
2026ರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಗಾಯಗೊಂಡಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ತಿಲಕ್ ಗಾಯಕ್ಕೆ ತುತ್ತಾಗಿದ್ದಾರೆ. ಗಾಯದ ತೀವ್ರತೆಯಿಂದಾಗಿ ಅವರು ಮೈದಾನದಿಂದ ಹೊರನಡೆಯಬೇಕಾಯಿತು. ಬಳಿಕ ಉಪನಾಯಕ ರಿಂಕು ಸಿಂಗ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡರು. ಸದ್ಯ ಉತ್ತಮ ಫಾರ್ಮ್ನಲ್ಲಿರುವ ತಿಲಕ್ ಗಾಯಗೊಂಡಿರುವುದು ಭಾರತ ಎ ತಂಡಕ್ಕೆ ಆತಂಕ ತಂದಿದೆ.
48ನೇ ಓವರ್ನಲ್ಲಿ ತಿಲಕ್ಗೆ ಗಾಯ
ನವೆಂಬರ್ 22ರ ಭಾನುವಾರ ದೋಹಾದಲ್ಲಿ ನಡೆದ ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ಪಾಕಿಸ್ತಾನ ತಂಡದ ಇನ್ನಿಂಗ್ಸ್ನ 48ನೇ ಓವರ್ನಲ್ಲಿ ತಿಲಕ್ ಗಾಯಗೊಂಡರು. ಪ್ರಿನ್ಸ್ ಯಾದವ್ ಈ ಓವರ್ ಬೌಲಿಂಗ್ ಮಾಡುತ್ತಿದ್ದರು. ಓವರ್ನ ಎರಡನೇ ಎಸೆತವನ್ನು ಎದುರಿಸಿದ ಫರ್ಹಾನ್ ಯೂಸುಫ್ ಕವರ್ ಭಾಗಕ್ಕೆ ಚೆಂಡನ್ನು ಹೊಡೆದರು. ಆದರೆ, ಬ್ಯಾಟ್ಗೆ ಚೆಂಡು ಸರಿಯಾಗಿ ಸಿಗದ ಕಾರಣ ಕ್ಯಾಚ್ ಹಿಡಿಯುವ ಅವಕಾಶ ಭಾರತ ತಂಡಕ್ಕೆ ಲಭಿಸಿತು.
ಮುಖ ನೆಲಕ್ಕೆ ಬಲವಾಗಿ ಅಪ್ಪಳಿಸಿತು
ಆ ಸಂದರ್ಭದಲ್ಲಿ ಕವರ್ ಫೀಲ್ಡಿಂಗ್ ಮಾಡುತ್ತಿದ್ದ ತಿಲಕ್ ವರ್ಮಾ ಚೆಂಡನ್ನು ಹಿಡಿಯಲು ಎಡಭಾಗಕ್ಕೆ ಓಡಿ, ಡೈವ್ ಮಾಡಿದರು. ಎಡಗೈಯಿಂದ ಕ್ಯಾಚ್ ಹಿಡಿಯಲು ಪ್ರಯತ್ನಿಸಿದರಾದರೂ ಚೆಂಡು ಅವರ ಕೈಗೆ ಸಿಗಲಿಲ್ಲ. ಈ ವೇಳೆ ನಿಯಂತ್ರಣ ತಪ್ಪಿದ ತಿಲಕ್ ಅವರ ಮುಖ ನೆಲಕ್ಕೆ ಬಲವಾಗಿ ಅಪ್ಪಳಿಸಿತು. ಇದರಿಂದ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಏಟು ಬಿದ್ದಿದ್ದು, ಅವರು ಮೈದಾನದಲ್ಲೇ ಕುಸಿದುಬಿದ್ದರು. ತಕ್ಷಣವೇ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ಭಾರತ ತಂಡದ ಫಿಸಿಯೋ ಮೈದಾನಕ್ಕೆ ಆಗಮಿಸಿ ತಿಲಕ್ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.
Tilak Verma got injured
He is now gone to office field
Rinku Singh is now stand in captain https://t.co/LMv77LaPOg— BackToLobby (@_backtolobby) November 22, 2026
ರಿಂಕು ಸಿಂಗ್ ತಂಡದ ನಾಯಕ
ತಿಲಕ್ ಮೈದಾನದಿಂದ ಹೊರನಡೆದ ಬೆನ್ನಲ್ಲೇ ಉಪನಾಯಕ ರಿಂಕು ಸಿಂಗ್ ತಂಡದ ನಾಯಕತ್ವ ವಹಿಸಿಕೊಂಡರು. ಪಾಕಿಸ್ತಾನದ ಕೊನೆಯ ವಿಕೆಟ್ ಬೀಳುವವರೆಗೂ ತಂಡದ ಪರವಾಗಿ ಎಲ್ಲಾ ನಿರ್ಧಾರಗಳನ್ನು ರಿಂಕು ಅವರೇ ತೆಗೆದುಕೊಂಡರು. ತಿಲಕ್ ಗಾಯಗೊಂಡಿರುವುದು ಭಾರತ ಎ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಒಂದು ವೇಳೆ ವೈದ್ಯಕೀಯ ಪರೀಕ್ಷೆಯಲ್ಲಿ ಕನ್ಕಷನ್ ಇರುವುದು ದೃಢಪಟ್ಟರೆ, ತಿಲಕ್ ಬದಲಿಗೆ ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ತಿಲಕ್ ಅವರ ಮುಂದಿನ ಆರೋಗ್ಯ ವರದಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Source: TV9 Kannada Sports


