
ನವದೆಹಲಿ, ಅಕ್ಟೋಬರ್ 28: ದೀಪಾವಳಿ ಹಬ್ಬದ ಸಮೀಪದಲ್ಲೇ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಸಚಿವ ಸಂಪುಟವು ಭರ್ಜರಿ ಸಿಹಿಸುದ್ದಿ ನೀಡಿದೆ. 2026ರ ಜುಲೈನಿಂದ ಆರಂಭವಾಗಿ ಆರು ತಿಂಗಳ ಅವಧಿಗೆ ಅನ್ವಯವಾಗುವಂತೆ ತುಟ್ಟಿಭತ್ಯೆಯಲ್ಲಿ (DA- Dearness Allowance) ಶೇ. 3ರಷ್ಟು ಹೆಚ್ಚಳ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ಯಾಬಿನೆಟ್ ಸಭೆ ಬಳಿಕ ತುಟ್ಟಿಭತ್ಯೆ ಏರಿಕೆಯಾಗಿರುವ ನಿರ್ಧಾರವನ್ನು ಘೋಷಿಸಿದರು.
ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ನೌಕರರ ತುಟ್ಟಿಭತ್ಯೆಯು ಮೂಲ ವೇತನದ (Basic Pay) ಶೇ. 60ರಿಂದ ಶೇ. 63ಕ್ಕೆ ಏರಿಕೆಯಾಗಿದೆ. ಇದೇ ರೀತಿ ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿ ಪರಿಹಾರದಲ್ಲೂ (DR – Dearness Relief) ಅನುರೂಪವಾದ ಹೆಚ್ಚಳವಾಗಲಿದೆ. ಈ ತುಟ್ಟಿಭತ್ಯೆ ಏರಿಕೆಯಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 10,016 ಕೋಟಿ ರೂ ವ್ಯಯವಾಗಲಿದೆ.
ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜುಲೈ 1ರಿಂದ ಜಾರಿಗೆ ಬರುವಂತೆ ಅನ್ವಯಿಸಲಿದೆ. ನವೆಂಬರ್ನಲ್ಲಿ ಸಿಗುವ ಅಕ್ಟೋಬರ್ ತಿಂಗಳ ಸಂಬಳದಲ್ಲಿ ಅರಿಯರ್ಸ್ ಸಮೇತ ತುಟ್ಟಿಭತ್ಯೆ ಹಣ ಸಿಗಲಿದೆ. ಅಂದರೆ, ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್, ಈ ನಾಲ್ಕು ತಿಂಗಳಿಗೆ ಹೊಸ ತುಟ್ಟಿಭತ್ಯೆ ದರ ಅನ್ವಯ ಆಗಲಿದೆ. ಇದು ಮುಂದಿನ ತುಟ್ಟಿಭತ್ಯೆ ಏರಿಕೆಯವರೆಗೂ ಮುಂದುವರಿಯುತ್ತದೆ. ಇದರಿಂದ ದೇಶಾದ್ಯಂತ ಇರುವ ಕೋಟ್ಯಂತರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ನೆಮ್ಮದಿ ಸಿಗಲಿದೆ.
ಇದನ್ನೂ ಓದಿ: ನವೆಂಬರ್ ತಿಂಗಳಲ್ಲಿ ದೀಪಾವಳಿ, ಕನಕದಾಸ ಜಯಂತಿ ಇತ್ಯಾದಿ ಹಬ್ಬ ಹರಿದಿನ; 15 ದಿನಗಳವರೆಗೆ ಬ್ಯಾಂಕ್ ರಜೆ
ಸಂಬಳದ ಜೊತೆಗೆ ತುಟ್ಟಿಭತ್ಯೆ ಯಾಕೆ?
ಕಾರ್ಮಿಕರಿಗೆ ಅವರ ಅನುಭವ ಹಾಗೂ ಕ್ಷಮತೆ ಏರಿಕೆಗೆ ಪ್ರತಿಯಾಗಿ ಸಂಬಳ ಹೆಚ್ಚಿಸಲಾಗುತ್ತದೆ. ಆದರೆ, ಹಣದುಬ್ಬರದ ಪರಿಣಾಮವಾಗಿ ಸಂಬಳದ ಹಣದ ಖರೀದಿ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಈ ಹಣದುಬ್ಬರದ ಪ್ರಭಾವ ತಗ್ಗಿಸಲು ಸರ್ಕಾರಿ ನೌಕರರಿಗೆ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ನೀಡಲಾಗುತ್ತದೆ. ಹಣದುಬ್ಬರ ದರದ ಆಧಾರದ ಮೇಲೆ ತುಟ್ಟಿಭತ್ಯೆ ಎಷ್ಟು ಏರಿಸಬೇಕೆಂದು ನಿರ್ಧರಿಸಲಾಗುತ್ತದೆ. ಜನವರಿಯಿಂದ ಜೂನ್ವರೆಗೆ ಮತ್ತು ಜುಲೈನಿಂದ ಡಿಸೆಂಬರ್ವರೆಗೆ ಹೀಗೆ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ಪರಿಷ್ಕರಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Source: TV9 Kannada Business
