
ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಮಿನಿ ಹರಾಜಿನ ರಿಟೆನ್ಷನ್ ದಿನಾಂಕ ಹತ್ತಿರ ಬರುತ್ತಿದ್ದಂತೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಫ್ರಾಂಚೈಸಿಗಳ ನಡುವೆ ಒಳಗೊಳಗೇ ಭಾರಿ ಪೈಪೋಟಿ ಆರಂಭಿಸಿದೆ ಎಂದು ವರದಿಯಾಗಿದೆ. ಈ ವರದಿ ಪ್ರಕಾರ, ಬರೋಬ್ಬರಿ 6 ಐಪಿಎಲ್ ಫ್ರಾಂಚೈಸಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿಕೊಳ್ಳಲು ಭಾರಿ ಆಸಕ್ತಿ ತೋರಿಸಿವೆ.
ಪ್ಲೇಯರ್ ಟು ಪ್ಲೇಯರ್ ಆಫರ್:
ಈ ಬಾರಿ ಕೇವಲ ಹಣದ ವ್ಯವಹಾರದ ಬದಲಿಗೆ, ಬಹುತೇಕ ತಂಡಗಳು ‘ಪ್ಲೇಯರ್ ಟು ಪ್ಲೇಯರ್’ ಅದಲು-ಬದಲು ಮಾಡಿಕೊಳ್ಳಲು ಮುಂದಾಗಿವೆ. ಹಾರ್ದಿಕ್ ಪಾಂಡ್ಯ ಅವರ ಪ್ರಸ್ತುತ ಮೌಲ್ಯ ₹16.35 ಕೋಟಿ ಆಗಿರುವುದರಿಂದ, ಅದನ್ನು ಸರಿದೂಗಿಸಲು ಕೆಲವು ತಂಡಗಳು ತಮ್ಮ ಸ್ಟಾರ್ ಆಟಗಾರರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಡಲು ಸಿದ್ಧವಾಗಿವೆ ಎನ್ನಲಾಗಿದೆ.
ಈ ಮೂಲಕ ಸ್ವಾಪ್ ಡೀಲ್ ಮಾಡಿಕೊಳ್ಳಲು ಕೆಲ ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಜೊತೆ ಮಾತುಕತೆ ಆರಂಭಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರೇಸ್‌ನಲ್ಲಿ ಚಾಂಪಿಯನ್ನರು:
ವಿಶೇಷವೆಂದರೆ, ಹಾರ್ದಿಕ್ ಪಾಂಡ್ಯ ಅವರನ್ನು ಸ್ವಾಪ್ ಡೀಲ್ ಮಾಡಿಕೊಳ್ಳಲು ಐಪಿಎಲ್ನ ಚಾಂಪಿಯನ್ ತಂಡಗಳೇ ಆಸಕ್ತಿ ತೋರಿಸಿವೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕೊಲ್ಕತ್ತಾ ನೈಟ್ ರೈಡರ್ಸ್.
- ಕೋಲ್ಕತಾ ನೈಟ್ ರೈಡರ್ಸ್ (KKR): 2024ರ ಚಾಂಪಿಯನ್ಸ್ ಕೆಕೆಆರ್ ತಂಡಕ್ಕೆ ಒಬ್ಬ ಅನುಭವಿ ಭಾರತೀಯ ನಾಯಕನ ಅಗತ್ಯವಿದೆ. ಹೀಗಾಗಿ ಕೆಕೆಆರ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರ ಬೆನ್ನು ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
- ರಾಜಸ್ಥಾನ್ ರಾಯಲ್ಸ್ (RR): ಚೊಚ್ಚಲ ಐಪಿಎಲ್ನ ಚಾಂಪಿಯನ್ಸ್ ರಾಜಸ್ಥಾನ್ ರಾಯಲ್ಸ್ ಕೂಡ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಮೇಲೆ ಕಣ್ಣಿಟ್ಟಿದ್ದಾರೆ. ಪಾಂಡ್ಯರನ್ನು ಸೇರ್ಪಡೆಗೊಳಿಸುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಇರಾದೆಯಲ್ಲಿದ್ದಾರೆ ಆರ್ಆರ್ ಫ್ರಾಂಚೈಸಿ.
- ಚೆನ್ನೈ ಸೂಪರ್ ಕಿಂಗ್ಸ್ (CSK): ಇತ್ತೀಚೆಗೆ ಸಿಎಸ್ಕೆ ಬಿಡುಗಡೆ ಮಾಡಿದ ಪ್ರೋಮೋ ಒಂದರಲ್ಲಿ ಪಾಂಡ್ಯ ಅವರ ’33’ ನಂಬರ್ ಜೆರ್ಸಿ ಹೈಲೈಟ್ ಆಗಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಪಾಂಡ್ಯರ ಖರೀದಿಗೆ ಸಿಎಸ್ಕೆ ಕೂಡ ತೆರೆಮರೆಯ ಪ್ರಯತ್ನಕ್ಕೆ ಮತ್ತೊಮ್ಮೆ ಕೈಹಾಕಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: 7 ಎಸೆತಗಳಿಂದ ಅಭಿಷೇಕ್ ಶರ್ಮಾ ಕೈತಪ್ಪಿದ ವಿಶ್ವ ದಾಖಲೆ!
ನವೆಂಬರ್ 1 ರಿಂದ ಅಸಲಿ ಜಿದ್ದಾಜಿದ್ದಿ:
ಸದ್ಯ ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದು, ನವೆಂಬರ್ 1, 2026 ರಿಂದ ಈ ಟ್ರೇಡಿಂಗ್ ಮಾತುಕತೆಗಳು ಅಧಿಕೃತವಾಗಿ ವೇಗ ಪಡೆದುಕೊಳ್ಳಲಿವೆ. ಡೆಲ್ಲಿ ಕ್ಯಾಪಿಟಲ್ಸ್ (DC), ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಪಂಜಾಬ್ ಕಿಂಗ್ಸ್ (PBKS) ತಂಡಗಳು ಕೂಡ ಹಾರ್ದಿಕ್ ಪಾಂಡ್ಯ ಅವರ ಮುಂದಿನ ನಡೆ ಏನಿರಬಹುದು ಎಂದು ಸೂಕ್ಷ್ಮವಾಗಿ ಗಮನಿಸುತ್ತಿವೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬುದು ಇನ್ನೂ ಕೂಡ ನಿಗೂಢ!
Source: TV9 Kannada Sports
