
ಕೇರಳದಲ್ಲಿ ಇಂದು ಜನಿಸುವ ಮಗುವೊಂದರ ಬದುಕುವ ಸಾಧ್ಯತೆಯು ಶ್ರೀಮಂತ ಯುರೋಪಿಯನ್ ದೇಶವೊಂದಕ್ಕೆ ಸಮಾನವಾಗಿದೆ. ಆದರೆ ಇದೇ ಅವಧಿಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಅಥವಾ ಛತ್ತೀಸ್ಗಢದ ಕೆಲವು ಭಾಗಗಳಲ್ಲಿ ಜನಿಸುವ ಮಗುವೊಂದು, ಸುಡಾನ್ ದೇಶದಲ್ಲಿಯಂತಹ ಶಿಶು ಮರಣದ ಅಪಾಯವನ್ನು ಎದುರಿಸುತ್ತದೆ.
ಈ ಎರಡೂ ಮಕ್ಕಳು ಒಂದೇ ರಾಷ್ಟ್ರೀಯ ಸರ್ಕಾರದಡಿ, ಒಂದೇ ಸಂವಿಧಾನದಡಿ ಮತ್ತು ಒಂದೇ ಧ್ವಜದ ಕೆಳಗೆ ಜನಿಸಿವೆ. ಆದರೆ ಅವುಗಳ ಮೊದಲ ವರ್ಷದ ಬದುಕುವ ಸಾಧ್ಯತೆಗಳು ಮಾತ್ರ ಒಂದೇ ರೀತಿಯಾಗಿಲ್ಲ.
ಭಾರತದ ರಾಷ್ಟ್ರೀಯ ಶಿಶು ಮರಣ ಪ್ರಮಾಣವು ಪ್ರತಿ 1,000 ಜೀವಂತ ಜನನಗಳಿಗೆ ಸರಾಸರಿ ಸುಮಾರು 25 ಸಾವುಗಳಷ್ಟಿದೆ. ಆದರೆ ಕೇರಳದಲ್ಲಿ ಈ ಪ್ರಮಾಣವು ಕೇವಲ 5 ಆಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಈ ಪ್ರಮಾಣವು 37 ರಷ್ಟಿದ್ದು, ಒಂದೇ ದೇಶದಲ್ಲಿ ಮತ್ತು ಒಂದೇ ಕೇಂದ್ರ ಆರೋಗ್ಯ ನೀತಿಗಳ ಅಡಿಯಲ್ಲಿದ್ದರೂ ಈ ರಾಜ್ಯಗಳಲ್ಲಿ ಶಿಶು ಮರಣ ಪ್ರಮಾಣ ಕೇರಳದಕ್ಕಿಂತ ಏಳರಷ್ಟು ಅಧಿಕವಾಗಿದೆ.
ಒಂದು ಸ್ಥಳದಲ್ಲಿ ವೈದ್ಯರು ಹೆಚ್ಚು ಶ್ರಮಿಸುತ್ತಾರೆ, ಇನ್ನೊಂದು ಕಡೆ ವೈದ್ಯರು ಕಡಿಮೆ ಶ್ರಮಿಸುತ್ತಾರೆ ಎಂದರ್ಥವಲ್ಲ. ಇದು ಆಸ್ಪತ್ರೆಗಳಿಗಿಂತ ಹೆಚ್ಚಾಗಿ ಹೆಲ್ತ್ಕೇರ್ ಸಂಬಂಧಿತ ವ್ಯವಸ್ಥೆಯ ಕಥೆಯಾಗಿದೆ.
ಕೇರಳದ ಈ ಮುನ್ನಡೆಯು ದಶಕಗಳ ಕಾಲ ನಡೆದ ಸತತ ಪ್ರಯತ್ನಗಳಿಂದ ರೂಪುಗೊಂಡಿದೆ. ನಿರಂತರವಾಗಿರುವ ಹೆಚ್ಚಿನ ಮಟ್ಟದ ಮಹಿಳಾ ಸಾಕ್ಷರತೆ, ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಮುಂಚಿತವಾದ ಮತ್ತು ನಿರಂತರ ಹೂಡಿಕೆ, ಉತ್ತಮ ನೈರ್ಮಲ್ಯ ಮೂಲಭೂತ ಸೌಕರ್ಯ ಹಾಗೂ ಗ್ರಾಮ ಮಟ್ಟದವರೆಗೆ ಸೇವೆಗಳನ್ನು ತಲುಪಿಸಲು ಸಮರ್ಥವಾಗಿರುವ ಬಲವಾದ ಸ್ಥಳೀಯ ಆಡಳಿತವೇ ಇದಕ್ಕೆ ಕಾರಣ. ಆದರೆ ಹಿಂದುಳಿದಿರುವ ರಾಜ್ಯಗಳು ಇದಕ್ಕೆ ತದ್ವಿರುದ್ಧವಾದ ಮಾದರಿಯನ್ನು ಹಂಚಿಕೊಳ್ಳುತ್ತವೆ. ಕಡಿಮೆ ಮಹಿಳಾ ಸಾಕ್ಷರತೆ, ದುರ್ಬಲ ಗ್ರಾಮೀಣ ಮೂಲಭೂತ ಸೌಕರ್ಯ ಮತ್ತು ಹೆಚ್ಚು ಹರಡಿರುವ ಜನಸಂಖ್ಯೆಯ ನಡುವೆ ಹಂಚಿಹೋಗಿರುವ ಆರೋಗ್ಯ ವ್ಯವಸ್ಥೆಗಳು ಇಲ್ಲಿ ಕಂಡುಬರುತ್ತವೆ.
ಇದನ್ನೂ ಓದಿ: ಅಪೌಷ್ಟಿಕತೆಯಿಂದ ಬೊಜ್ಜಿನತ್ತ ಭಾರತದ ಆರೋಗ್ಯ ಸಮಸ್ಯೆ: ಒಂದೇ ಕುಟುಂಬದಲ್ಲಿ ಎರಡು ತಲೆಮಾರಿನ ಎರಡು ಸವಾಲುಗಳು
ಸಮಯದಂತಹ ಮೂಲಭೂತ ಸಂಗತಿಯ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ ಎಂದು ಯೋಚಿಸಿ. ಪ್ರಾಥಮಿಕ ಆರೋಗ್ಯ ಕೇಂದ್ರವಿರುವ ಇರುವ ಗ್ರಾಮದಲ್ಲಿ ಒಬ್ಬ ತಾಯಿ ವಾಸಿಸುತ್ತಿರುತ್ತಾಳೆ ಎಂದು ಕಲ್ಪಿಸಿಕೊಳ್ಳಿ. ಅಲ್ಲಿ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತೆಯೊಬ್ಬರು ಆ ಮಹಿಳೆಗೆ ನಿಯಮಿತವಾಗಿ ತಪಾಸಣೆಯ ಸೇವೆ ನೀಡುತ್ತಿರುತ್ತಾಳೆ. ಮಹಿಳೆ ಇರುವ ಜಾಗಕ್ಕೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಇರುವ ರಸ್ತೆ ಸದಾಕಾಲ ಸಂಚಾರಯೋಗ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಆ ಮಹಿಳೆಗೆ ಹೆರಿಗೆ ಮತ್ತು ಜನನ ಅನುಭವ ಹೇಗಿರಬಹುದು? ಇದಕ್ಕೆ ತದ್ವಿರುದ್ಧವಾಗಿ, ಯಾವುದೇ ಸೌಲಭ್ಯಗಳಿಲ್ಲದ ಪ್ರದೇಶದಲ್ಲಿರುವ ಗರ್ಭಿಣಿಗೆ ಅನುಭವ ಹೇಗಿದ್ದೀತು ಯೋಚಿಸಿ? ಈ ಇಬ್ಬರೂ ಮಹಿಳೆಯರಲ್ಲಿ ತಮ್ಮ ಮಗುವಿನ ಆರೋಗ್ಯದ ಕಾಳಜಿ ಕಡಿಮೆ ಇದೆ ಎಂದಲ್ಲ. ಆದರೆ ಅವರ ಸುತ್ತಮುತ್ತಲಿನ ಪರಿಸರವು ಆ ಕಾಳಜಿಯನ್ನು ಕಾರ್ಯರೂಪಕ್ಕೆ ತರಲು ಸಂಪೂರ್ಣವಾಗಿ ಭಿನ್ನವಾದ ಸಾಧನಗಳನ್ನು ಒದಗಿಸುತ್ತದೆ ಅಷ್ಟೇ.
ಈ ಕಾರಣಕ್ಕಾಗಿಯೇ ಸಾರ್ವಜನಿಕ ಆರೋಗ್ಯ ಸಂಶೋಧಕರು ಆರೋಗ್ಯದ ಸಾಮಾಜಿಕ ನಿರ್ಣಾಯಕಗಳ (social determinants of health) ಕುರಿತು ಮಾತನಾಡುತ್ತಾರೆ. ಅಂದರೆ ಶಿಕ್ಷಣ, ನೈರ್ಮಲ್ಯ, ಆದಾಯ ಮತ್ತು ಸ್ಥಳೀಯ ಆಡಳಿತವು ಆ ಪ್ರದೇಶದಲ್ಲಿರುವ ಆಸ್ಪತ್ರೆಗಳ ಹಾಸಿಗೆಗಳಷ್ಟೇ ಅಥವಾ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯದ ಫಲಿತಾಂಶಗಳನ್ನು ರೂಪಿಸುತ್ತವೆ ಎಂಬುದು ಇದರರ್ಥ. ವಿಶ್ವಾಸಾರ್ಹವಲ್ಲದ ರಸ್ತೆಯಲ್ಲಿ ಒಂದು ಗಂಟೆ ಸಾಗಿದರೆ ಸಿಗುವ ಸುಸಜ್ಜಿತ ಆಸ್ಪತ್ರೆಗಿಂತಲೂ, ನಿಯಮಿತವಾಗಿ ಭೇಟಿ ನೀಡುವ ತರಬೇತಿ ಪಡೆದ ಕಾರ್ಯಕರ್ತೆಯಿರುವ ಮತ್ತು ಐದೇ ನಿಮಿಷದ ದೂರದಲ್ಲಿರುವ ಸಾಧಾರಣ ಕ್ಲಿನಿಕ್ ಆಚರಣೆಯಲ್ಲಿ ಹೆಚ್ಚು ಮುಖ್ಯವಾಗಬಹುದು.
ಇದರರ್ಥ ವೈಯಕ್ತಿಕ ಪ್ರಯತ್ನಗಳು ಅಥವಾ ಕುಟುಂಬದ ಆಯ್ಕೆಗಳು ಮುಖ್ಯವಲ್ಲ ಎಂದಲ್ಲ. ಅವು ಖಂಡಿತವಾಗಿಯೂ ಎಲ್ಲೆಡೆಯೂ ಮುಖ್ಯವಾಗಿವೆ. ಆದರೆ ಭಾರತದ ಎರಡು ರಾಜ್ಯಗಳ ನಡುವಿನ ಶಿಶು ಮರಣದಲ್ಲಿನ ಏಳು ಪಟ್ಟು ವ್ಯತ್ಯಾಸವನ್ನು ಕೇವಲ ವೈಯಕ್ತಿಕ ಆಯ್ಕೆಗಳಿಂದ ಮಾತ್ರ ವಿವರಿಸಲು ಸಾಧ್ಯವಿಲ್ಲ. ಇದು ವೈಯಕ್ತಿಕ ಕುಟುಂಬಗಳು ಸೃಷ್ಟಿಸದ ಮತ್ತು ತಾವಾಗಿಯೇ ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಿಲ್ಲದ ದಶಕಗಳ ಭಿನ್ನ ಹೂಡಿಕೆಗಳು, ಭಿನ್ನ ಆಡಳಿತ ಮತ್ತು ಭಿನ್ನ ಆರಂಭಿಕ ಹಂತಗಳನ್ನು ಪ್ರತಿಬಿಂಬಿಸುತ್ತದೆ.
ನಾಗರಿಕರು ಆರೋಗ್ಯ ಸುದ್ದಿಗಳನ್ನು ಹೇಗೆ ಓದಬೇಕು ಎಂಬುದರ ಕುರಿತು ಇಲ್ಲಿ ಒಂದು ಮೌನವಾದ ಪಾಠವಿದೆ. ಭಾರತದ ಒಟ್ಟಾರೆ ಶಿಶು ಮರಣ ಪ್ರಮಾಣದಂತಹ ರಾಷ್ಟ್ರೀಯ ಅಂಕಿಅಂಶವು ಒಂದೇ ರೀತಿಯ ಏಕರೂಪದ ಕಥೆಯಂತೆ ಕಾಣಿಸಬಹುದು. ಆದರೆ ಅದುದಾಖಲಿಸುವ ವಾಸ್ತವವು ಹಾಗೆ ಇರುವುದಿಲ್ಲ. ಬಹುತೇಕ ಪ್ರತಿಯೊಂದು ರಾಷ್ಟ್ರೀಯ ಆರೋಗ್ಯ ಸಂಖ್ಯೆಯ ಹಿಂದೆ ಅತ್ಯಂತ ಭಿನ್ನವಾದ ಸ್ಥಳೀಯ ವಾಸ್ತವತೆಗಳಿವೆ. ಕೆಲವು ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಗಳಿಗೆ ಹತ್ತಿರದಲ್ಲಿದ್ದರೆ, ಇನ್ನೂ ಕೆಲವುಗಳು ದಶಕಗಳ ಪ್ರಯತ್ನ ಮತ್ತು ಹೂಡಿಕೆಯ ಹೊರತಾಗಿಯೂ ಮುಂದುವರಿಯುತ್ತಿರುವ ಸವಾಲುಗಳನ್ನು ಎದುರಿಸುತ್ತಿವೆ.
ಇದನ್ನೂ ಓದಿ: ಸರ್ಕಾರ ಉಚಿತ ಆರೋಗ್ಯ ವಿಮಾ ಸೌಲಭ್ಯ ನೀಡಿದರೂ ಜನರು ಯಾಕೆ ಉಪಯೋಗಿಸುತ್ತಿಲ್ಲ? ಯೋಜನೆ ಬಗ್ಗೆ ಅರಿವಿರುವುದು ಮುಖ್ಯ
ಭಾರತದ ಯಾವುದೇ ಭಾಗದಲ್ಲಿರುವ ನಾಗರಿಕರಿಗೆ, ದೋಷಾರೋಪಣೆ ಮಾಡಲು ಅಲ್ಲ ಬದಲಿಗೆ ಸ್ಥಳೀಯವಾಗಿ ಉತ್ತಮ ಹಾಗೂ ನಿರ್ದಿಷ್ಟವಾದ ಪ್ರಶ್ನೆಗಳನ್ನು ಕೇಳಲು ಈ ವಿಷಯವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಸ್ವಂತ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆಯೇ, ತುರ್ತು ಸಂದರ್ಭದಲ್ಲಿ ಹತ್ತಿರದ ಆಸ್ಪತ್ರೆಗೆ ವಾಸ್ತವಿಕವಾಗಿ ತಲುಪಲು ಸಾಧ್ಯವಿದೆಯೇ ಅಥವಾ ಸ್ಥಳೀಯ ಆಡಳಿತವು ಆರೋಗ್ಯ ಬಜೆಟ್ ಅನ್ನು ಜನರನ್ನು ತಲುಪುವ ಸೇವೆಗಳಾಗಿ ನಿಜಕ್ಕೂ ಪರಿವರ್ತಿಸುತ್ತಿದೆಯೇ ಎಂಬುದನ್ನು ರಾಷ್ಟ್ರೀಯ ಸರಾಸರಿಯು ನಿಮಗೆ ಹೇಳಲಾರದು.
ಮುಂದಿನ ಬಾರಿ ಭಾರತದ ರಾಷ್ಟ್ರೀಯ ಆರೋಗ್ಯ ಅಂಕಿಅಂಶಗಳನ್ನು ವಿಶ್ವಾಸದಿಂದ ಉಲ್ಲೇಖಿಸುವುದನ್ನು ನೀವು ಕೇಳಿದಾಗ, ತಕ್ಷಣವೇ ಮತ್ತಷ್ಟು ಆಳವಾದ ಮತ್ತು ಸ್ಥಳೀಯವಾದ ಪ್ರಶ್ನೆಯನ್ನು ಕೇಳುವುದು ಸೂಕ್ತ. ಭಾರತವು ಎಷ್ಟು ಆರೋಗ್ಯಕರವಾಗಿದೆ ಎಂಬುದರ ಬದಲಿಗೆ, ನಾನು ವಾಸ್ತವಿಕವಾಗಿ ವಾಸಿಸುವ ನಿರ್ದಿಷ್ಟ ಸ್ಥಳವು ಎಷ್ಟು ಆರೋಗ್ಯಕರವಾಗಿದೆ ಮತ್ತು ಯಾಕೆ ಎಂಬ ಪ್ರಶ್ನೆಯನ್ನು ಕೇಳುವುದು ಅವಶ್ಯಕ.
(ಆಧಾರಗಳು: ಡಾಟಾ ಫಾರ್ ಇಂಡಿಯಾ (Data For India), ರಾಜ್ಯವಾರು ಶಿಶು ಮರಣ ಪ್ರಮಾಣದ ತುಲನಾತ್ಮಕ ವಿಶ್ಲೇಷಣೆ, 2023; ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಮಟ್ಟದ ಆರೋಗ್ಯ ಸೂಚಕಗಳು; ಆರೋಗ್ಯದ ಸಾಮಾಜಿಕ ನಿರ್ಣಾಯಕಗಳು ಮತ್ತು ಭಾರತದ ಆರೋಗ್ಯ ರಕ್ಷಣೆಯ ಫಲಿತಾಂಶಗಳಲ್ಲಿನ ರಾಜ್ಯ ಮಟ್ಟದ ಅಸಮಾನತೆಗಳ ಕುರಿತ ಸಂಶೋಧನೆ.)
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Health
