
ಮಕ್ಕಳ ಆರೋಗ್ಯದಲ್ಲಿ ಎತ್ತರ ಮತ್ತು ತೂಕದ ಬೆಳವಣಿಗೆಯಷ್ಟೇ ಮೂಳೆಗಳು, ಸ್ನಾಯುಗಳು ಮತ್ತು ಕೀಲುಗಳ ಆರೋಗ್ಯವೂ ಮುಖ್ಯವಾಗಿದೆ. ಬಾಲ್ಯದಲ್ಲಿ ಮೂಳೆಗಳು ಸರಿಯಾಗಿ ಬೆಳೆಯಲು ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೋಟೀನ್ ಹಾಗೂ ಸಮತೋಲಿತ ಆಹಾರ ಅಗತ್ಯ. ಆದರೆ, ಮಕ್ಕಳು ಪದೇಪದೇ ಕಾಲು ನೋವು ಎಂದು ಹೇಳಿದಾಗ ಅಥವಾ ನಡೆಯುವಾಗ ಕುಂಟುತ್ತಿದ್ದಾಗ ಅನೇಕ ಪೋಷಕರು ಅದನ್ನು ಸಾಮಾನ್ಯ ಬೆಳವಣಿಗೆಯ ಭಾಗವೆಂದು ನಿರ್ಲಕ್ಷಿಸುತ್ತಾರೆ. ಇಂತಹ ಲಕ್ಷಣಗಳಿಗೆ ಹಲವು ಕಾರಣಗಳಿರಬಹುದು. ಆದ್ದರಿಂದ ಅವು ಮುಂದುವರಿದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ.
ಮಕ್ಕಳ ಮೂಳೆಗಳ ಬೆಳವಣಿಗೆ ಏಕೆ ಮುಖ್ಯ?
ಬಾಲ್ಯ ಮತ್ತು ಹದಿಹರೆಯವು ಮೂಳೆಗಳ ಬೆಳವಣಿಗೆ ಹಾಗೂ ಬಲವರ್ಧನೆಯ ಪ್ರಮುಖ ಹಂತಗಳಾಗಿವೆ. ಈ ಸಮಯದಲ್ಲಿ ಕ್ಯಾಲ್ಸಿಯಂ ಮೂಳೆಗಳ ಬಲಕ್ಕೆ ನೆರವಾಗುತ್ತದೆ. ವಿಟಮಿನ್ ಡಿ ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಪ್ರೋಟೀನ್ ಕೂಡ ಸ್ನಾಯುಗಳು ಮತ್ತು ದೇಹದ ಅಂಗಾಂಶಗಳ ಬೆಳವಣಿಗೆಗೆ ಅಗತ್ಯವಾಗಿದೆ.
ಹಾಲು, ಮೊಸರು, ಪನೀರ್, ರಾಗಿ, ಎಳ್ಳು ಮತ್ತು ಬೇಳೆಕಾಳುಗಳನ್ನು ಮಕ್ಕಳ ಆಹಾರದಲ್ಲಿ ಸೇರಿಸಬಹುದು. ವಯಸ್ಸಿಗೆ ಅನುಗುಣವಾಗಿ ಆಟವಾಡುವುದು, ಓಡುವುದು ಮತ್ತು ಜಿಗಿಯುವಂತಹ ಚಟುವಟಿಕೆಗಳು ಮೂಳೆ ಹಾಗೂ ಸ್ನಾಯುಗಳ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ.
ಇದನ್ನೂ ಓದಿ: ಗಂಟೆಗಟ್ಟಲೆ ರೀಲ್ಸ್ ನೋಡುತ್ತೀರಾ? ಕುತ್ತಿಗೆ ಮತ್ತು ಬೆನ್ನುಮೂಳೆಯ ಆರೋಗ್ಯದ ಮೇಲೆ ಬೀರಬಹುದು ಪರಿಣಾಮ!
ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಮಕ್ಕಳಲ್ಲಿ ಕಾಲು ನೋವು ಕಾಣಿಸಿಕೊಳ್ಳುವುದಕ್ಕೆ ಬೆಳವಣಿಗೆಗೆ ಸಂಬಂಧಿಸಿದ ನೋವು, ಗಾಯ, ಸ್ನಾಯುಗಳ ಸಮಸ್ಯೆ ಅಥವಾ ಇತರ ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು. ಆದರೆ, ನಿರಂತರ ನೋವು, ಕೀಲುಗಳಲ್ಲಿ ಊತ, ನಡೆಯಲು ತೊಂದರೆ, ಕುಂಟುವುದು ಅಥವಾ ದೈಹಿಕ ಚಟುವಟಿಕೆ ಕಡಿಮೆಯಾಗುವುದು ಕಂಡುಬಂದರೆ ವೈದ್ಯಕೀಯ ಪರೀಕ್ಷೆ ಅಗತ್ಯವಾಗಬಹುದು. ಎಲ್ಲ ಕಾಲು ನೋವುಗಳೂ ಮೂಳೆಗಳು ದುರ್ಬಲವಾಗಿರುವುದರ ಸಂಕೇತವಲ್ಲ. ಆದರೆ, ಒಂದೇ ಜಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡರೆ ಅಥವಾ ಮಗು ಸಾಮಾನ್ಯವಾಗಿ ನಡೆಯಲು ಸಾಧ್ಯವಾಗದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನೋವಿನ ಜೊತೆಗೆ ಜ್ವರ ಅಥವಾ ಕೀಲುಗಳಲ್ಲಿ ಊತ ಕಂಡುಬಂದರೂ ವಿಳಂಬ ಮಾಡಬಾರದು.
ಸರಿಯಾದ ಪೋಷಣೆಯಿಂದ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಸಮರ್ಪಕ ನಿದ್ರೆ ಮತ್ತು ನಿಯಮಿತ ದೈಹಿಕ ಚಟುವಟಿಕೆಗೂ ಆದ್ಯತೆ ನೀಡಬೇಕು. ವಿಟಮಿನ್ ಡಿ ಕೊರತೆಯ ಅನುಮಾನವಿದ್ದರೆ ವೈದ್ಯರ ಸಲಹೆಯಂತೆ ಪರೀಕ್ಷೆ ಮಾಡಿಸಬಹುದು. ವೈದ್ಯಕೀಯ ಸಲಹೆಯಿಲ್ಲದೆ ಕ್ಯಾಲ್ಸಿಯಂ ಅಥವಾ ವಿಟಮಿನ್ ಡಿ ಪೂರಕಗಳನ್ನು ನೀಡಬಾರದು.
ಬೆಳವಣಿಗೆಯ ಮೇಲೆ ನಿಗಾ ಇರಲಿ
ಮಗುವಿನ ನಡಿಗೆಯಲ್ಲಿ ಬದಲಾವಣೆ, ಕಾಲುಗಳ ಆಕಾರದಲ್ಲಿ ಅಸಹಜತೆ ಅಥವಾ ಕಾಲುಗಳ ಉದ್ದದಲ್ಲಿ ಸ್ಪಷ್ಟ ವ್ಯತ್ಯಾಸ ಕಂಡುಬಂದರೆ ತಜ್ಞರ ಸಲಹೆ ಪಡೆಯಿರಿ. ಆರಂಭದಲ್ಲೇ ಸಮಸ್ಯೆಯನ್ನು ಗುರುತಿಸುವುದರಿಂದ ಸೂಕ್ತ ಚಿಕಿತ್ಸೆ ಮತ್ತು ಆರೈಕೆಗೆ ನೆರವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Health
