
ಹಾಸನ, ನವೆಂಬರ್ 11: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಶಕ್ತಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಇಂದು ತೆರೆ ಬೀಳುತ್ತಿದೆ. ಮಧ್ಯಾಹ್ನ 12.30ಕ್ಕೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗುತ್ತದೆ. ಕೊನೆಯ ದಿನವಾದ ಇಂದು ದೇವಿಯ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ. ಬಾಗಿಲು ತೆರೆದ ದಿನದಿಂದ ಕಳೆದ ರಾತ್ರಿ (ನವೆಂಬರ್ 10 ರ ಮಧ್ಯರಾತ್ರಿ) ವರೆಗೆ 31 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ₹25.36 ಕೋಟಿ ಆದಾಯ ಸಂಗ್ರಹವಾಗಿದೆ.
ಇಂದು ದೇವಾಲಯದಲ್ಲಿ ಅರ್ಚಕರು ದೇವಿಗೆ ನೈವೇದ್ಯ ಅರ್ಪಿಸಿ, ಅಲಂಕಾರ ವಿಸರ್ಜನೆ ಪೂಜೆ ನಡೆಸಲಿದ್ದಾರೆ. ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಈ ಪೂಜಾ ಕೈಂಕರ್ಯ ನೆರವೇರಲಿದೆ. ಪೂಜೆಯ ಬಳಿಕ ದೇವಿಯ ವಿಶ್ವರೂಪ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆ ಸಮಯದಲ್ಲಿ ಸ್ಥಳದಲ್ಲಿ ಹಾಜರಿರುವ ಗಣ್ಯರು ಹಾಗೂ ಭಕ್ತರಿಗೆ ದರ್ಶನ ಪಡೆಯಲು ಅವಕಾಶವಿರುತ್ತದೆ.
ವಿಶ್ವರೂಪ ದರ್ಶನದ ನಂತರ ಸಿಬ್ಬಂದಿ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಸೀಲ್ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರ ಸಮ್ಮುಖದಲ್ಲಿ ದೇವಾಲಯದ ಬಾಗಿಲು ಬಂದ್ ಆಗಲಿದೆ. ಇನ್ನು ಮುಂದಿನ ವರ್ಷ ಆಶ್ವಯುಜ ಮಾಸದಲ್ಲಿ ದೇವಿಯ ದರ್ಶನಕ್ಕೆ ಬಾಗಿಲು ತೆರೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada National
