವಿಎಫ್ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಕೆಎಂಸಿಯ ಹೆರಿಗೆ ವಾರ್ಡ್‌ನಲ್ಲಿ ಪ್ರತ್ಯೇಕ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರಕ್ಕೆ ಬೇಕಾದ ಎಂಬ್ರಿಯಾಲಜಿಸ್ಟ್ ಮತ್ತು ಎಆರ್‌ಟಿ ಕನ್ಸಲ್ಟೆಂಟ್‌ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿದೆ. ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಇತರ ಸಿಬ್ಬಂದಿಯ ನೇಮಕಾತಿಯನ್ನೂ ಮಾಡಲಾಗಿದೆ.

ಆರೋಗ್ಯ ಭಾಗ್ಯ ಯೋಜನೆಯಡಿ ಐವಿಎಫ್

ಐವಿಎಫ್ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಹೇಗೆ ಎಂಬುದು ಕೇಂದ್ರ ಆರಂಭಕ್ಕೆ ಎದುರಾಗಿದ್ದ ಪ್ರಮುಖ ಸವಾಲಾಗಿತ್ತು. ಚಿಕಿತ್ಸೆ ದುಬಾರಿಯಾಗಿರುವುದರಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ಆರ್ಥಿಕ ಹೊರೆಯಾಗದಂತೆ ವ್ಯವಸ್ಥೆ ರೂಪಿಸಲಾಗಿದೆ. ಐವಿಎಫ್ ಚಿಕಿತ್ಸೆಯನ್ನು ಆರೋಗ್ಯ ಭಾಗ್ಯ ಯೋಜನೆಯಡಿ ಸೇರಿಸಲಾಗಿದ್ದು, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಒಬ್ಬ ಮಹಿಳೆಗೆ ಎರಡು ಬಾರಿ ಐವಿಎಫ್ ಚಿಕಿತ್ಸೆ ಪಡೆಯಲು ಅವಕಾಶವಿದೆ.

2021-22ರಲ್ಲಿಯೇ ಹುಬ್ಬಳ್ಳಿ ಕೆಎಂಸಿಯಲ್ಲಿ ಐವಿಎಫ್ ಕೇಂದ್ರ ಆರಂಭಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ ವೈದ್ಯಕೀಯ ಶಿಕ್ಷಣ ಇಲಾಖೆಯೂ ಇದಕ್ಕೆ ಅನುಮೋದನೆ ನೀಡಿತ್ತು. ಸರ್ಕಾರದ ಸೂಚನೆಯಂತೆ ಕೆಎಂಸಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ, ಚಿಕಿತ್ಸೆಯ ವೆಚ್ಚ, ಸಿಬ್ಬಂದಿ ನೇಮಕಾತಿ ಸೇರಿದಂತೆ ಕೆಲವು ವಿಚಾರಗಳಲ್ಲಿ ನಿರ್ಧಾರವಾಗದ ಕಾರಣ ಕೇಂದ್ರದ ಆರಂಭ ವಿಳಂಬವಾಗಿತ್ತು. ನಂತರ ವೈದ್ಯಕೀಯ ಶಿಕ್ಷಣ ಸಚಿವರ ಸಮಯಾವಕಾಶದ ಕಾರಣದಿಂದಲೂ ಉದ್ಘಾಟನೆ ಮುಂದೂಡಿಕೆಯಾಗಿತ್ತು.

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯ, ಪಾಲಿಸದಿದ್ದರೆ ಕ್ರಮ: ಪರಿಶೀಲನೆಗೆ ಡಿಹೆಚ್​ಒಗಳಿಗೆ ಸೂಚನೆ

ಇದೀಗ ಕೇಂದ್ರದ ಪರವಾನಗಿ ಸೇರಿದಂತೆ ಉದ್ಘಾಟನೆಗೆ ಅಗತ್ಯವಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಡಿಸೆಂಬರ್ 5ರಂದು ಉದ್ಘಾಟನೆಗೆ ಸಮಯ ನೀಡಿದ್ದಾರೆ. ಹೀಗಾಗಿ ಅಂದು ಹುಬ್ಬಳ್ಳಿ ಕೆಎಂಸಿಯಲ್ಲಿ ರಾಜ್ಯದ ಮೊದಲ ಸರ್ಕಾರಿ ಐವಿಎಫ್ ಕೇಂದ್ರ ಕಾರ್ಯಾರಂಭ ಮಾಡಲಿದೆ.

ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸಾ ವೆಚ್ಚದಿಂದಾಗಿ ಐವಿಎಫ್ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಬಡ ಮತ್ತು ಮಧ್ಯಮ ವರ್ಗದ ದಂಪತಿಗಳಿಗೆ ಈ ಕೇಂದ್ರದಿಂದ ಅನುಕೂಲವಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source: TV9 Kannada Health

Read full article on TV9 Kannada Health

Leave a Comment

Your email address will not be published. Required fields are marked *

समाचार की भाषा चुनें / Choose News Language